ಗದಗ: ಘಟಕ ಹಾಗೂ ವಿಭಾಗೀಯ ಕಾರ್ಯಗಾರಕ್ಕೆ ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಎಂ.ಪ್ರಿಯಾಂಗಾ ಅವರು ಗುರುವಾರದಂದು ಭೇಟಿ ನೀಡಿದರು.
ಅಲ್ಲಿನ ವಾಹನಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಶಕ್ತಿ ಯೋಜನೆಯಿಂದಾಗಿ ಹಾಗೂ ಶಾಲಾ-ಕಾಲೇಜುಗಳು ಪ್ರಾರಂಭವಾಗುತ್ತಿರುವದರಿಂದ ಬಸ್ಸಿನಲ್ಲಿ ಪ್ರಯಾಣಿಕರ ಜನದಟ್ಟಣೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಸಮರ್ಪಕ ಕಾರ್ಯಾಚರಣೆ ಮಾಡುವಂತೆ ಎಲ್ಲ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.
ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಯಾವುದೇ ವಾಹನ ಮೇಲ್ಛಾವಣೆ ಸೋರಿಕೆಯಾಗದಂತೆ, ಕಿಟಕಿಯ ಗ್ಲಾಸಗಳನ್ನು, ವಾಹನಗಳ ವೈಪರ್ಗಳನ್ನು, ಹೆಡ್ಲೈಟಗಳನ್ನು, ಪ್ರಯಾಣಿಕರ ಬಾಗಿಲುಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಯಾಣಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ವೇಳೆಗೆ ಸರಿಯಾಗಿ ವಾಹನಗಳನ್ನು ಕಾರ್ಯಾಚರಣೆ ಮಾಡಲು ಹಾಗೂ ಯಾವುದೇ ದೂರುಗಳು ಬಾರದಂತೆ ಕ್ರಮವಹಿಸಲು ಸೂಚಿಸಿದರು.