ಜಿಲ್ಲೆ

ಶರೀಫ ಮತ್ತು ಕಬೀರ ಕಾವ್ಯ ಸಾಮ್ಯತೆ ಉಪನ್ಯಾಸ: ಸುಮನ ಕುಲಕರ್ಣಿ ಅಭಿಪ್ರಾಯ

Gadag - Shivanand Hiremath

ಗದಗ: ಸಂತ ಕಬೀರ ಹಾಗೂ ಶರೀಫರ ಬೋಧನೆಗಳು ಆಧ್ಯಾತ್ಮಿಕತೆಯ ಮಹತ್ವವನ್ನು ಎತ್ತಿ ತೋರಿಸುತ್ತವೆ. ಬದುಕಿನ ಕಾಲದಲ್ಲಿ ಶತಮಾನಗಳ ವ್ಯತ್ಯಾಸವಿದ್ದರೂ ವಿಚಾರಗಳಲ್ಲಿ ಸಾಮ್ಯತೆಯನ್ನು ಗುರುತಿಸಬಹುದಾಗಿದೆ. ಗುರುವಿನ ಮಾರ್ಗದರ್ಶನದಲ್ಲಿ ಅಂತರAಗ ಶೋಧನೆಯ ಮೂಲಕ ಔನ್ನತ್ಯವನ್ನು ಸಾಧಿಸುವ ಮಾರ್ಗವನ್ನು ತೋರಿದ್ದಾರೆ ಎಂದು ಉಪನ್ಯಾಸಕಿ ಶ್ರೀಮತಿ ಸುಮನ್ ಕುಲಕರ್ಣಿ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗದಿಂದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ ಕ.ಸಾ.ಪ ಕಾರ್ಯಾಲಯದಲ್ಲಿ ಜರುಗಿದ ಸಂತ ಶಿಶುನಾಳ ಶರೀಫರು ಮತ್ತು ಸಂತ ಕಬೀರರ ಕಾವ್ಯ ಸಾಮ್ಯತೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಇರ್ವರ ಬೋಧನೆಗಳು ನಿರಾಕಾರ ದೇವರ ಪರಿಕಲ್ಪನೆಯ ಸುತ್ತ ಸುತ್ತುತ್ತವೆ. ಸಾಂಪ್ರದಾಯಿಕ ಆಚರಣೆಗಳನ್ನು ತಿರಸ್ಕರಿಸಿದರು. ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಕಬೀರ ಮತ್ತು ಶರೀಫರು ಭಕ್ತಿ, ಪ್ರೀತಿ ಮತ್ತು ಧ್ಯಾನದ ಮಹತ್ವವನ್ನು ಒತ್ತಿ ಹೇಳಿದರು. ಪ್ರತಿಯೊಬ್ಬ ಮನುಷ್ಯನು ದೈವಿಕತೆಯ ಕಿಡಿಯನ್ನು ಹೊಂದಿದ್ದಾನೆ. ಅದರೊಂದಿಗೆ ಸಂಪರ್ಕ ಸಾಧಿಸಲು ಶ್ರಮಿಸಬೇಕು ಎಂದು ಅವರು ನಂಬಿದ್ದರು. ಅವರು ಜಾತಿ ವ್ಯವಸ್ಥೆ ಸಾಮಾಜಿಕ ಅಸಮಾನತೆಯನ್ನು ಟೀಕಿಸಿದರು. ಎಲ್ಲಾ ಮಾನವರ ಸಮಾನತೆಗೆ ಒತ್ತು ನೀಡಿದರು. ಇವರ ಬೋಧನೆಗಳು ಪ್ರೀತಿ ಭಕ್ತಿ ಮತ್ತು ಸಾರ್ವತ್ರಿಕ ಸಹೋದರತ್ವದ ಮನೋಭಾವವನ್ನು ಒಳಗೊಂಡಿವೆ.

ಹೊಸಗನ್ನಡ ಅರುಣೋದಯ ಸಾಹಿತ್ಯದ ಮುಂಬೆಳಗಿನ ಕಾಲದಲ್ಲಿ ತಮ್ಮ ಅನುಭಾವ ಕಾವ್ಯದ ಹೊಂಗಿರಣವೊAದನ್ನು ಹರಿಸಿದ ಪ್ರಸಿದ್ಧ ಅನುಭಾವಿ ಕವಿ ಸಂತ ಶರೀಫರಾಗಿದ್ದಾರೆ. ಗುರು ಗೋವಿಂದಭಟ್ಟರನ್ನು ಆಧ್ಯಾತ್ಮದ ಗುರುಗಳನ್ನಾಗಿ ಮಾಡಿಕೊಂಡು ಕನ್ನಡ ಸಂಸ್ಕೃತಿಯ ಸರ್ವಧರ್ಮ ಸಹಿಷ್ಣುತಾಭಾವ ಮತ್ತು ಆಧ್ಯಾತ್ಮಿಕ ಪರಂಪರೆಯ ಸಮನ್ವಯ ಅನುಭಾವ ಸಂಪತ್ತನ್ನು ಅರಗಿಸಿಕೊಂಡು ರಚಿಸಿದ ಅನುಭವ ಪದಗಳು ಆಪ್ತವಾದ ಕಳಕಳಿಗೆ ನೆಲೆಯಾಗಿವೆ. ಹಳ್ಳಿಯ ಬಾಳಿನ ದಿನದಿನದ ಬದುಕಿನ ತಮ್ಮ ಕಣ್ಮನ ಸೆಳೆದ ಒಂದೊAದು ಸನ್ನಿವೇಶ ಸಂಗತಿಗಳನ್ನು ರೂಪಕವಾಗಿ ದೃಷ್ಟಾಂತವಾಗಿ, ಪ್ರತಿಮೆಯಾಗಿ ಮಾಡಿಕೊಂಡು ತಮ್ಮ ಅನುಭವದ ಬೆಳಕು ಮತ್ತು ಅನುಭಾವದ ಬೆಳಗನ್ನು ವರ್ಣಮಯವಾಗಿ ಹೇಳಿ ಹಿಂದೂ ಮುಸ್ಲಿಂ ಸಾಮರಸ್ಯದ ತಾತ್ವಿಕ ಭೂಮಿಕೆಯನ್ನು ಪಸರಿಸಿದ ಮಹಾಸಂತ ವ್ಯಷ್ಠಿಯಿಂದ ಸಮಷ್ಠಿ ಬಾಳುವೆಯ ಮಹಾತತ್ವವನ್ನು ಸಾರುತ್ತ ‘ಬೋಧವೊಂದೇ ಬ್ರಹ್ಮನಾದ ಒಂದೇ’ ಎಂಬ ತತ್ವ ಸಾರಿದ್ದಾರೆ.
ಶ್ರೀಮತಿ ರತ್ನಾ ಪುರಂತರ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿ ವಾರದ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ನಡೆದುಕೊಂಡು ಬರುತ್ತಿವೆ. ಹೀಗೇಯೇ ನಿರಂತರತೆಯನ್ನು ಕಾಯ್ದುಕೊಂಡು ಸಾಹಿತ್ಯಪ್ರೇಮಿಗಳಿಗೆ ರಸಾನಂದವನ್ನು ಉಣಬಡಿಸುತ್ತಿರುವ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿಯೇ ಮಾದರಿಯಾಗಿದೆ. ತಮ್ಮ ತಂದೆಯವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸುವದಾಗಿ ಘೋಷಿಸಿದರು.
ವಿವೇಕಾನಂದಗೌಡ ಪಾಟೀಲ, ಶ್ರೀಕಾಂತ ಬಡ್ಡೂರ ಡಿ ಎಸ್ ಬಾಪೂರಿ ಉಪಸ್ಥಿತರಿದ್ದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು ಶಿವಾನಂದ ಗಿಡ್ನಂದಿ ವಂದಿಸಿದರು. ಡಾ.ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕೆ.ಎಚ್.ಬೇಲೂರ, ವಿ.ಎಸ್ ದಲಾಲಿ, ಶೇ. ಶಿ. ಕಳಸಾಪುರ, ಜಿ.ಎ. ಪಾಟೀಲ ಡಾ. ಆರ್.ಎನ್ ಗೋಡಬೋಲೆ ಸುರೇಶ ಕುಂಬಾರ ಉಪಸ್ಥಿತರಿದ್ದರು.