ಐತಿಹಾಸಿಕ, ಅರ್ಥಪೂರ್ಣ ಕರ್ನಾಟಕ ಸಂಭ್ರಮ ಸಮಾರಂಭ : ಸಚಿವ ಎಚ್.ಕೆ.ಪಾಟೀಲ
ಗದಗ: ಹುಯಿಲಗೋಳ ನಾರಾಯಣರ ಉದಯವಾಗಲಿ ಚಲುವ ಕನ್ನಡ ನಾಡು ಗೀತೆಯು ಕರ್ನಾಟಕ ಏಕೀಕರಣಕ್ಕೆ ಸ್ಪೂರ್ತಿ ಗೀತೆಯಾಗಿತ್ತು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಲ್ಲಿ ರವಿವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಕರ್ನಾಟಕ ಸಂಭ್ರಮ ಸಮಾರೋಪ ನಿಮಿತ್ಯ ಸಂಗೀತ ಕಚೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಳಗಾವಿಯಲ್ಲಿ 1924 ಡಿಸೆಂಬರ್ 26 ರಂದು ಮಹಾತ್ಮ ಗಾಂಧೀಜಿಯವರು ಎಐಸಿಸಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗಂಗೂಬಾಯಿ ಹಾನಗಲ್ ಅವರು ಉದಯವಾಗಲಿ ಚಲುವ ಕನ್ನಡ ನಾಡು ಗೀತೆಯನ್ನು ಹಾಡಿದ್ದರು ಎಂಬುದು ನಮ್ಮೇಲ್ಲರಿಗೂ ಅಭಿಮಾನ ಹೆಮ್ಮೆ ಎಂದರು.
ಗದುಗಿನ ಇತಿಹಾಸದಲ್ಲಿ ಕರ್ನಾಟಕ ಸಂಭ್ರಮ-50 ಐತಿಹಾಸಿಕ ಮೈಲಿಗಲ್ಲು. ಕನ್ನಡ ಭಾಷೆಯನ್ನಾಡುವ ಕನ್ನಡಿಗರು ಒಂದೇ ರಾಜ್ಯದ ಆಳ್ವಿಕೆಯಲ್ಲಿ ಒಂದಾಗಬೇಕು ಎನ್ನುವ ಆಶಯದಂತೆ ನವಂಬರ್-1, 1956 ರಂದು ಕರ್ನಾಟಕ ಏಕೀಕರಣವಾಯಿತು. ಗದುಗಿನ ಕಾಟನ್ ಸೇಲ್ ಸೊಸೈಟಿಯಲ್ಲಿ ದಿನಾಂಕ: 27, 28 ಮತ್ತು 29ರ ಡಿಸೆಂಬರ್ 1961 ರಲ್ಲಿ ಜರುಗಿದ 43ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಕೆ. ಜಿ. ಕುಂದಣಗಾರ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾದ ಕೆ. ಎಚ್. ಪಾಟೀಲ ಅವರ ಆಶಯದಂತೆ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣವಾಗಲಿ ಎಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಂತರ ಹೋರಾಟದ ಫಲವಾಗಿ 1973 ನವಂಬರ್ 01 ರಂದು ಮೈಸೂರು ರಾಜ್ಯ 'ಕರ್ನಾಟಕ' ಎಂದು ನಾಮಕರಣವಾಯಿತು ಎಂದು ತಿಳಿಸಿದರು.
ನಾಮಕರಣ ಕರ್ನಾಟಕ ಸಂಭ್ರಮಾಚರಣೆಯನ್ನು ಗದುಗಿನಲ್ಲಿ 1973ರ ನವಂಬರ್-03 ರಂದು ಹಂಪೆಯ ವಿರುಪಾಕ್ಷೇಶ್ವರ ದೇವಾಲಯದಲ್ಲಿ ಪ್ರಜ್ವಲಿಸಿದ ಕನ್ನಡ ಜ್ಯೋತಿಯನ್ನು ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಸ್ವೀಕರಿಸಿದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ, ಮೈಸೂರಿನ ಅರಸರಾದ ಜಯಚಾಮರಾಜೇಂದ್ರ ಒಡೆಯರ ಹಾಗೂ ಅರಣ್ಯ ಮತ್ತು ಕೃಷಿ ಸಚಿವರಾದ ಕೆ. ಎಚ್. ಪಾಟೀಲ, ಪೌರಾಡಳಿತ ಸಚಿವರಾದ ಡಿ. ಕೆ. ನಾಯ್ಕರ, ಕನ್ನಡ ಮತ್ತು ಸಂಸ್ಕöÈತಿ ಸಚಿವರಾದ ದೇವೇಂದ್ರಪ್ಪ ಗಾಳಪ್ಪ ಹಾಗೂ ಕನ್ನಡಾಭಿಮಾನಿಗಳು ವೀರನಾರಾಯಣ ದೇವಸ್ಥಾನದಿಂದ ಕಾಟನ್ ಸೇಲ್ ಸೊಸೈಟಿಯವರೆಗೆ ಮೆರವಣಿಗೆ ಮೂಲಕ ಬಂದು ಸಾರ್ವಜನಿಕ ಸಭೆ ನಡೆಸಿ ಕರ್ನಾಟಕ ನಾಮಕರಣ ಮಹೋತ್ಸವವನ್ನು ಸಂಭ್ರಮಿಸಿದ್ದು ಇತಿಹಾಸದಲ್ಲಿ ದಾಖಲಾರ್ಹ ಎಂದು ನುಡಿದರು.
1973 ನವಂಬರ್ 01, 02 ಮತ್ತು 03 ರಂದು ಜರುಗಿದ ಕರ್ನಾಟಕ ನಾಮಕರಣ ಮಹೋತ್ಸವವನ್ನು ಮರುಸೃಷ್ಟಿಸಿ, 2023ರ ನವಂಬರ್ 01, 02 ಮತ್ತು 03 ರಂದು ಮೂರು ದಿನಗಳ ಕಾಲ ಗದಗನಲ್ಲಿ ಗತವೈಭವ ಮರುಕಳಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವೆಲ್ಲ ಸಾಕ್ಷಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಸಚಿವ ಸಂಪುಟದ 20ಕ್ಕೂ ಹೆಚ್ಚು ಸಚಿವರು ಕನ್ನಡಾಭಿಮಾನಿಗಳು ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಮಕರಣ ಮಹೋತ್ಸವದ ಇತಿಹಾಸವನ್ನು ಮೆಲುಕು ಹಾಕಿದರು. ಇಂದು 'ಕರ್ನಾಟಕ ಸಂಭ್ರಮ- 50' ಒಂದು ವರ್ಷದ ಸಂಭ್ರಮಾಚರಣೆಯ ಸಮಾರೋಪ ಸಮಾರಂಭವಾಗಿದ್ದು, ಕನ್ನಡ ನಾಡು-ನುಡಿಯ ಅಭಿಮಾನ ಬೆಳೆಸಲು ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭ ಔಚಿತ್ಯಪೂರ್ಣವಾಗಿದೆ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಲಕ್ಕುಂಡಿಯಲ್ಲಿನ 20 ದೇವಸ್ಥಾನಗಳನ್ನು ಸರ್ಕಾರ ಗುರುತಿಸಿ ಸಂರಕ್ಷಣೆಗೆ ಮುಂದಾಗಲಿದೆ ಈ ಮೂಲಕ ನಮ್ಮ ಐತಿಹಾಸಿಕ ಸ್ಮಾರಕಗಳು ಹಾಗೂ ಪರಂಪರೆಯನ್ನು ಯುವ ಜನತೆಗೆ ಪರಿಯಚಿಸುವ, ತಿಳಿಸಿಕೊಡುವ ಪ್ರಯತ್ನಸಾಗಿದೆ ಎಂದರು.
ಖ್ಯಾತ ಗಾಯಕರಾದ ಶ್ರೀಮತಿ ಉಷಾ ಕಾರಂತ, ನಾಗರಾಜ್ ಹಿರೇಕೊಳಚಿ ಹಾಗೂ ಸಂಗಮೇಶ್ ಕಲಬುರ್ಗಿ ಅವರುಗಳು ಸಂಗೀತ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಸರ್ಕಾರಿ ಮುಖ್ಯ ಸಚೇತಕ ಹಾಗೂ ಶಾಸಕ ಸಲೀಂ ಅಮ್ಮದ್, ಮಾಜಿ ಸಂಸದ ಐಜಿ ಸನದಿ, ಮಾಜಿ ಶಾಸಕರಾದ ಡಿ ಆರ್ ಪಾಟೀಲ, ಗುರಣ್ಣ ಬಳಗಾನೂರ, ಎಂ ಸಿ ಶೇಖ, ರವಿ ಮೂಲಿಮನಿ, ವೀರನಾರಾಯಣ ತ್ರಿಕೋಟೇಶ್ವರ ದೇವಸ್ಥಾನ ಹಾಗೂ ಜುಮ್ಮಾಮಸಿದಿ ಸಮಿತಿಯ ಅಧ್ಯಕ್ಷರಾದ ಕೆ. ಡಿ ಗೋಡಕಿಂಡಿ, ಕಾರ್ಯದರ್ಶಿ ಆನಂದ್ ಪೋತ್ನಿಸ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿಬಿ ಅಸೋಟಿ, ತಾಲೂಕ ಅಧ್ಯಕ್ಷ ಅಶೋಕ ಮಂದಾಲಿ, ಎಸ್ ಎನ್ ಬಳ್ಳಾರಿ, ಸಿದ್ದು ಪಾಟೀಲ, ಎಂ ಆರ್ ಪಾಟೀಲ, ಪ್ರಭು ಬುರಬುರೆ, ಸುಜಾತ ದೊಡ್ಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ, ಪುರಾತತ್ವ ಇಲಾಖೆ ಆಯುಕ್ತ ದೇವರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.