ಗದಗ: ಕರ್ನಾಟಕ ಏಕೀಕರಣ ಚಳವಳಿಯಿಂದ ಹಿಡಿದು ಕರ್ನಾಟಕ ನಾಮಕರಣವರೆಗೂ ನಡೆದ ಚಟುವಟಿಕೆಯಲ್ಲಿ ಗದಗ ಜಿಲ್ಲೆಯ ಕೊಡುಗೆ ಅವಿಸ್ಮರಣೀಯ ಎಂದು ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಅಭಿಪ್ರಾಯಪಟ್ಟರು.
ನಗರದ ಗಾಂಧಿ ವೃತ್ತದ ಸಮೀಪದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ್ರ ಬಣ)ಯ ಗದಗ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಶನಿವಾರ ಸಂಜೆ ಹಮ್ಮಿಕೊಂಡಿದ್ದ ‘ಗದಗ ಕನ್ನಡೋತ್ಸವ, ಸಾಂಸ್ಕೃತಿಕ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣ ಚಳವಳಿಗೆ ನಾಂದಿ ಹಾಡಿದ ‘ಉದಯವಾಗಲೀ ನಮ್ಮ ಚೆಲುವ ಕನ್ನಡ ನಾಡು’ ಗೀತೆ ಬರೆದ ಹುಯಿಲಗೋಳ ನಾರಾಯಣರಾಯರು, ಚಳವಳಿಯ ಮುಂಚೂಣಿಯಲ್ಲಿದ್ದ ಅಂದಾನೆಪ್ಪ ದೊಡ್ಡಮೇಟಿಯವರು ಗದಗ ಜಿಲ್ಲೆಯವರು. ಸಂಗೀತದಲ್ಲಿ ಭಾರತ ರತ್ನ ಪಡೆದ ಪಂ.ಭೀಮಸೇನ ಜೋಶಿ ಅವರು ಗದಗನವರು. ಕರ್ನಾಟಕ ನಾಮಕರಣಕ್ಕೆ ಬೀಜಾಂಕುರ ಮಾಡಿದ್ದು ಗದಗನವರೇ ಆದ ಕೆ.ಎಚ್. ಪಾಟೀಲರು. ಅಷ್ಟೇ ಏಕೆ, ಕನ್ನಡ ಭಾಷೆಗೆ ಸಂಬAಧಿಸಿದAತೆ ಗೋಕಾಕ ಚಳವಳಿಗೆ ಬಲ ತುಂಬಿದ ಲಿಂ.ಜ.ಡಾ. ತೋಂಟದ ಸಿದ್ಧಲಿಮಗ ಶ್ರೀಗಳು ಕೂಡ ಗದಗ ನೆಲದವರೇ. ಹೀಗಾಗಿ ಗದಗ ಜಿಲ್ಲೆಯವರು ವಿಶೇಷ ಎಂದು ಹೇಳಿದರು.
ಕನ್ನಡ ಭಾಷಿಕರು ಒಂದಾಗಬೇಕು ಎಂದು ಕರ್ನಾಟಕ ಏಕೀಕರಣ ಮಾಡಿದ ಸತ್ವಯುತ ನೆಲ ನಮ್ಮದು. ಮೈಸೂರು ರಾಜ್ಯದಿಂದ ‘ಕರ್ನಾಟಕ ನಾಮಕರಣ’ ಸಂಭ್ರಮದ ಮೂರು ದಿನಗಳಲ್ಲಿ ಗದಗನಲ್ಲೂ ಒಮದು ದಿನ ನಡೆದಿತ್ತು. ಇದೀಗ ಆ ಸಂಭ್ರಮಕ್ಕೆ 50 ವರ್ಷ ತುಂಬಿದ್ದಕ್ಕೆ ಕಳೆದ ವರ್ಷ ಅದೇ ವೈಭವ ಮರುಕಳಿಸಿತ್ತು. ಕನ್ನಡ ನಾಡು, ನುಡಿಗಾಗಿ ಶ್ರೇಷ್ಠ, ದೊಡ್ಡ ಮೆರವಣಿಗೆ ಗದಗ ನೆಲದಲ್ಲಿ ನಡೆದಿದೆ. ಇದರಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಷ್ಟೇ ಅಲ್ಲ, 22 ಜನ ಮಂತ್ರಿಗಳು ಭಾಗಿಯಾಗಿದ್ದರು. ಇದು ಇತಿಹಾಸ ಎಂದರು.
ಯಲ್ಲಮ್ಮನ ಗುಡ್ಡಕ್ಕೆ 100 ಕೋಟಿ ರೂ. ಅನುದಾನ ಮಂಜೂರು: ಉತ್ತರ ಕರ್ನಾಟಕದ ಧಾರ್ಮಿಕ ಕೇಂದ್ರ, ವಾರ್ಷಿಕ ಯಲ್ಲಮ್ಮನ ಗುಡ್ಡಕ್ಕೆ 1.25 ಕೋಟಿ ಜನ ಭೇಟಿ ನೀಡುತ್ತಾರೆ. ಭರತ್ ಹುಣ್ಣಿಮೆಗೆ 10 ಲಕ್ಷ ಜನ ಭಕ್ತರು ಭೇಟಿ ನೀಡುತ್ತಾರೆ. ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗೆ ರಾಜ್ಯ ಸರ್ಕಾರದ ವತಿಯಿಂದ ಈಗಾಗಲೇ 33 ಕೋಟಿ ರೂ. ಅನುದಾನ ನೀಡಿ, ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದರ ಜತೆಗೆ ನಮ್ಮ ಸತತ ಪ್ರಯತ್ನದಿಂದಾಗಿ ಕೇಂದ್ರ ಸರ್ಕಾರವು 100 ಕೋಟಿ ರೂ. ಅನುದಾನ ಮಜೂರು ಮಾಡಿದೆ.
ಅಲ್ಲಿ ದಾಸೋಹ ಕಟ್ಟಡ, ಎತ್ತು ಕಟ್ಟಿಕೊಂಡು ಚಕ್ಕಡಿಯಲ್ಲಿ ಬರುವ ಭಕ್ತರಿಗಾಗಿ ಎತ್ತುಗಳಿಗಾಗಿ ಹೊಟ್ಟು ಮೇವಿನ ವ್ಯವಸ್ಥೆ ಮಾಡುವ ಬಗ್ಗೆಯೂ ಕೂಡ ಚಿಂತನೆ ನಡೆದಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದರು.
ಪ್ರವಾಸೋದ್ಯಮಕ್ಕೆ ಉತ್ತರ ಕರ್ನಾಟಕದಲ್ಲಿ ಇರುವ ಅವಕಾಶ ಬೇರೆಲ್ಲೂ ಇಲ್ಲ. ಲಕ್ಕುಂಡಿಯಲ್ಲಿ ನಡೆದ ಪ್ರಾಚ್ಯಾವಶೇಷಗಳ ಅಭಿಯಾನದ ವೇಳೆ ಮಾಡಿಕೊಂಡ ಮನವಿಗೆ ಅಲ್ಲಿನ ಜನ ಉತ್ತಮವಾಗಿ ಸ್ಪಂದಿಸಿ, 1200 ಪ್ರಾಚ್ಯಾವಶೇಷಗಳನ್ನು ನೀಡಿದ್ದಾರೆ. 300 ಕ್ಕೂ ಹೆಚ್ಚು ನಾಣ್ಯ ಲಭಿಸಿವೆ ಎಮದು ಹೇಳಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ರೋಣ ಮತಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ ಅವರು ಮಾತನಾಡಿ, ರಾಜ್ಯದ ನೆಲ, ಜಲ ವಿಷಯಕ್ಕೆ ಸಂಬAಧಿಸಿದAತೆ ಮೊದಲು ಧ್ವನಿ ಎತ್ತುವುದೇ ಕರವೇ. ಆ ಧ್ವನಿ ಎಂದಿಗೂ ಕುಗ್ಗಬಾರದು ಎಂದ ಅವರು, ಅದರಲ್ಲೂ ಗದಗನಲ್ಲಿ ಎಚ್.ಎಸ್. ಸೋಂಪೂರ ಅವರು ಕರವೇ ಹೋರಾಟದಲ್ಲಿ ಒಂದು ಛಾಪನ್ನೇ ಮೂಡಿಸಿದ್ದಾರೆ.
ನಾವೆಲ್ಲ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತುತ್ತೇವೆ. 2013-18 ರ ಅವಧಿಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಚಾಲನೆ ನೀಡುವುದರ ಜತೆಗೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಕೂಡಲ ಆರಂಭಿಸಲಾಗಿತ್ತು. ಅಭಿವೃದ್ಧಿ ಕೆಲಸಗಳನ್ನೂ ಹೋರಾಟಗಾರರು ಪ್ರಶಂಸಿಸಬೇಕು ಎಂದರು.
ಪ್ರವಾಸೋದ್ಯಮದಲ್ಲಿ ವಿಶೇಷ ಆಸಕ್ತಿಯಿಂದ ಇಲಾಖೆಗೆ ಒಂದು ವಿಶೇಷ ಮೆರುಗು ನೀಡುತ್ತಿರುವ ಸಚಿವ ಎಚ್.ಕೆ. ಪಾಟೀಲ ಅವರು, ರಾಜ್ಯದ ಯಲ್ಲಮ್ಮನಗುಡ್ಡಕ್ಕೆ ಹೊಸ ರೂಪ ನೀಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಅದರೊಂದಿಗೆ ಲಕ್ಕುಂಡಿಯಲ್ಲಿ ಸಹ ಶೀಘ್ರದಲ್ಲೇ ವಿಶೇಷ ಮೆರುಗು ಸಿಗಲಿದೆ ಎಂದು ಹೇಳಿದರು.
ಸಾನಿಧ್ಯವಹಿಸಿದ್ದ ತೋಂಟದಾರ್ಯ ಸಂಸ್ಥಾನಮಠದ ಜ.ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಮನ ತಣಿಸುವ ಅಮೃತ ಕನ್ನಡ ಭಾಷೆಯಲ್ಲಿ ಇದೆ. ಕನ್ನಡ ಭಾಷೆ ಬಗ್ಗೆ ತಾಯಿಯಷ್ಟೇ ಅಭಿಮಾನ ಇರಬೇಕು, ಗೌರವ ಇರಬೇಕು. ತಾಯಿ ನಿರ್ಲಕ್ಷಿಸಿದರೆ ಸೊರಗಿ, ಸಾಯುತ್ತಾಳೆ ಎಂದರು.
ಎAಟು ಜ್ಞಾನಪೀಠ ಪ್ರಶಸ್ತಿ ಪಡೆದದ್ದು ಕನ್ನಡದಲ್ಲಿ ಮಾತ್ರ. ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಮಕ್ಕಳ ಬೌದ್ಧಿಕ ವಿಕಾಸಕ್ಕೆ ಮಾತೃಭಾಷೆ ಮುಖ್ಯ. ಇಂಗ್ಲಿಷ್ ವ್ಯಾಮೋಹದಲ್ಲಿ ಜನ ಮುಳಗಿದ್ದು, ಇಂಗ್ಲೀಷ ಕಂಠಪಾಠಕ್ಕೆ ಸೀಮಿತವಾಗಿರುತ್ತದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆ ರೋಣ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ರೋಣ ಪುರಸಭೆ ಸದಸ್ಯ ಮಿಥುನ ಜಿ. ಪಾಟೀಲ ಅವರು ಮಾತನಾಡಿ, ಕರವೇ ನೇತೃತ್ವದಲ್ಲಿ ಸಂಘಟಿತರಾಗಿ ಕನ್ನಡ ಬೆಳವಣಿಗೆಗೆ ಕೈಜೋಡಿಸಬೇಕು ಎಂದರು.
ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯ ಉಪಾಧ್ಯಕ್ಷ ಹಾಗೂ ನ್ಯಾಯವಾದಿ ಹೆಚ್.ಎಸ್. ಸೋಂಪೂರ ಅವರು ಮಾತನಾಡಿ, ತಾಯಿ ಭುವನೇಶ್ವರಿ ಮೂಲ ಚಿತ್ರ ಪರಿಕಲ್ಪನೆ, ಅದನ್ನು ರಚಿಸಿದ್ದು ಗದಗನವರು. ಮುಂಬೈ ವಿಧಾನಸಭೆಯಲ್ಲಿ ಕನ್ನಡ ಕಂಪು ಹರಡಿದ ಕೀರ್ತಿ ಅಂದಾನೆಪ್ಪ ದೊಡ್ಡಮೇಟಿ ಅವರಿಗೆ ಸಲ್ಲುತ್ತದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣದಲ್ಲಿ ಗದಗ ನೆಲವೇ ಬೀಜ ಬಿತ್ತಿದ್ದು. ಇದಕ್ಕೆ ಕೆ.ಎಚ್. ಪಾಟೀಲರೇ ಕಾರಣ ಎಂದರು.
ಕನ್ನಡಕ್ಕೆ ಲಿಪಿಗಳ ರಾಣಿ ಎಂಬ ಪ್ರತೀತಿ ಇದೆ. ಕನ್ನಡಿಗರು ಹುಲಿಗಳ ಜತೆ ಹೋರಾಡುತ್ತಾರೆ. ನೀರು ಕೇಳಿದರೆ ಮಜ್ಜಿಗೆ ನೀಡುವವರು ನಾವು. ಗದಗ ಸರ್ವ ಜನಾಂಗದ ಶಾಂತಿ ನಾಡು ಎಂದರು.
ಉಸಿರು ಫೌಂಡೇಶನ್ ಅಧ್ಯಕ್ಷ ಹಾಗೂ ವಾ.ಕ.ರ.ಸಾರಿಗೆ ಸಂಸ್ಥೆ ಮಾಜಿ ನಿರ್ದೇಶಕ ಶರಣ ಪಾಟೀಲ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎನ್. ಬಳ್ಳಾರಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರವೇ ಗದಗ ಜಿಲ್ಲಾಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ ಅವರು, ಕನ್ನಡವೇ ಜಾತಿ, ಧರ್ಮ ಎಂದು ನಂಬಿರುವ ಕರವೇ ರಾಜ್ಯದ ಪ್ರತಿ ಗ್ರಾಮ ಮಟ್ಟದಲ್ಲಿ ಸಂಘಟನೆ ಇದೆ. ನಾಡು, ನುಡಿಗೆ ಧಕ್ಕೆ ಬಂದಾಗ ತಕ್ಷಣ ಹೋರಾಟ ಮಾಡುವುದು ಕರವೇ ಮಾತ್ರ. ಕನ್ನಡ ನಮಫಲಕ್ಕೆ ಹೋರಾಟ, ರೇಲ್ವೆ ಪರೀಕ್ಷೆ ಕನ್ನಡದಲ್ಲಿ ನಡೆಸುವುದು ಸೇರಿ ಹಲವು ಹೋರಾಟ ಮಾಡಿದ್ದರ ಫಲವೇ ಸರ್ಕಾರಗಳು ಆದೇಶ ಹೊರಡಿಸಿವೆ. ಶಾಸಕ ಜಿ.ಎಸ್. ಪಾಟೀಲ ಅವರ ಒತ್ತಡ ಹಾಗೂ ಸಚಿವರಾದ ಎಚ್.ಕೆ. ಪಾಟೀಲ ಅವರ ಆಸಕ್ತಿಯಿಂದಾಗಿ ಅಂದಾನೆಪ್ಪ ದೊಡ್ಡಮೇಟಿ ಅವರ ಸ್ಮಾರಕ ಅಭಿವೃದ್ಧಿ ಮಾಡುತ್ತಿದ್ದಾರೆ. ಇದರ ಜತೆಗೆ ಕರವೇಯಿಂದ ಗದಗ ಜಿಲ್ಲೆಯಲ್ಲಿ ಉಚಿತ ಸಾಮೂಹಿಕ ವಿವಾಹ, ರಕ್ತದಾನ ಶಿಬಿರದಂತಹ ರಚನಾತ್ಮಕ ಕೆಲಸ ಕೂಡ ಮಾಡುತ್ತಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಮುಳಗುಂದ ಪಟ್ಟಣ ಪಂಚಾಯ್ತಿ ಸದಸ್ಯ ಬಸವರಾಜ ಹಾರೋಗೇರಿ, ಬಸವರಾಜ ಕಡೇಮನಿ, ಹನಮಂತಪ್ಪ ಮೇಟಿ, ಆಶಾ ಜೂಲಗುಡ್ಡ ಸೇರಿ ಹಲವರು ವೇದಿಕೆಯಲ್ಲಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಜಿ.ಬಿ. ಬಿಡಿನಹಾಳ, ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತ ಸುರೇಶ, ಧಾರವಾಡ ವಿವಿಯಿಂದ ಕನ್ನಡ ಎಂ.ಎ. ವಿಭಾಗದಲ್ಲಿ ಚಿನ್ನದ ಪದಕ ಪಡೆದ ಕುಮಾರಿ ಪೂಜಾ, ಸಿ.ಎಸ್. ಪಾಟೀಲ ಶಾಲೆಯ ಶಿಕ್ಷಕ ಶಂಕ್ರಪ್ಪ ಗುಜಮಾಗಡಿ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಕೃಷ್ಣ ಲಮಾಣಿ ಅವರು ಸ್ವಾಗತಿಸಿದರು. ನಿಂಗನಗೌಡ ಮಾಲೀಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ ಸೇರಿ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.