ಗದಗ: ಜಿಲ್ಲೆಯ ಜನರ ಜೀವನಾಡಿ, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕಪ್ಪತ್ತಗುಡ್ಡ ಹೆಸರುವಾಸಿಯಾಗಿದೆ. ಬಯಲುಸಿಮೆಯ ನಾಡಿನ ಜೀವಾಳ ಕಪ್ಪತ್ತಗುಡ್ಡವಾಗಿದ್ದು, ಅದು ಕೇವಲ ಸಸ್ಯಕಾಶಿ ಅಷ್ಟೆ ಅಲ್ಲ. ಈ ಭಾಗದ ಪ್ರಮುಖ ಮಳೆಗಳಿಗೆ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಈ ಕಪ್ಪತಗುಡ್ಡಕ್ಕೆ ದೊಡ್ಡ-ದೊಡ್ಡ ಕಂಪನಿಗಳ ದುಷ್ಟ ಕಣ್ಣು ಬಿದ್ದಿತ್ತು. ಜೊತೆಗೆ ವಿದೇಶದ ಕಂಪನಿಯು ಕೂಡ ಈ ನೆಲಕ್ಕೆ ಬರಲು ತುದಿಗಾಲಲ್ಲಿ ನಿಂತಿತ್ತು. ಆಗ ದೊಡ್ಡ ಹೋರಾಟದ ಫಲವಾಗಿ ಕಪ್ಪತ್ತಗುಡ್ಡವನ್ನು ಉಳಿಸಲಾಗಿತ್ತು. ಈಗ ಮತ್ತೆ ಗಣಿಗಾರಿಕೆಗೆ ಸರ್ಕಾರದಿಂದ ಅನುಮತಿ ನೀಡುವ ಸಾಧ್ಯತೆ ಇದ್ದು, ಅನುಮತಿ ನೀಡಿದ್ರೆ ಹೋರಾಟ ಮಾಡಲಾಗುವುದು ಎಂದು ಸಾಹಿತಿ ಬಸವರಾಜ ಸೂಳಿಭಾವಿ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಹಲವು ಕಂಪನಿಗಳು ಗಣಿಗಾರಿಕೆ ಮಾಡಲು ಸಂಚು ರೂಪಿಸಿದ್ದನ್ನು ನಾವು ಮರೆಯಬಾರದು. 2017ರಲ್ಲಿ ಸರ್ಕಾರ ಕಪ್ಪತ್ತಗುಡ್ಡವನ್ನು ಸಂರಕ್ಷೀತ ಅರಣ್ಯ ಪ್ರದೇಶ ಅಂತ ಘೋಷಣೆ ಮಾಡಿದೆ. ಕತ್ಪತ್ಟಗುಡ್ಡದ 1ಕಿ. ಮಿ. ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಮಾಡಬಾರದು ಅಂತ ನಿಷೇಧ ಮಾಡಿತ್ತು. ನಂತರ ಹಲವು ಕಂಪನಿಗಳು ಹೈಕೊರ್ಟ್ ಮೊರೆ ಹೋದಾಗ ಹೈಕೊರ್ಟ್ ಸರ್ಕಾರದ ಆದೇಶ ಎತ್ತಿ ಹಿಡಿದು ನ್ಯಾಯ ಒದಗಿಸಿಕೊಟ್ಟಿದೆ. ಅಂದು ಕಪ್ಪತ್ತಗುಡ್ಡ ಉಳಿಸುವ ಹೋರಾಟದಲ್ಲಿ ಸಿದ್ದರಾಮಯ್ಯನವರು ಆಗಮಿಸಿ ಬೆಂಬಲಿಸಿದ್ದರು. ಆದರೆ, ಈಗ ಸಿಎಂ ಸ್ಥಾನದಲ್ಲಿರುವ ಸಿದ್ದರಾಮಯ್ಯ ಇದಕ್ಕೆ ಅನುಮತಿ ನೀಡಲು ಹೋರಟಿರುವುದು ಸರಿಯಾದ ಕ್ರಮ ಅಲ್ಲ ಅಂತ ಬೇಸರ ವ್ಯಕ್ತಪಡಿಸಿದರು.
ಏಶಿಯಾ ಖಂಡದಲ್ಲೇ ಅತ್ಯುತ್ತಮ ಹವಾಮಾನ ಇರುವ ಪ್ರದೇಶ ಎನ್ನುವ ಕೀರ್ತಿ ಕಪ್ಪತ್ಟಗುಡ್ಡಕ್ಕೆ ಇದೆ. ಅಲ್ಲಿನ ವಾತಾವರಣದಿಂದ ಗದಗ ಜಿಲ್ಲೆಯಲ್ಲಿ ಉತ್ತಮ ಗಾಳಿ ಬಿಸುತ್ತಿದೆ. ಇಂತಹ ವಾತಾವರಣದಲ್ಲಿ ಗಣಿಗಾರಿಕೆ ನಡೆದರೇ ಕಲುಷಿತ ವಾತಾವರಣ ನಿರ್ಮಾಣವಾಗಿ, ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬಿರುತ್ತದೆ. ಸೋಮವಾರ ವನ್ಯಜೀವಿಗಳ ಮಂಡಳಿಯ ಸಭೆ ನಡೆಯಲಿದೆ. ಆ ಸಭೆಯಲ್ಲಿ ಕಪ್ಪತ್ತಗುಡ್ಡದ ಗಣಿಗಾರಿಕೆ ಪ್ರಸ್ತಾವವನ್ನು ಸಿಎಂ ಸಿದ್ದರಾಮಯ್ಯ ತಿರಸ್ಕರಿಸಬೇಕು. ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡಿದರೇ ನಾವು ದೊಡ್ಡ ಚಳುವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲರು ಕೂಡ ಗಣಿಗಾರಿಕೆ ಪ್ರಸ್ತಾಪವನ್ನು ತಿರಸ್ಕರಿಸುವಂತೆ ಸಿಎಂ ಮೇಲೆ ಒತ್ತಡ ಹೇರಬೇಕು. ರಾಜಕಾರಣದ ಪ್ರಭಾವದಿಂದ ವನ್ಯಜೀವಿ ಮಂಡಳಿ ಸದಸ್ಯರು ಅನುಮತಿ ನೀಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಇದನ್ನು ಅರಿತುಕೊಂಡು 28ಅಂಶಗಳ ಪ್ರಸ್ತಾವವನ್ನು ತಿರಸ್ಕರಿಸಬೇಕು ಎಂದು ಸಾಹಿತಿ ಬಸವರಾಜ ಸೂಳಿಭಾವಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್. ಕೆ ಪಾಟೀಲರಿಗೆ ವಿನಂತಿಸಿದರು.
ಗಣಿಗಾರಿಕೆ ಲಾಬಿಗೆ ಸರ್ಕಾರ ಮಣಿಯಬಾರದು. ಅಪರೂಪದ ಔಷಧಿ ಸಸ್ಯ ಪ್ರಭೇದ ಕಪ್ಪತಗುಡ್ಡದಲ್ಲಿ ಇರುವುದು ಹಲವು ಸಂಶೋಧನೆಗಳಿಂದ ಬಹಿರಂಗವಾಗಿದೆ. ಕುರುಚಲು ಸಸ್ಯಗಳು ಇಲ್ಲಿ ಕಾಣಸಿಗುತ್ತವೆ. ಇವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಶುದ್ದಗಾಳಿ ಸದಾ ಉಳಿಯಬೇಕು ಎನ್ನುವುದಾದರೇ ಕಪ್ಪತ್ತಗುಡ್ಡ ಉಳಿಸುವ ಅವಶ್ಯಕತೆ ಇದ್ದು, ಸಿಎಂ ಸಿದ್ದರಾಮಯ್ಯ ಗಣಿಗಾರಿಕೆ ಪ್ರಸ್ತಾಪವನ್ನು ಸರಾಸಗಟವಾಗಿ ತಿರಸ್ಕರಿಸಬೇಕು. ಆದರೆ, ಅನುಮತಿ ನೀಡಿದರೇ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಚಂದ್ರಕಾಂತ್ ಚೌವ್ಹಾಣ್ , ಜೆ ಬಿ ಪಾಟೀಲ್, ಬಾಲರಾಜ ಅರಬರ, ಶೇಖಣ್ಣ ಕವಳಿಕಾಯಿ, ಶರೀಫ ಬಿಳೆಯಲಿ, ಕಾಶಿನಾಥ ಬಗಲಿ, ಅನಿಲ ಕಾಳೆ, ಪರಶು ಕಾಳೆ, ಬಸವರಾಜ ಬಿಳೆಯಲಿ ಸೇರಿದಂತೆ ಹಲವು ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.