Q 
ಜಿಲ್ಲೆ

ಮಕ್ಕಳ ಮನಸ್ಸು ಹದವಾದ ಭೂಮಿ : ಸುವರ್ಣಾ

Gadag - Shivanand Hiremath

ಗದಗ: ಬೀಜ ಮೊಳೆತು ಫಲವಾಗಿ ಬೆಳೆಯಬೇಕಾದರೆ ಹದವಾದ ಭೂಮಿಯಲ್ಲಿ ನಾವು ಬೀಜವನ್ನು ಬಿತ್ತಬೇಕು ಹಾಗೆಯೇ ಮಕ್ಕಳ ಮನಸ್ಸು ಹದವಾದ, ಫಲವತ್ತಾದ ಭೂಮಿಯಾಗಿದ್ದು ಜ್ಞಾನದ ಬೀಜಗಳನ್ನು ಮೌಲ್ಯಗಳನ್ನು ನಾವು ಬಿತ್ತಿದರೆ ಮಗು ಉತ್ತಮ ಬದುಕನ್ನು ಬೆಳೆಸಿಕೊಳ್ಳಬಲ್ಲ ಅದಕ್ಕಾಗಿ ಶರಣರ ದಾರ್ಶನಿಕರ ವಚನಗಳ ದಾರಿದೀಪ ಎಂದು ಚಿಂತಕಿ ಸುವರ್ಣ ಹೇಳಿದರು.
ಅವರು ಸೋಮವಾರ ಗದಗ ಜಿಲ್ಲಾ ಅಖಿಲ ಭಾರತ ಶರಣ ಸಂಕುಲನದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಗದುಗಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೧೬ ರಲ್ಲಿ ಜರುಗಿದ ಶ್ರಾವಣದ ಅಮೃತ ಭೋಜನ ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೋಂಡು ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಶರಣರು ತಮ್ಮ ವಚನಗಳಲ್ಲಿ ತಿಳಿಸಿದ ಸಂದೇಶಗಳನ್ನು ಮಕ್ಕಳು ಓದಿ ಅರ್ಥೈಸಿಕೊಳ್ಳಬೇಕು ಅಂದಾಗ ಜೀವನದ ಗುರಿ ಮುಟ್ಟಲು ಸಾಧ್ಯ ಎಂದರು.
ಮಕ್ಕಳಿಗೆ ಬಸವಣ್ಣನವರ ವಚನ ಗಾಯನವನ್ನು ಹೇಳಿಸಿದ ಗಾಯಕಿ ಪದ್ಮಾ ಕಬಾಡಿ ಮಾತನಾಡಿ ವಚನಗಾಯನದಲ್ಲಿ ಮಧುರತೆ ಹೆಚ್ಚು. ಮಕ್ಕಳು ಶರಣರ ವಚನಗಳನ್ನು ರಾಗಬದ್ಧವಾಗಿ ಹಾಡುವ ರೂಢಿ ಮಾಡಿದಲ್ಲಿ ಸಂಗೀತದಲ್ಲಿ ಯಶಸ್ಸು ಕಾಣಬಹುದು ಎಂದರು.
ಇನ್ನೋರ್ವ ಮುಖ್ಯ ಅತಿಥಿ ಗದುಗಿನ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರೀಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಸುಜಾತಾ ಪಾಟೀಲ ಮಾತನಾಡಿ ಶಾಲೆ ಬಿಟ್ಟ ಮಕ್ಕಳು ಕಂಡು ಬಂದಲ್ಲಿ ಅವರನ್ನು ಶಾಲೆಗೆ ದಾಖಲಿಸಿಕೊಳ್ಳಬೇಕು ಅವರಿಗೆ ಹಾಸ್ಟೇಲ್ ವ್ಯವಸ್ಥೆಯನ್ನು ಕಲ್ಪಿಸುವ ಅವಕಾಶವಿದ್ದು ಮಕ್ಕಳು ಅವಶ್ಯಕತೆ ಇದ್ದರೆ ಹಾಸ್ಟೇಲ್ ಸೇವೆ ಬಳಸಿಕೊಂಡು ಓದು ಮುಂದುವರೆಸಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಎಂ.ಆರ್.ನೀಲಣ್ಣವರ ಮಾತನಾಡಿ ಸರ್ಕಾರಿ ಶಾಲೆಗಳ ಮಕ್ಕಳು ಪ್ರತಿಭಾನ್ವಿತರಾಗಿದ್ದು ಪ್ರತಿಭೆಗೆ ಪ್ರೋತ್ಸಾಹ ನೀಡುವಲ್ಲಿ ಕದಳಿಶ್ರೀ ವೇದಿಕೆಯವರು ಶಾಲೆಗಳಿಗೆ ಆಗಮಿಸಿ ಸಿಹಿಭೋಜನದೊಂದಿಗೆ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ಶ್ರೀಮತಿ ಕವಿತಾ ಕಲ್ಮನಿ ಪ್ರಾರ್ಥಿಸಿದರು ಶ್ರೀಮತಿ ಕೆ.ಎಸ್.ಬೇಲೇರಿ ಸ್ವಾಗತಿಸಿದರು, ಶ್ರೀಮತಿ ಎಸ್.ವೈ.ಮರಕುಂಬಿ ನಿರೂಪಿಸಿ ವಂದಿಸಿದರು. ಯಲ್ಲಮ್ಮ ಡೊಳ್ಳಿನವರ, ಜಾಹೀದಾಬೇಗಂ ತಹಶೀಲ್ದಾರ, ರೇಣುಕಾ ಸೋಮಣ್ಣವರ, ಸಾಹೀರಾಭಾನು ಶಹಪೂರ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿದ್ದರು.