ವಿಜಯವಾಣಿ ಸುದ್ದಿಜಾಲ ಗದಗ
ಕನಕದಾಸರು ಪ್ರತಿಪಾದಿಸಿರುವ ಜೀವನ ಮೌಲ್ಯಗಳು ನಿಸ್ವಾರ್ಥ ಜೀವನಕ್ಕೆ ದಾರಿ ದೀಪವಾಗಿವೆ. ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಜೆ.ಟಿ ಪಿಯು ಕಾಲೇಜಿನ ಉಪನ್ಯಾಸಕ ಸಿ. ಆರ್. ನಾಗಭೂಷಣ ಹೇಳಿದರು.
ನಗರದ ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದಾಸಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರು ತಮ್ಮ ಬಾಲ್ಯ ಜೀವನದಿಂದಲೇ ಹಲವು ವಿದ್ಯೆಗಳಲ್ಲಿ ಪಾರಂಗತರಾಗಿದ್ದರು. ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದರು. ವೀರನಾಗಿದ್ದ ಕನಕದಾಸರು ವಿರಾಗಿಯಾಗಿ ಪರಿವರ್ತನೆ ಆಗಲು ಯುದ್ಧವು ಕಾರಣವಾಯಿತು. ನಂತರ ಭಗವಂತ ಹರಿಯನ್ನು ಕೊಂಡಾಡುತ್ತಾ ಸಾಹಿತ್ಯ ರಚನೆಯಲ್ಲಿ ತೋಡಗಿಕೊಂಡರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ. ಕೀರ್ತನೆಗಳಲ್ಲಿ ಕೃಷ್ಣನ ಲೀಲೆಗಳನ್ನು, ಸಾಮಾಜಿಕ ಸಮಾನತೆಯನ್ನು, ಭಕ್ತಿಯ ಸ್ವರೂಪವನ್ನು ಪ್ರತಿಪಾದಿಸಿದ್ದಾರೆ. ಸಾಮಾಜಿಕ ಶೋಷಣೆಯ ಸ್ಥಿತಿಗೆ ಮೂಲವಾದ ಜಾತಿ ವ್ಯವಸ್ಥೆಯನ್ನು ನಿರ್ನಾಮ ಮಾಡುವ ಅವಶ್ಯಕತೆಯನ್ನು ಅವರು ಪ್ರತಿಪಾದಿಸಿ ಜನಸಾಮಾನ್ಯರಿಗೆ ಆಶಾಕಿರಣವಾದರು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪಿ. ಜಿ. ಪಾಟೀಲ ಮಾತನಾಡಿ, ದಾಸಶ್ರೇಷ್ಠರು ಬಾಳಿದ ನಿಸ್ವಾರ್ಥ ಜೀವನದ ನೆಲೆಗಳನ್ನು ಅರಿತುಕೊಳ್ಳಬೇಕು. ಜ್ಞಾನವನ್ನು ತಿಳಿದುಕೊಳ್ಳುವುದಷ್ಟೇ ಮುಖ್ಯವಲ್ಲ. ಅದನ್ನು ನಾವು ಹೇಗೆ ಅಳವಡಿಸಿಕೊಂಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ನಮ್ಮ ಮಕ್ಕಳಿಗೆ ದಾಸ ಪರಂಪರೆಯ ಬಗ್ಗೆ, ದಾಸ ಸಾಹಿತ್ಯದ ಬಗ್ಗೆ ಅರಿವನ್ನು ಮೂಡಿಸಬೇಕು. ಮನುಷ್ಯ ತನ್ನ ಜೀವನದ ನಿಜವಾದ ಗುರಿಯನ್ನು ಅರಿತು ಸಾಗಬೇಕು ಎಂದರು.
ಡಾ. ನಾಗರಾಜ ಬಳಿಗೇರ ಮಾತನಾಡಿ, ಜಯಂತಿಗಳು ಕೇವಲ ಆಡಂಬರಕ್ಕೆ, ತೋರಿಕೆಗೆ ಮಾಡದೆ ಅವುಗಳನ್ನು ಮಹಾನ್ ವ್ಯಕ್ತಿಗಳ ಜೀವನ- ಸಾಧನೆ ಬಗ್ಗೆ ತಿಳಿದುಕೊಳ್ಳುವ, ಸೇವೆಯ ಬಗ್ಗೆ, ಸರಳ ಜೀವನದ ಬಗ್ಗೆ ನಾವು ನಮ್ಮ ಮಕ್ಕಳಿಗೆ ಮಟ್ಟುವಂತೆ ಮಾಡಬೇಕು ಎಂದರು.
ವಿಶ್ವನಾಥ ಜಿ, ಶ್ರುತಿ ಮ್ಯಾಗೇರಿ, ರಾಜೇಶ್ವರಿ ಪಾಟೀಲ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.