ಸೆ. 4ರಂದು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ದಿನ ಆಚರಿಸಲು ನಿರ್ಣಯ
ಗದಗ: ನಗರದ ಗಂಗಾಪೂರಪೇಟೆಯ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ರವಿವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಸೆ. 4ರಂದು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ದಿನ ಆಚರಿಸಲು ನಿರ್ಣಯಿಸಲಾಯಿತು.
ಸಂಘದ ಗದಗ ಜಿಲ್ಲಾಧ್ಯಕ್ಷ ವೀರಬಸಯ್ಯ ವಿರಕ್ತಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಖಿಲ ಕರ್ನಾಟಕ ಪತ್ರಿಕಾ ವಿತರಕರ ದಿನ ಆಚರಣೆ ಕಾರ್ಯಕ್ರಮದಲಿ ಹಿರಿಯರ ಪತ್ರಿಕಾ ವಿತರಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಹೇಳಿದರು. ಅಲ್ಲದೇ, ಆ. 10ರಂದು ಪತ್ರಿಕಾ ವಿತರಕರ ಕುಟುಂಬದವರಿಗೆ ಮನರಂಜನಾ ಕಾರ್ಯಕ್ರಮ, ಆ. 20ರಂದು ಪತ್ರಿಕಾ ವಿತರಕರಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುವುದು ಎಂದು ಹೇಳಿದರು.
ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಂಕರ ಕುದರಿಮೋತಿ, ಸಂಘದ ಜಿಲ್ಲಾ ಉಪಾಧ್ಯಕ್ಷ ಈರಣ್ಣ ಮಳೇಕರ, ಕಾರ್ಯದರ್ಶಿ ಮಂಜುನಾಥ ಕಬನೂರ, ಸಹ ಕಾರ್ಯದರ್ಶಿ ದತ್ತಾತ್ರೇಯ ಮುಂಡರಗಿ, ಖಜಾಂಚಿ ವಿನಾಯಕ ಬದಿ, ಹಿರಿಯ ಸಲಹೆಗಾರರಾದ ಕೆ.ಎಸ್. ಹಿರೇಮಠ, ಪ್ರಮೋದ ಜೋಶಿ, ಸಂಚಾಲಕ ಗಂಗಾಧರ ಮಡ್ಡಿ, ಗಣೇಶ ಶಿರಹಟ್ಟಿ, ಶಂಕರಗುರು ಕಂದಗಲ್ಲ, ಗುರುರಾಜ ಕಲಾಲ, ದಶರಥ ಹೊನ್ನಳ್ಳಿ, ಸಿದ್ದು ಮಡಿವಾಳರ, ಕಿರಣ ಮಡ್ಡಿ, ಮಾರುತಿ ಮುಂಡರಗಿ ಸೇರಿ ಎಲ್ಲ ಪತ್ರಿಕಾ ವಿತರಕರು ಭಾಗವಹಿಸಿದ್ದರು.