ಜಿಲ್ಲೆ

ಜೆಡಿಎಸ್​ ಪ್ರತಿಭಟನೆ! ಸಚಿವ ಜಮೀರ್​ ಅಹಮದ್​ ವಜಾಕ್ಕೆ ಆಗ್ರಹ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಕಾಂಗ್ರೆಸ್​ ಸರ್ಕಾರದ ಆಡಳಿತ ಸಂರ್ಪೂಣ ವೈಲ್ಯವಾಗಿದೆ. ಕಾಂಗ್ರೆಸ್​ ಪಕ್ಷದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ತಾಂಡವವಾಡುತ್ತಿದ್ದು, ಎಲ್ಲಾ ಇಲಾಖೆಗಳಲ್ಲೂ ಲಂಚಗುಳಿತನ ಮಿತಿ ಮೀರಿದೆ ಎಂದು ಆರೋಪಿಸಿ ಜಿಲ್ಲಾ ಜೆಡಿಎಸ್​ ವತಿಯಿಂದ ಸೋಮವಾರ ಗದಗ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್​ ರಾಜ್ಯ ವಕ್ತಾರ ವಿ.ಆರ್​.ಗೋವಿಂದಗೌಡ್ರ, ಕಾಂಗ್ರೆಸ್​ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅದರಲ್ಲಿಯೂ ವಸತಿ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳನ್ನು ದಾಖಲೆಗಳ ಸಮೇತ ಕಾಂಗ್ರೆಸ್​ ಶಾಸಕರೇ ಬಯಲು ಮಾಡಿದ್ದಾರೆ. ವಸತಿ ಸಚಿವ ಜಮೀರ್​ ಅಹಮದ್​ ಈ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದು ಅವರನ್ನು ಸಚಿವ ಸಂಪುಟದಿಂದ ಕೂಡಲೇ ವಜಾಗೊಳಿಸಬೇಕು. ಕಾಂಗ್ರೆಸ್​ ಪಕ್ಷದ ಹಿರಿಯ ಶಾಸಕರು ಮತ್ತು ಮುಖಂಡರೇ ರಾಜ್ಯ ಸರ್ಕಾರದ ವಿರುದ್ಧ, ಅದರಲ್ಲೂ ಸಚಿವರ ವಿರುದ್ಧ ಮಾಧ್ಯಮಗಳಲ್ಲಿ ಸಾಕ್ಷಿ ಸಮೇತ ಆರೋಪ ಮಾಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದರು.

ರಾಜ್ಯ ಸರ್ಕಾರ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಕೆರೆ ಕಟ್ಟೆಗಳ ಪುನಶ್ಚೇತನ, ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಿಫಲವಾಗಿದೆ. ಗುತ್ತಿಗೆದಾರರ ಬಾಕಿ ಹಣ ಪಾವತಿಸುವಲ್ಲಿ ವಿಳಂಬ ಮಾಡುತ್ತಿರುವುದು ಸರ್ಕಾರದ ಬಡವರ ಮತ್ತು ರೈತ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ. ಪರಿಶಿಷ್ಟರಿಗೆ ಮೀಸಲಾದ ಹಣದಲ್ಲಿ ತಾರತಮ್ಯ ಎಸಗಿ ಆ ವರ್ಗಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಕೇವಲ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್​ ಮುಖಂಡರಾದ ಬಸವರಾಜ ಅಪ್ಪಣ್ಣವರ, ಸಂತೋಷ ಪಾಟೀಲ, ರಮೇಶ ಹುಣಸಿಮರದ, ಸಿದ್ದಯ್ಯ ಹೊಂಬಾಳಿಮಠ, ಪ್ರುಲ್​ ಪುಣೇಕರ್​, ಜಿ. ಕೆ. ಕೊಳ್ಳಿಮಠ, ಎಂ. ಎಸ್​. ಪರ್ತಗೌಡ್ರ, ವೈ. ಡಿ. ಹೂಗಾರ, ಜಯರಾಜ ವಾಲಿ, ಮಂಜುಳಾ ಮೇಟಿ, ಅಭಿಷೇಕ ಕಂಬಳಿ, ಎಸ್​. ಎಸ್​. ಪಾಟೀಲ, ಎಚ್​. ವಿ. ಮರಿಗೌಡ್ರ, ಫಕೀರಪ್ಪ ತುಳಿ, ಎಸ್​. ವೈ. ಹೂಗಾರ, ರಾಯಸಾಬ ಡಾಲಾಯತ, ಜಾವೇದ ಕಾಗದಗಾರ, ವಿನಾಯಕ ಕಮ್ಮಾರ, ಮುತ್ತು ಬಡಿಗೇರ, ಅಮರೇಶ ಅಂಗಡಿ, ಕುಮಾರ ಜಿಗಳೂರ, ಮೌಲಾಹುಸೇನ ತಾಂಬೋಳಿ, ಉಮೇಶ ಹಿರೇಮಠ, ಅಭಿಷೇಕ ದೇಸಾಯಿ ಇತರರು ಇದ್ದರು.