ಡಿಕೆ ಶಿವಕುಮಾರ್ ಅವರನ್ನು ವಜಾ ಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಗದಗ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ವೆಂಕನಗೌಡ ಗೋವಿಂದಗೌಡ್ರ, ಅಭಿಷೇಕ್ ಕಂಬಳಿ, ತಿಪ್ಪಣ್ಣ ಹುಡೇದ, ಹಾಜಿ ಅಲಿ ಕೊಪ್ಪಳ, ಜಯರಾಜ ವಾಲಿ, ಸಿರಾಜ ಕದಡಿ ಇತರರು  
ಜಿಲ್ಲೆ

ಡಿ.ಕೆ. ಶಿವಕುಮಾರ ವಜಾಗೊಳಿಸಲು ಒತ್ತಾಯ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬುಧವಾರ ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಡಿ.ಕೆ. ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ,  ಪೆನ್ ಡ್ರೈವ್  ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿರುವುದು ಫೋನ್ ಸಂಭಾಷಣೆಯಿಂದ ಸ್ಪಷ್ಟವಾಗಿದೆ. ಹೀಗಾಗಿ ಪ್ರಕರಣದ ಸರಕಾರ ಪ್ರಭಾವ ಬೀರುವ ಸಾಧ್ಯತೆಯಿದೆ. ಈ ಕೂಡಲೇ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಪ್ರಕರಣದ ಸತ್ಯಾಸತ್ಯತೆ ಹೊರಬರುವವರೆಗೂ ಡಿ.ಕೆ. ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ ಅವರು ದೇವೇಗೌಡರ ಕುಟುಂಬದ ಸದಸ್ಯರ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ರೇವಣ್ಣ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರ ಇಲ್ಲದಿದ್ದರೂ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಹೆಸರನ್ನು ಉಲ್ಲೇಖಿಸಿದ್ದಾರೆ. ಡಿ.ಕೆ. ಶಿವಕುಮಾರ ಅವರು ರಾಜ್ಯದ ಮಂತ್ರಿಯಾಗಿದ್ದು, ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿದ್ದರೆ ಜೆಡಿಎಸ್ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿದರು. 

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಮೇಟಿ, ಪ್ರಫುಲ್ ಪುಣೇಕರ, ಲಲಿತಾ ಕಲ್ಲಪ್ಪನವರ, ಹೊನ್ನವ್ವ ಕಲ್ಲಪ್ಪನವರ್,  ಎಂ.ಎಸ್. ಪರ್ವತಗೌಡರ, ಪ್ರವೀಣ ಬಾಳಿಕಾಯಿ, ಮಂಜುನಾಥ ದೊಡ್ಡಮನಿ, ಗಿರೀಶ್ ಸಂಶಿ, ಅಭಿಷೇಕ್ ಕಂಬಳಿ, ತಿಪ್ಪಣ್ಣ ಹುಡೇದ, ಹಾಜಿ ಅಲಿ ಕೊಪ್ಪಳ, ಜಯರಾಜ ವಾಲಿ, ಸಿರಾಜ ಕದಡಿ ಇತರರು ಉಪಸ್ಥಿತರಿದ್ದರು.