ಜಿಲ್ಲೆ

ಜನತಾ ದರ್ಶನ, ಅಹವಾಲು ಸ್ವೀಕಾರ (ಭಾಗ-೨)

Gadag - Shivanand Hiremath

ಗದಗ:

ಜಿಲ್ಲಾಡಳಿತ ಭವನದಲ್ಲಿ ಶನಿವಾರದಂದು ಜರುಗಿದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ನೂರಾರು ಜನರು ತಮ್ಮ ಅಹವಾಲು ಸಲ್ಲಿಸಿದರು. ಕೆಲವರು ಕಣ್ಣೀರಿಟ್ಟ ಘಟನೆ ಜರುಗಿತು.

ಗದಗ ನಗರದ ಗಂಗವ್ವ ವಾಲ್ಮಿಕಿ ಅವರು ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ಸಹಾಯಧನ ಕುರಿತು ಸಲ್ಲಿಸಿದ ಅಹವಾಲಿಗೆ ಸ್ಪಂಧಿಸಿದ ಸಚಿವರು, ತಹಶೀಲ್ದಾರ ಅವರಿಗೆ ಇಂದೇ ಮಂಜೂರಾತಿ ಪತ್ರ ನೀಡುವಂತೆ ಸೂಚಿಸಿದ ಹಿನ್ನಲೆಯಲ್ಲಿ  ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 20000/- ರೂಗಳ ಸಹಾಯ ಧನದ ಮಂಜೂರಾತಿ ಆದೇಶ ಪ್ರತಿಯನ್ನು ಗಂಗವ್ವ ವಾಲ್ಮೀಕಿ ಅವರಿಗೆ ಸಚಿವರು ವಿತರಿಸಿದರು.

ನರಗುಂದ ತಾಲೂಕಿನ ರುದ್ರವ್ವ ಕುರಿ ಅವರು ಮನೆ ನಿರ್ಮಾಣಕ್ಕೆ ಸಹಾಯ ಧನ ಕೋರಿ ಸಲ್ಲಿಸಿದ ಅಹವಾಲಿಗೆ ಸ್ಪಂಧಿಸಿ ಕೂಡಲೇ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಳಿಗೆ ನಿರ್ದೇಶನ ನೀಡಿದರು. ರೆಣವ್ವ ಮದಗುಣಕಿ ಅವರ ಆಸ್ತಿ ವಿಭಜನೆಗೆ ಸಂಬಂಧಿಸಿದ ಮನವಿಗೆ ಒಂದು ವಾರದೊಳಗೆ ಸಮಸ್ಯೆ ಪರಿಹರಿಸಲಾಗುವದು ಎಂದು ಭರವಸೆ ನೀಡಿದರು.

ಗದಗ ನಗರದ ಶಬಾನಾ ಹೊಸಪೇಟೆ ಅವರು ವಿಧವಾ ವೇತನ ಕುರಿತು ಅಹವಾಲಿಗೆ ಸಚಿವರು ಶಬಾನಾ ಅವರಿಗೆ  ಸ್ಥಳದಲ್ಲಿಯೇ ವಿಧವಾ ವೇತನ ಮಂಜೂರಾತಿ ಆದೇಶ ಪ್ರತಿ ವಿತರಿಸಿದರು. 

ಡಂಬಳ ಶಾಲೆಯಲ್ಲಿನ ಶೌಚಾಲಯ ಸಮಸ್ಯೆ ಕುರಿತಂತೆ ಹಾಗೂ ಶಾಲಾ ಮಕ್ಕಳಿಗಾಗಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಸಲ್ಲಿಸಿದ ಮನವಿಗೆ ಸಚಿವರು ತಕ್ಷಣ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಅಧಿಕಾರಿ ವರ್ಗ ಮುಂದಾಗಬೇಕು. ಸಾರಿಗೆ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ನಿಗದಿತ ಅವಧಿಗೆ ಬಸ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಶರಣಪ್ಪ ಎಂಬುವವರು ರೈತರಿಗೆ ಬೆಳೆ ವಿಮೆಗೆ ಜಿಪಿಎಸ್ ಮಾಡುವ ತರಬೇತಿಯನ್ನು ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ.ಪಾಟೀಲ ಅವರು ಒಂದು ವಾರದಲ್ಲಿ ಜಿಪಿಎಸ್ ಮಾಡುವ ಕುರಿತು ರೈತರಿಗೆ ತರಬೇತಿ ನೀಡಲು ಸೂಚಿಸಿದರು.

ಗರ್ಭಿಣಿ ಮಹಿಳೆ ಪಡಿತರ ಚೀಟಿ ಹೊಂದದೇ ಇರುವದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ನಿರಾಕರಿಸುತ್ತಿರುವ ಕುರಿತ ಅಹವಾಲಿಗೆ ಸಿಡಿಮಿಡಿಗೊಂಡ ಸಚಿವರು ಗರ್ಭೀಣಿ ಮಹಿಳೆಯರು ಪಡಿತರ ಚೀಟಿ ಹೊಂದದೇ ಇದ್ದರೂ ಸಹ ಅವರಿಗೆ ಜಿಮ್ಸ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.

ಆಶ್ರಯಮನೆ, ಜಲಜೀವನ ಮಿಷನ, ಪಹಣಿ ತಿದ್ದುಪಡಿ, ವ್ಯಾಸಂಗ, ಉಚಿತ ಲ್ಯಾಪಟಾಪ್, ಆರೋಗ್ಯ ಸಂಬಂಧಿತ ಕಾಯಿಲೆಗಳಿಗೆ ಹೆಚ್ಚಿನ ಚಿಕಿತ್ಸೆಗೆ ನೆರವು ಕೋರಿ ಕುರಿತಂತೆ ಸಾರ್ವಜನಿಕರ ಹಲವಾರು ಸಮಸ್ಯೆಗಳನ್ನು ಸಚಿವರು ಆಲಿಸಿ ಪರಿಹಾರ ಸೂಚಿಸಿದರು.