ವಿಶೇಷ ಚೇತನರೂ ಸಾಮಾನ್ಯರಾಗಬಲ್ಲರು : ಮೀನಾಕ್ಷಿ
ಗದಗ: ವಿಶೇಷ ಚೇತನ ಮಕ್ಕಳು ಎಲ್ಲರಂತೆ ಸಾಮಾನ್ಯರಾಗಲು ಅವರಿಗೆ ಪ್ರೋತ್ಸಾಹ ಬೇಕು. ಸಮಾಧಾನದಿಂದ ಅವರೊಂದಿಗೆ ವರ್ತಿಸಿದರೆ ಅವರೂ ಸಾಮಾನ್ಯರಾಗುವರು. ಪ್ರೀತಿಯಿಂದ ನಾವು ಅವರನ್ನು ಬೆಳೆಸಬೇಕು ಎಂದು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ನ ಸಿಪಿಸಿಸಿ ಮೀನಾಕ್ಷಿ ಕೊರವಣ್ಣವರ ಹೇಳಿದರು.
ಅವರು ಬುಧವಾರ ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ನ ದತ್ತು ಶಾಲೆಯಾದ ಸರ್ಕಾರಿ ಶಾಲೆ ನಂ.4 ರಲ್ಲಿ ಮಕ್ಕಳಿಗೆ ನೋಟ್‌ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಮಕ್ಕಳ ಪಾಲನೆ-ಪೋಷಣೆಯಲ್ಲಿ ತಾಯಿಯಂದಿರ ಪಾತ್ರ ಅತೀ ಮುಖ್ಯವಾಗಿದ್ದು, ಪಾಲಕರು ಮಕ್ಕಳ ಬೇಕು-ಬೇಡಗಳನ್ನು ಕೇಳಿ ತಿಳಿದು ಅವರಿಗೆ ಒದಗಿಸಲು ಮುಂದಾಗಬೇಕು. ವಿಶೇಷ ಮಕ್ಕಳು ಯಾರಿಗೂ ಭಾರವಲ್ಲ. ಅವರನ್ನು ಪ್ರೀತಿಯಿಂದ ಬೆಳೆಸಿ ಅವರನ್ನು ಸುಶಿಕ್ಷಿತರನ್ನಾಗಿ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ನ ಎಡಿಟರ್ ವೀಣಾ ಕಾವೇರಿ ಮಾತನಾಡಿ ಓದು-ಬರಹ ವಿದ್ಯಾರ್ಥಿಗಳಲ್ಲಿ ಹೊಸತನ ಹಾಗೂ ಸಂತಸ ಮೂಡಿಸುತ್ತದೆ. ವಿಶೇಷ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ಒದಗಿದಲ್ಲಿ ಅವರೂ ಸಾಧಿಸಿ ಹೆಸರು ಗಳಿಸಿ ಪಾಲಕರಿಗೆ ಸಮಾಜದಲ್ಲಿ ಗೌರವ ತಂದು ಕೊಡುವ ಕೆಲಸ ಮಾಡಬಲ್ಲರು. ಅಂತಹ ಅವಕಾಶವನ್ನು ನಾವೆಲ್ಲರೂ ಕಲ್ಪಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಆರ್.ಪಿ ಕೇಂದ್ರದ ಮುಖ್ಯಸ್ಥೆ ಇ.ಡಿ.ಹುಗ್ಗೇಣ್ಣವರ ಮಾತನಾಡಿ ಇನ್ನರ್‌ವ್ಹೀಲ್ ಕ್ಲಬ್ ವಿಶೇಷ ಚೇತನ ಮಕ್ಕಳ ಶ್ರೇಯೋಭಿವೃದ್ಧಿಗೆ ಕೈ ಜೋಡಿಸಿರುವುದು ಹರ್ಷ ತಂದಿದೆ. ಮಕ್ಕಳಿಗಾಗಿ ಬರವಣಿಗೆ ಸಾಮಗ್ರಿಗಳನ್ನು ವಿತರಿಸಿದ್ದು ಇದರಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ, ಶಿಕ್ಷಕಿಯರಾದ ಭಾರತಿ ಮಟ್ಟಿ, ಸುನೀತಾ ತಿಮ್ಮನಗೌಡ್ರ, ಶ್ರೀಮತಿ ಕಟಗಿ, ಮಾಲನ್ ಹೊಸಳ್ಳಿ, ಶ್ರೀಮತಿ ರಾಯಬಾಗಿ ಉಪಸ್ಥಿತರಿದ್ದರು.
= = =