Gadag: ರೋಗಿಗಳನ್ನು ಉಳಿಸುವಾಗ ನಮ್ಮನ್ನು ನಾವು ಕಾನೂನಾತ್ಮಕವಾಗಿ ರಕ್ಷಿಸಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು ಎಂದು ಸಚಿವ ಎಚ್. ಕೆ. ಪಾಟೀಲ ಹೇಳಿದರು.
ನಗರದ ಜಿಲ್ಳಾಸ್ಪತ್ರೆಯಲ್ಲಿ ಐಎಂಎ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಮೆಡಿಕೋ ಲಿಗಲ್ ವಾರ್ಷಿಕ ಕರ್ನಾಟಕ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎಂಬ ನುಡಿಯಂತೆ ವೈದ್ಯರು ನಾರಾಯಣನಿಗೆ ಸಮ. ಜನರ ಜೀವ ರಕ್ಷಣೆಯಲ್ಲಿ ಸದಾ ಮುಂದಿರುವ ವೈದ್ಯರು ತಮ್ಮ ಆರೋಗ್ಯ ರಕ್ಷಣೆಗೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮುಖ್ಯ. ಸಾಮಾಜಿಕ ಹೊಣೆಗಾರಿಕೆಯು ವೈದ್ಯರ ಕರ್ತವ್ಯದಲ್ಲೇ ಅಡಗಿರುತ್ತದೆ. ಕರ್ತವ್ಯದಲ್ಲಿ ವೈದ್ಯರು ಜೀವನ ಅಡವಿಟ್ಟು ಸೇವೆ ಮಾಡುತ್ತಾರೆ. ಪ್ರಕೃತಿ ವಿಕೋಪ, ಯುದ್ಧ ಸಂದರ್ಭದಲ್ಲಿ, ಆಂತರಿಕ ಸಂಘರ್ಷದ ಸಂದರ್ಭದಲ್ಲಿ ವೈದ್ಯರ ಸೇವೆ ಪ್ರಮುಖವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯರಿಗೆ ಕಾನೂನು ತೋಡಕು ಎದುರಾಗುತ್ತವೆ. ಕಾನೂನು ತೋಡಕುಗಳಿಂದ ಜೀವ ರಕ್ಷಣೆ ಮಾಡಿಕೊಂಡು ಸೇವೆಯಲ್ಲಿ ತೋಡಗಿಸುವುದು ಹೇಗೆ ಎಂಬುದನ್ನು ಈ ಸಮ್ಮೇಳನದಿಂದ ಕಲಿಯಬಹುದಾಗಿದೆ. ದೈನಂದಿನ ಕರ್ತವ್ಯದಲ್ಲಿ ಕಾನೂನು ಪಾಲನೆ ನಮ್ಮೆಲ್ಲರಿಗೂ ಅನಿವಾರ್ಯ. ಕಾನೂನು ಪಾಲನೆಯೊಂದಿಗೆ ಕರ್ತವ್ಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ನೈತಿಕತೆ ಮತ್ತು ಪ್ರಮಾಣಿಕತೆಯಿಂದ ದೈನಂದಿನ ಕೆಲಸ ನಿರ್ವಹಿಸಬೇಕು ಎಂದರು.
ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳ ಅನ್ವಯ ಜನರ ಆರೋಗ್ಯ ಜೀವನ ಮಟ್ಟ ಸುಧಾರಣೆಗೆ ವೈದ್ಯರು ಸೇವೆ ನಿರ್ವಹಿಸಬೇಕು. ಸೇವೆಯಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು. ನಾಗರಿಕ ಸಮಾಜ ವೈದ್ಯರನ್ನು ಗಮನಿಸುತ್ತಿರುತ್ತದೆ. ಕಾನೂನು ವ್ಯಾಪ್ತಿಯಲ್ಲೇ ಕಾಯಕ ನಿಷ್ಠರಾಗಬೇಕು. ಹಿರಿಯ ವೈದ್ಯರ ಸೇವೆಯನ್ನು ಕಿರಿಯ ವೈದ್ಯರು ಅನುಕರಿಸಬೇಕು. ಸಾಮಾಜಿಕ ವ್ಯವಸ್ತೆಯಲ್ಲಿ ವೈದ್ಯರು ಚಿಕಿತ್ಸೆ ವಿಳಂಬ ಮಾಡಬಾರದು. ರೋಗಿಗಳಿಗೆ ಆತ್ಮವಿಶ್ವಾಸ ಬರುವಂತೆ ನಿಮ್ಮ ಸಂಬಂಧ ಗಟ್ಟಿಗೊಳಸಬೇಕು. ಸಾಮಾಜಿಕ ನಂಬಿಕೆ ಗಳಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು.
ಐಎಂಎ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಜಿ. ಬಿ. ಬಿಡನಾಳ ಮಾತನಾಡಿ, ವೈದ್ಯರು ದೈನಂದಿನ ಸೇವೆಯಲ್ಲಿ ಕಾನೂನು ತೊಡಕುಗಳ ಬಗ್ಗೆ ಅರಿವು ಹೊಂದುವ ಅನಿವಾರ್ಯತೆ ಇದೆ. ನಿರ್ಲಕ್ಷ್ಯ ವಹಿಸಿದರೆ ತೊಂದರೆಗೆ ಒಳಗಾಗುತ್ತೇವೆ ಎಂಬುದನ್ನು ಮರೆಯಬಾರದು ಎಂದರು.
ಡಾ. ವಿ. ಡಿ. ಚಿನಿವಾಲ ಮಾತನಾಡಿ, ಪ್ರಥಮಬಾರಿಗೆ ರಾಜ್ಯದಲ್ಲಿ ಮೆಡಿಕೊ ಸಮ್ಮೇಳನ ನಡೆಸಿದ ಕೀರ್ತಿ ಗದಗ ಗೆ ಸಲ್ಲುತ್ತದೆ. ಜಿಲ್ಲೆಯು ಸಹಕಾರಿ ಕ್ಷೇತ್ರದ ಜತೆಗೆ ವಾಣಿಜ್ಯ ಕ್ಷೇತ್ರದಲ್ಲೂ ಅಭಿವೃದ್ಧಿ ಆಗುತ್ತಿದೆ. ಅದರ ಜತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಸಂತಸ ತಂದಿದೆ ಎಂದರು.
ಐಎಂಎ ರಾಷ್ಟ್ರೀಯ ಅಧ್ಯಕ್ಷ ದಿಲೀಪ ಬನ್ಸಾಲಿ, ಡಾ. ಯೋಗಾನಂದ ರೆಡ್ಡಿ, ಡಾ. ಬಸವರಾಜ ಬೊಮ್ಮನಹಳ್ಳಿ, ಡಾ. ವೀರಭದ್ರಪ್ಪ, ಡಾ. ವಿ.ಎ ಮಾಲೂರು, ಡಾ. ರಾಜಶೇಖರ ಬಳ್ಳಾರಿ, ಡಾ. ಅನ್ನದಾನಿ ಮೇಟಿ, ಡಾ. ವೆಂಕಟಾ ಚಲಪತಿ, ಡಾ. ಹೊನ್ನೆಗೌಡ. ಡಾ. ತುಕಾರಾಂ ಸೂರಿ, ಡಾ. ಅರವಿಂದ, ಡಾ. ರಾಧಿಕಾ ಕುಲಕರ್ಣಿ ಇತರರು ಇದ್ದರು.