AA 
ಜಿಲ್ಲೆ

ಗದಗ: ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ

Gadag - Shivanand Hiremath

 ಮಾನವ ಕಳ್ಳ ಸಾಗಾಣಿಕೆ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ: ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ  

ಗದಗ:  ಮಾನವ ಕಳ್ಳ ಸಾಗಾಣಿಕೆ ಒಂದು ಸಾಮಾಜಿಕ ಪಿಡುಗಾಗಿದ್ದು ಇದನ್ನು ತಡೆಗಟ್ಟುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಾನವ ಕಳ್ಳ ಸಾಗಾಣಿಕೆಗೆ ಬಡತನ, ಹೆಚ್ಚುತ್ತಿರುವ ವಲಸೆ, ಕುಟುಂಬದ ಸಮಸ್ಯೆ ಮೂಲ ಕಾರಣಗಳಾಗಿವೆ.  ಸಂವಿಧಾನದ ಶಿಲ್ಪಿ ಡಾ.ಅಂಬೇಡ್ಕರ್ ಅವರು ಮಹಿಳೆ ಮತ್ತು ಮಕ್ಕಳು ಸುಶಿಕ್ಷಿತರಾದರೆ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದ್ದರು. ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವುದು ವಿವಿಧ ಇಲಾಖೆಗಳ ಕರ್ತವ್ಯವಲ್ಲದೇ ಸಮಾಜದ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯು ಕೂಡ ಆಗಿದೆ. ಲೈಂಗಿಕ ಶೋಷಣೆ, ಮಕ್ಕಳ ಬಿಕ್ಷಾಟನೆ, ಜೀತಕ್ಕಾಗಿ, ಬಾಲಕಾರ್ಮಿಕತೆ, ಅಂಗಾಂಗ ಕಸಿಗಾಗಿ, ಬಾಲ್ಯ ವಿವಾಹ ಮುಂತಾದ ಕಾರಣಗಳಿಗಾಗಿ ಮಾನವ ಕಳ್ಳ ಸಾಗಾಣಿಕೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಮಾತನಾಡಿ ಹೆಣ್ಣುಮಕ್ಕಳಿಗೆ ಮೋಸ ಮಾಡಿ ಪಾಲಕರಿಂದ ಬೇರ್ಪಡಿಸಿ ನಂತರ  ಅವರನ್ನು ವೇಶ್ಯಾವಾಟಿಕೆಗೆ ತಳ್ಳುವುದು  ಹಾಗೂ ಮಕ್ಕಳನ್ನು ಅಪಹರಿಸಿ ಬಿಕ್ಷಾಟನೆಗೆ ಕಳುಹಿಸುವುದು ಇವೆಲ್ಲ ಮಾನವ ಕಳ್ಳ ಸಾಗಾಣಿಕೆಗಳಾಗಿವೆ. ಪ್ರಸ್ತುತ ಕಾಲದಲ್ಲಿ ಬಡತನವೊಂದೇ ಇದಕ್ಕೆ ಕಾರಣವಾಗಿರುವುದಿಲ್ಲ ಅದರೊಂದಿಗೆ  ಅರಿವಿನ ಅಥವಾ ಜಾಗೃತಿಯ ಕೊರತೆ ಮುಖ್ಯವಾಗಿದೆ. ಆದಕಾರಣ ಕಾಲೇಜು ಯುವತಿಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಯಾವುದೇ ಕಾರಣಕ್ಕೂ ಯಾರಿಂದಲೂ ಪ್ರಲೋಭನೆಗೆ ಒಳಗಾಗಬಾರದು, ಮೊಬೈಲ್‍ನ ಮುಖಾಂತರ ಆಕರ್ಷಣೆಗೆ ಮತ್ತು ಆಸ್ತಿ ಅಮಿಷಗಳಿಗೆ ಒಳಗಾಗಿ ಮೋಸಹೋಗಬಾರದು. ಮಾನವ ಕಳ್ಳ ಸಾಗಾಣಿಕೆ ತಡೆಗಾಗಿ ತಮ್ಮ ಸುತ್ತ ಮುತ್ತಲಿನರಿಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದರು.  

ಜಿಲ್ಲಾ ಕಾನೂನು ಪ್ರಾಧಿಕಾರದ ಸಿ.ಎಸ್.ಶಿವನಗೌಡ್ರ ಮಾತನಾಡಿ ಮಹಿಳೆ ಮತ್ತು ಮಕ್ಕಳನ್ನು ಕಳ್ಳತನ ಮಾಡಿ ಹೊರದೇಶಕ್ಕೆ  ಕರೆದುಕೊಂಡು ಹೋಗುವುದು, ಅನೈತಿಕ ಕಾರ್ಯಗಳಿಗೆ ಬಳಸುವುದು, ಮಕ್ಕಳಿಗೆ ಬಿಕ್ಷಾಟನೆ ಯಲ್ಲಿ ತೊಡಗಿಸುವುದು ಹಾಗೂ ಅಪಾಯಕಾರಿ ಕಾರ್ಖಾನೆಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ತೊಡಗಿಸುವುದು ಬಂದ ಹಣವನ್ನು ವಸೂಲು ಮಾಡುವುದು ಇವೆಲ್ಲವುಗಳು ಮಾನವ ಕಳ್ಳ ಸಾಗಾಣಿಕೆಯ ಮುಖ್ಯ ಉದ್ದೇಶವಾಗಿದೆ.  ಇದನ್ನು ತಡೆಗಟ್ಟಲು ಎಲ್ಲ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಹಾಗೂ ಟಾಸ್ಕ್ ಫೋರ್ಸ ಸಮಿತಿ ರಚನೆ ಮಾಡಿಕೊಂಡು ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು  ಪ್ರತಿ ಎರಡು ತಿಂಗಳಿಗೊಮ್ಮೆ  ಸಭೆಯ ನಡೆಸಿ ಚರ್ಚಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇದರ ತಡೆಗಾಗಿ ಎಲ್ಲರೂ ಜಾಗೃರಾಗಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ.ಪಲ್ಲೇದ ಅವರು ಮಾತನಾಡಿ ಮಾನವರ ಹಿತರಕ್ಷಣೆಗಾಗಿ ಅನೇಕ ಕಾನೂನುಗಳು ಜಾರಿಗೊಂಡಿವೆ. ಮಾನವ ಕಳ್ಳ ಸಾಗಾಣಿಕೆಯು ಒಂದು ಸಾಮಾಜಿಕ ಪಿಡುಗಾಗಿದೆ. ಮಾನವನ ಗೌರವಕ್ಕೆ ಧಕ್ಕೆ ತರುವಂತಹದ್ದೂ ಕೂಡ ಆಗಿದೆ. ಸಮಾಜದಲ್ಲಿ ಪ್ರತಿಯೊಬ್ಬರನ್ನು ಕೂಡ ಗೌರವದಿಂದ ಕಾಣಬೇಕು ಎಂದು ಜಾಗೃತಿ ಮೂಡಿಸಲು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ತಮ್ಮನ್ನು ತಾವು  ತೊಡಗಿಸಿಕೊಂಡರು. ಮಾನವರನ್ನು ಗೌರವದಿಂದ ಕಾಣುವುದು ಹಾಗೂ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸುವುದು   ಮಾನವ ಹಕ್ಕುಗಳ ಕಾಯ್ದೆಯ ಮೂಲಸ್ವರೂಪವಾಗಿದೆ ಎಂದು ವಿವರಿಸಿದರು.  

ಇದೇ ಸಂದರ್ಭದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಮಕ್ಕಳ ರಕ್ಷಣಾ ಘಟಕದ ಮಲ್ಲಪ್ಪ ಹೊಸಳ್ಳಿ ಅವರು ಪ್ರತಿಜ್ಞಾ ವಿಧಿಸಿ ಬೋಧಿಸಿದರು. ಮಹಿಳಾ ಅಭಿವೃದ್ಧಿ ಅಧಿಕಾರಿ  ಕಮಲಾ  ಅವರು ಬೇಟಿ ಬಚಾವೋ ಬೇಟಿ ಪಡಾವೋ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಮಕ್ಕಳ ರಕ್ಷಣಾ ಘಟಕದ ಬಿತ್ತಿಪತ್ರಗಳನ್ನು ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಅಸೂಟಿ ಅವರು ಮಾತನಾಡಿ ಮಾನವ ಕಳ್ಳಸಾಗಣೆಯು ಹಿಂದಿನ ಕಾಲದಿಂದಲೂಜಾರಿಯಲ್ಲಿದೆ, ಇದೊಂದು ಸಂಘಟಿತವಾಗಿ ಮಾಡುವ ಅಪರಾಧವಾಗಿದ್ದು ಮಾರುಕಟ್ಟೆಯಲ್ಲಿ ಜಾನುವಾರು  ಮಾರಾಟದಂತೆ ಮನುಷ್ಯರನ್ನು ಬಹಿರಂಗವಾಗಿ ಮಾರಲಾಗುತ್ತದೆ.

ಆದುನಿಕ ಕಾಲದಲ್ಲಿ ಮಾನವ ಕಳ್ಳ ಸಾಗಣೆ ಮಾಡಿ ಮಸಾಜ್ ಪಾರ್ಲರ್, ಬಾರ್, ಪಬ್, ಗಣಿಗಾರಿಕೆ, ಕೃಷಿ ಚಟುವಟಿಕೆಗಳಾದ ಕಾಫಿ, ರಬ್ಬರ್ ಎಸ್ಟೇಟ್, ಕೆಲಸಗಳಲ್ಲಿ ಅಪಾಯಕಾರಿ ಕ್ಷೇತ್ರಗಳಲ್ಲಿ ಬಳಕೆ ಮಾಡುತ್ತಾರೆ  ಮತ್ತು ಕಾನೂನು ಬಾಹಿರವಾಗಿ ಇಚ್ಛಗೆ ವಿರುದ್ಧವಾಗಿ ಬಲವಂತವಾಗಿ ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಿ ಲೈಂಗಿಕವಾಗಿ ಅಶ್ಲೀಲವಾಗಿ ಬಳಸಿಕೊಳ್ಳುತ್ತಾರೆ. ಮಾನವ ಕಳ್ಳಸಾಗಣೆಗೆ ಹೆಚ್ಚಾಗಿ ಹದಿಹರೆಯರು, ವಿಧವೆಯರು, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ, ಅನಕ್ಷರಸ್ಥರು, ನಿರುದ್ಯೋಗಿಗಳು, ಸೇರಿದಂತೆ ಇಂದಿನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ  ಅಪರಿಚಿತರನ್ನು  ನಂಬಿ ಬಲಿಪಶುಗಳಾಗುತ್ತಾರೆ ಎಂದರು.

ಮಾನವ ಕಳ್ಳಸಾಗಣೆ ತಡೆಗಟ್ಟಲು ಸಮಾಜದ ಸ್ವಸಹಾಯ ಗುಂಪಿನವರು, ಕುಟುಂಬಸ್ಥರು ಸೇರಿದಂತೆ ಪ್ರತಿಯೊಬ್ಬರು ಶ್ರಮವಹಿಸಬೇಕು. ಮಕ್ಕಳು ಯಾವುದೇ ರೀತಿಯ ತೊಂದರೆಗೊಳಗಾದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ,ಮಾನವ ಹಕ್ಕುಗಳ ಅಯೋಗ ಸಹಾಯವಾಣಿ 18004252333,ಮಹಿಳಾ ಸಹಾಯವಾಣಿ 181,ಕಾರ್ಮಿಕ ಸಹಾಯವಾಣಿ 155214,ತುರ್ತು ಸ್ಪಂದನ ಸಹಾಯವಾಣಿ 112  ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಮಾನವ ಕಳ್ಳ ಸಾಗಾಣಿಕೆಗೆ ಒಳಗಾಗಿ ಬಿಡುಗಡೆ ಹೊಂದಿದ ಸಿದ್ಧಪ್ಪ ಅವರು ತಮ್ಮ ಅನುಭವವನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಉಪವಿಭಾಗಾಧಿಕಾರಿ ಗಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ವಕೀಲರ ಸಂಘದ ಅಧ್ಯಕ್ಷರಾದ ಎಂ.ಐ. ಹಿರೇಮನಿ ಪಾಟೀಲ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ  ಜಿ. ಕುರ್ತಕೋಟಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ಇತರರು ಇದ್ದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಸ್ವಾಗತಿಸಿದರು.ಮಲ್ಲಪ್ಪ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು.  ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಫೀಕಾ ಹಳ್ಳೂರ ವಂದಿಸಿದರು.