ಶಿರಹಟ್ಟಿ: ರಾಜ್ಯ ಹೆದ್ದಾರಿ ಅಭಿವೃದ್ಧಿ ಮುಖ್ಯ ಯೋಜನಾಧಿಕಾರಿಯಾಗಿ ನೇಮಕಗೊಂಡ ಎಸ್.ಎಫ್. ಪಾಟೀಲ ಅಧಿಕಾರ ಸ್ವೀಕರಿಸಿ ಮೊದಲಿಗೆ ಇಲ್ಲಿನ ಫಕೀರೇಶ್ವರ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ನಂತರ ಮಾತನಾಡಿದ ಅವರು, ನಮ್ಮ ಮನೆತನ ಫಕೀರೇಶ್ವರ ಮಠದ ಪರಮ ಭಕ್ತರಾಗಿದ್ದರಿಂದ ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂಥ ಉನ್ನತ ಅಧಿಕಾರ ದೊರೆತಿದೆ. ಹೀಗಾಗಿ ಗದ್ದುಗೆಯ ದರ್ಶನ ಪಡೆದು ಉಭಯ ಶ್ರೀಗಳಿಂದ ಆಶೀರ್ವಾದ ಪಡೆದಿದ್ದು ಸಂತಸ ತಂದಿದೆ ಎಂದರು.
ಶಿರಹಟ್ಟಿ ಹಿಂದುಳಿದ ತಾಲೂಕು ಎಂದೇ ಗುರುತಿಸಿರುವ ಈ ಭಾಗದಲ್ಲಿ ಪ್ರಾರಂಭವಾದ ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ಕಾಮಗಾರಿ ಕೆಲ ಅಡೆತಡೆಗಳ ಕಾರಣದಿಂದ ನಿಧಾನವಾಗಿ ಸಾಗಿದೆ. ಈಗಾಗಲೇ ಕೈಗೊಂಡ ಕಾಮಗಾರಿ ವೀಕ್ಷಣೆಗೆ ಬಂದಿದ್ದು, ಈ ಯೋಜನೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ಕರೆದು ಚರ್ಚಿಸಿ ಮಾಹಿತಿ ಪಡೆಯಲಾಗಿದೆ. ಬಾಕಿ ಉಳಿದಿರುವ ಕಾಮಗಾರಿ ತ್ವರಿತಗತಿಯಲ್ಲಿ ಕೈಗೊಂಡು 4 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ತಾಕೀತು ಮಾಡಲಾಗಿದೆ ಎಂದರು.
ಕೆಶಿಫ್ ಯೋಜನೆಯಡಿ 995 ಕೋಟಿ ರೂ. ವೆಚ್ಚದಲ್ಲಿ 138 ಕಿ.ಮೀ. ಉದ್ದದ ರಸ್ತೆ ಇದಾಗಿದ್ದು, ಇದರಲ್ಲಿ 38 ಕಿ.ಮೀ. ಈ ಭಾಗಕ್ಕೊಳಪಟ್ಟಿದೆ. ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದ್ದು, ಕಳೆದ 4 ವರ್ಷದಿಂದ ನಡೆಯುತ್ತಿರುವ ಕಾಮಗಾರಿಗೆ ಮುಕ್ತಿ ನೀಡುವ ಗುರಿ ಹೊಂದಿದ್ದೇನೆ ಎಂದರು.
ಸೊರಟೂರ ಮಾರ್ಗದ ಮೂಲಕ ಹಾಯ್ದು ಹೋಗುವ ಈ ರಸ್ತೆ ಮೂಲಕ ಮಠಕ್ಕೆ ಭಕ್ತರು ಆಗಮಿಸುವ ಕಾರಣ ಅವರ ಅನುಕೂಲಕ್ಕೆ ಮಠಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 1.6 ಕಿ.ಮೀ. ರಸ್ತೆ ನಿರ್ಮಿಸುವ ಸಂಬಂಧ ಈಗಾಗಲೇ ಅಂದಾಜು ಪತ್ರಿಕೆ ಸಿದ್ಧಪಡಿಸಿ ಕೊಟ್ಟಿದ್ದು, ಶ್ರೀಗಳ ಆಶಯದಂತೆ ಒಳಮಾರ್ಗದ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.
ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ರಾಜ್ಯ ಹೆದ್ದಾರಿ ರಸ್ತೆಯಿಂದ ಒಳಮಾರ್ಗವಾಗಿ ಮಠಕ್ಕೆ ಸಂಪರ್ಕ ರಸ್ತೆ ನಿರ್ಮಿಸುವ ಸಂಬಂಧ ಮುಸ್ಲಿಂ ಬಂಧುಗಳು ತಮ್ಮ ಜಮೀನು ನೀಡಿ ಕೋಮು ಸೌರ್ಹಾದಕ್ಕೆ ಸಾಕ್ಷಿಯಾಗಿದ್ದಾರೆ. ಈ ಅಲ್ಪ ಸೇವಾ ಕಾರ್ಯಕ್ಕೆ ಎಸ್.ಎಫ್. ಪಾಟೀಲ ಅವರು ಇಚ್ಛಾಶಕ್ತಿ ತೋರಿದ್ದಾರೆ ಎಂದರು.
ಮಠದ ಪೀಠಾಧ್ಯಕ್ಷ ಶ್ರೀ ಫಕೀರಸಿದ್ಧರಾಮ ಸ್ವಾಮೀಜಿ, ಕೆಶಿಪ್ ಇಂಜಿನಿಯರ್ ನಟರಾಜ, ಬಸವರಾಜ, ಪಿಡಬ್ಲುೃಡಿ ಇಲಾಖೆಯ ಶ್ರೀಶೈಲ ಹೊನಕೇರಿ, ಪ್ರಕಾಶಗೌಡ ಪಾಟೀಲ, ಫಕೀರೇಶ ತಿಮ್ಮಾಪೂರ, ಗುತ್ತಿಗೆದಾರ ದೇವರಾಜ, ಶಂಕರ ಮರಾಠೆ, ನವೀನ ಡಂಬಳ, ಶಂಭು ಕಾಳಗಿ ಇತರರಿದ್ದರು.