ಜಿಲ್ಲೆ

ಕಾಫಿ ನಾಡಿನಲ್ಲಿ ಗದಗ ಹಾಕಿತಾರೆಯ ಮಿಂಚು…

ಶಿರಹಟ್ಟಿ: ಸ್ಕೂಲ್ ಗೇಮ್ ಫೆಡರೇಷನ್ ಕೊಡಗಿನಲ್ಲಿ ಆಯೋಜಿಸಿರುವ 67ನೇ ರಾಷ್ಟ್ರೀಯ ಹಾಕಿ ಕ್ರೀಡಾಕೂಟದ ರಾಜ್ಯತಂಡಕ್ಕೆ ಗದಗನ ನೇಹಾ ಮುಟಗಾರ ಆಯ್ಕೆಯಾಗಿದ್ದಾರೆ. ಕೊಡಗು ಜಿಲ್ಲೆಯ ಕೂಡಿಗೆಯ ಸರ್ಕಾರಿ ಕ್ರೀಡಾಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ತಂದೆ ಶಂಕರ ಮಟಗಾರ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೆಬಲ್ ಆಗಿದ್ದಾರೆ. 17 ವರ್ಷದೊಳಗಿನ ಮಹಿಳಾ ಹಾಕಿ ತಂಡಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ಕೊಡಗಿನಲ್ಲಿ ನಡೆದಿರುವ ಸದರಿ ಕ್ರೀಡಾಕೂಟದಲ್ಲಿ 29 ರಾಜ್ಯ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 44 ತಂಡಗಳು ಭಾಗವಹಿಸಲಿವೆ. ಗದಗ ಜಿಲ್ಲೆಯಿಂದ ಆಯ್ಕೆಯಾದ ಮೊದಲ ಹಾಕಿ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರಳಾಗಿದ್ದಾಳೆ. ಈಕೆ ಈಗಾಗಲೇ 2022 ರಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ದ್ವಿತೀಯ ಮಿನಿ ಓಲಂಪಿಕ್ ಕ್ರೀಡಾಕೂಟದ ಹಾಕಿ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಜತೆಗೆ 2022- 23ರಲ್ಲಿ ಕೊಡಗಿನಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆಯಲ್ಲಿ ಹಾಕಿ ಆಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. 2023ರಲ್ಲಿ ಒಡಿಶಾದಲ್ಲಿ ಆಯೋಜಿಸಿದ್ದ 13ನೇ ಭಾರತ ಹಾಕಿ ಸಬ್ ಜೂನಿಯರ್ ಮಹಿಳೆಯರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಮೂಲಕ ಭವಿಷ್ಯದಲ್ಲಿ ಉತ್ತಮ ಹಾಕಿ ಆಟಗಾರ್ತಿಯಾಗುವ ಕೌಶಲ ಬೆಳೆಸಿಕೊಂಡಿದ್ದಾಳೆ.