ಗದಗ: ಕಾಯಕ ಶರಣರು ಆಧ್ಯಾತ್ಮದ ಜೊತೆಗೆ ಪ್ರಜಾಪ್ರಭುತ್ವದ ಮಾದರಿಯನ್ನು ತೋರಿ ಕೊಟ್ಟು ಸಮಾಜದಲ್ಲಿ ಯಾವುದೇ ಕಾಯಕ ಸಣ್ಣದಲ್ಲ ಎಂದು ಸಂದೇಶ ಸಾರಿದ ಶರಣರ ತತ್ವಗಳು ಎಲ್ಲರಿಗೂ ಆದರ್ಶ ಪ್ರಾಯವಾಗಿವೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ನುಡಿದರು.
ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಶನಿವಾರದಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾದ ಕಾಯಕ ಶರಣರಾದ ಶರಣ ಮಾದಾರ ಚೆನ್ನಯ್ಯ, ಶರಣ ಸಮಗಾರ ಹರಳಯ್ಯ, ಶರಣ ಡೋಹರ ಕಕ್ಕಯ್ಯನವರ ಜಯಂತಿಯ ಅಂಗವಾಗಿ ಶರಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿ ಅವರು ಮಾತನಡಿದರು.
ಶರಣರ ವಚನಗಳು ಸಂವಿಧಾನ ರಚನೆಯಲ್ಲಿ ಅಗಾಧವಾದ ಪರಿಣಾಮ ಬಿರಿವೆ. ಶರಣ ಮಾದಾರ ಚೆನ್ನಯ್ಯ, ಶರಣ ಸಮಗಾರ ಹರಳಯ್ಯ, ಶರಣ ಡೋಹರ ಕಕ್ಕಯ್ಯ ಅವರುಗಳು ಬಡತನದಲ್ಲಿ ಮಾಡುವ ಕಾಯಕಗಳು ಹಿರಿಮೆ ಇವೆ ಎಂದು ಸ್ವಾಭಿಮಾನದಿಂದ ಬದುಕಿದಂತಹ ಮಹಾನುಭಾವರಾಗಿದ್ದಾರೆ ಎಂದರು.
ಶರಣರ ಜಯಂತಿಗಳು ಕೇವಲ ಅದೇ ಸಮುದಾಯಕ್ಕೆ ಸೀಮಿತವಾಗಿರುವದು ದುರ್ದೈವದ ಸಂಗತಿಯಾಗಿದೆ. ಮುಂದಿನ ಜಯಂತಿಗಳಲ್ಲಿ ಸಮುದಾಯದ ಜನ ಸೇರಿದಂತೆ ಎಲ್ಲರೂ ಪಾಲ್ಗೊಳ್ಳುವ ಮೂಲಕ ಶರಣ ಜಯಂತಿಗಳನ್ನು ಆಚರಿಸಬೇಕು. ವಿಶ್ವಗುರು ಕರ್ನಾಟಕದ ಸಾಂಸ್ಕøತಿಕ ರಾಯಭಾರಿ ಅಣ್ಣ ಬಸವಣ್ಣ ಸೇರಿದಂತೆ ಎಲ್ಲ ಶರಣರು ತಮ್ಮ ವಚನ, ಕಾಯಕಗಳ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯಮಾಡಿದ್ದು ಇವರುಗಳು ಒಂದು ಜಾತಿಗೆ ಸೀಮಿತವಾಗಿರದೇ ಇಡೀ ಸಮಾಜದ ಆಸ್ತಿಯಾಗಿದ್ದರು. ಇವರ ಜಯಂತಿಯನ್ನು ಎಲ್ಲ ಸಮುದಾಯದವರು ಕೂಡಿ ಆಚರಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾಜ ತಿದ್ದುವ ಕಾರ್ಯ ಮಾಡಿದ ಶರಣರ ವಚನಗಳನ್ನು ಇಂದು ಹೆಕ್ಕಿ ತೆಗೆಯಬೇಕಾಗಿದೆ. ವಚನಗಳಲ್ಲಿನ ಸಾಮಾಜಿಕ ಕಳಕಳಿಯನ್ನು ಅರಿತುಕೊಂಡು ಸಮಾಜ ಸುಧಾರಣೆಗೆ ಪ್ರತಿಯೊಬ್ಬರು ಮುಂದಾಗಬೇಕು. ಶರಣರ ವಚನಗಳ ಹೆಚ್ಚಿನ ಪ್ರಚಾರವಾಗಬೇಕಾಗಿದ್ದು ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವದು ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ವಿಧಾನ ಪರಿಷತ್ ಶಾಸಕರಾದ ಎಸ್.ವಿ.ಸಂಕನೂರ ಮಾತನಾಡಿ ಮೂರು ಜನ ಶರಣರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಅವರ ಅನುಯಾಯಿಗಳಾದಂತವರು, ಬಸವಣ್ಣನವರು ಸಮಾಜದಲ್ಲಿನ ಮೇಲು ಕೀಲು ಭಾವನೆಗಳನ್ನು ತೆಗೆದುಹಾಕಿ ಜ್ಯಾತ್ಯಾತಿತ ಸಮಾಜ ಕಟ್ಟಿದರು. ಮಾದಾರ ಚನ್ನಯ್ಯನವರ ಪ್ರತಿ ವಚನದಲ್ಲಿ ಜಾತಿ ಪದ್ಧತಿ ಹೋಗಲಾಡಿಸಲು ಬಸವಣ್ಣನವರ ಜೊತೆ ಹೋರಾಡಿದರು. ಕಾಯಕ ಶರಣರು ತಮ್ಮ ಕಾಯಕದಿಂದ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜ ಸುಧಾರಣೆಗೆ ತಮ್ಮ ತೊಡಗಿಸಿಕೊಂಡಿದ್ದು ಅವರ ಜೀವನ ಹಾಗೂ ವಚನಗಳಂತೆ ಪ್ರತಿಯೊಬ್ಬರು ದುಡಿದು ಊಟ ಮಾಡುವದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು.
ಸಮಾಜದಲ್ಲಿನ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಅನೇಕ ಮಹನೀಯರು ನಾನಾ ರೀತಿಯ ಹೋರಾಟಗಳನ್ನು ಮಾಡಿರುತ್ತಾರೆ. ಸಮಾಜದಲ್ಲಿನ ಜಾತಿ ಪದ್ದತಿ ನಿರ್ಮೂಲನೆ ಮಾಡುವ ಶಕ್ತಿ ಶಿಕ್ಷಣದಲ್ಲಿ ಇದ್ದು ವಿಧ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜ ಸುಧಾರಣೆಗೆ ತಮ್ಮದೇ ಆದ ಕೊಡುಗೆ ನೀಡುವಂತೆ ಕರೇ ನೀಡಿದರು.
ಹುಲಕೋಟಿ ಜಿ.ಸಿ.ಟಿ.ಎಂ. ಪದವಿ ಪೂರ್ವ ಕಾಲೇಜಿನ ಹಿರಿಯ ಶ್ರೇಣಿಯ ಕನ್ನಡ ಉಪನ್ಯಾಸಕರಾದ ಡಾ. ಅರ್ಜುನ ಗೊಳಸಂಗಿ ಅವರು ಕಾಯಕ ಶರಣರ ಜೀವನ ಮತ್ತು ಸಂದೇಶ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಎಂ.ಬಿ.ಸಂಕದ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ, ಸಮಾಜದ ಗಣ್ಯರು, ಸಾರ್ವಜನಿಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಪಂ.ವೆಂಕಟೇಶ ಅಲಕೋಡ್ ಹಾಗೂ ಸಂಗಡಿಗರು ನಾಡಗೀತೆ ಪ್ರಚುರ ಪಡಿಸಿದರು. ಬಾಬಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.