ಜಿಲ್ಲೆ

ಆಪರೇಷನ್​ ಸಿಂಧೂರ: ದೇಶದ ಜನರ ಒಗ್ಗಟ್ಟಿಗೆ ತಕ್ಕ ಪ್ರತಿಫಲ: ಎಚ್​. ಕೆ. ಪಾಟೀಲ.

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಆಪರೇಷನ್​ ಸಿಂಧೂರ ಯಶಸ್ವಿಯಾಗಿದೆ. ಪಾಕಿಸ್ತಾನಕ್ಕೆ ಇದು ಎಚ್ಚರಿಕೆ ಗಂಟೆಯೂ ಹೌದು ಎಂದು ಭಾರತೀಯ ಸೇನೆಯ ಕಾರ್ಯಕ್ಕೆ ಎಚ್​.ಕೆ. ಪಾಟೀಲ ಶ್ಲಾನೆ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಚ್​.ಕೆ. ಪಾಟೀಲ, ಕಾಶ್ಮೀರದ ಪಹಲ್ಗಾಮ್​ ಮೇಲೆ ನಡೆದ ಉಗ್ರರ ಕೃತ್ಯಕ್ಕೆ ತಕ್ಕ ಪ್ರತಿಕಾರವಾಗಿ ಭಾರತದ ಸೇನೆ 9 ಸ್ಥಳಗಳಲ್ಲಿನ ಉಗ್ರರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿದೆ. ಉಗ್ರರ ಕೃತ್ಯವನ್ನು ಭಾರತೀಯರಾಗಿ ನಾವು ಖಂಡಿಸಿದ್ದೇವೆ ಮತ್ತು ತಕ್ಕ ಪ್ರತಿಕಾರಕ್ಕೆ ಕಾಯುತ್ತಿದ್ದೇವು. ಉಗ್ರ ನೆಲೆಗಳ ಮೇಲೆ ನಡೆದ ಸೇನಾ ಕಾರ್ಯಾಚರಣೆ ಜನರಲ್ಲಿ ವಿಶ್ವಾಸ ಹಾಗೂ ಸಮಾಧಾನ ಮೂಡಿಸಿದೆ ಎಂದರು.

ದೇಶ ಶಾಂತಿಯ ಹಾದಿಯಲ್ಲಿ ಸಾಗುತ್ತಿದ್ದರೂ, ಅದನ್ನು ಕೆಣಕಿದರೆ ತಕ್ಕ ಶಿಕ್ಷೆ ಕೊಡಲಾಗುತ್ತದೆ ಎಂಬ ಬಲಿಷ್ಠ ಸಂದೇಶ ಪಾಕಿಸ್ತಾನಕ್ಕೆ ರವಾನೆ ಆಗಿದೆ. ಕಾಂಗ್ರೆಸ್​ ಕೂಡ ಉಗ್ರ ದಾಳಿ ಖಂಡಿಸಿದೆ ಮತ್ತು ದೇಶದ ಭದ್ರತೆ ಮತ್ತು ರಕ್ಷಣೆಗೆ ಕೇಂದ್ರ ಸರ್ಕಾರಕ್ಕೆ ಸಂಪೂರ್ನ ಸಹಕಾರ ನೀಡಲಿದೆ. ಶಾಂತಿಯನ್ನು ಶಕ್ತಿಯಲ್ಲಿಯೇ ಸಂರಕ್ಷಿಸಬೇಕು. ಇದೊಂದು ತಕ್ಕ ಶಾಸ್ತಿಯಾಗಿದೆ ಎಂದು ಎಚ್​.ಕೆ. ಪಾಟೀಲ ಎಂದು ತಿಳಿದರು.

ಭಾರತವು ಎಂದೆಂದಿಗೂ ಶಾಂತಿ ಭಯಸಿದ ದೇಶವಾಗಿದೆ. ಎಂದಿಗೂ, ಯಾರನ್ನೂ ಕೆಣಕುವುದಿಲ್ಲ. ಅಮಾಯಕ ಜನರ ಬಲಿ ತೆಗೆದುಕೊಂಡ ಉಗ್ರ ಕೃತ್ಯವನ್ನು ಖಂಡಿಸಿ ಮತ್ತು ದೇಶದ ಭದ್ರತೆ ದೃಷ್ಟಿಯಿಂದ ಸೇನೆ ದಾಳಿ ನಡೆಸಿದ್ದು ಪ್ರಶಂಸನೀಯ ಎಂದರು

ಯುದ್ಧ ಸಮಾನ ಪರಿಸ್ಥಿತಿಯಲ್ಲಿ ಜನತೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತ, ಪೊಲೀಸ್​ ಇಲಾಖೆ ಮತ್ತು ಮಾಜಿ ಸೈನಿಕರೊಂದಿಗೆ ಸಭೆ ಕರೆಯಲಾಗಿದೆ. ಇದಕ್ಕಾಗಿ ಮಂಗಳವಾರ ಬೆಳಿಗ್ಗೆ 10.30ಕ್ಕೆ ಡಿಸಿ ಕಚೇರಿ ಆಡಿಟೋರಿಯಂ ಹಾಲ್​ನಲ್ಲಿ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಟಿಗೂ ಮೊದಲು ಸಚಿವ ಎಚ್​.ಕೆ. ಪಾಟೀಲ ಆಪರೇಷನ್​ ಸಿಂಧೂರ ಕಾರ್ಯಾಚರಣೆ ಸ್ವಾಗತಿಸಿ ಟ್ವೀಟ್​ ಮಾಡಿದ್ದರು. ಭಾರತದ ಶಾಂತಿ ಮತ್ತು ರಕ್ಷಣೆಗೆ ಭಂಗ ಮಾಡಿದರೆ ಪಾಕಿಸ್ತಾನಕ್ಕೆ ಉಳಿಗಾಲ ಇಲ್ಲ ಎಂಬ ಅರ್ಥದಲ್ಲಿ ಟ್ವೀಟ್​ ಮಾಡಿ ಸೇನಾ ಕಾರ್ಯಾಚರಣೆ ಸ್ವಾಗತಿಸಿದರು.