ಜಿಲ್ಲೆ

ಆರೋಗ್ಯಕರ ಹೃದಯದ ಅರಿವು ದೀರ್ಘ ಬದುಕಿಗೆ ಸಂಜೀವಿನಿ

Gadag: ಉತ್ತಮ ಜೀವನ ಶೈಲಿ, ಪೌಷ್ಠಿಕ ಆಹಾರ ಸೇವನೆ, ದೈಹಿಕ ಚಟುವಟಿಕೆಗಳು ಸೇರಿದಂತೆ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೃದಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡು ದೀರ್ಘಕಾಲ ಬದುಕಬಹುದೆಂದು ಪ್ರೊ. ಸುಧಾ ಕೌಜಗೇರಿ ಹೇಳಿದರು.

ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ, ಯುವ ರೆಡ್‌ಕ್ರಾಸ್ ಘಟಕ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ಎನ್.ಎಸ್.ಎಸ್. ಘಟಕ ಹಾಗೂ ಆರ್.ಎಂ.ಎಸ್. ನರ್ಸಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಹೃದಯ ದಿನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಹೃದಯವು ನಮ್ಮ ದೇಹದ ಅತಿ ಮುಖ್ಯ ಅಂಗವಾಗಿದ್ದು, ಇದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ ಎಂದು ಹೇಳಿದರು.

ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ನೇತ್ರಾ ಮಾಳಿ ಅವರು ಪ್ರತಿವರ್ಷ ಸಪ್ಟೆಂಬರ್ 29ರಂದು ‘ವಿಶ್ವ ಹೃದಯ ದಿನ’ ಕಾರ್ಯಕ್ರಮ ಆಯೋಜಿಸುತ್ತಿದ್ದು, ಹೃದಯ ಆರೋಗ್ಯದ ಬಗ್ಗೆ ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅತಿ ಅವಶ್ಯವಾಗಿದೆ. ಹೃದಯ ಸಂಬAಧಿತ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೆಚ್ಚಾಗಿ ಕಾಣುತ್ತಿದ್ದು, ಇದಕ್ಕೆ ಜೀವನ ಶೈಲಿ, ಆಹಾರ ಪದ್ಧತಿ, ಕೆಲಸದ ಒತ್ತಡ ಮೊದಲಾದವುಗಳು ಮುಖ್ಯ ಕಾರಣಗಳಾಗಿದ್ದು, ವಿದ್ಯಾರ್ಥಿಗಳು ವ್ಯಾಯಾಮ, ಯೋಗಾಸನ, ಮೆಡಿಟೇಶನ್ ಮುಂತಾದ ಭೌತಿಕ ಮತ್ತು ಬೌದ್ಧಿಕ ಚಟುವಟಿಕೆಗಳೆಡೆಗೆ ಗಮನಹರಿಸಿ ಉತ್ತಮ ಆಹಾರ ಸೇವನೆ, ಧ್ಯಾನ, ಕನಿಷ್ಠ 6-8 ತಾಸುಗಳ ನಿದ್ದೆ ಮಾಡಬೇಕು. ರೋಗಕ್ಕೆ ಹೆದರದೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಹೇಳಿದರು.

ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕಿ ಮಹಾನಂದ ಹಿರೇಮಠ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಎನ್.ಎಸ್.ಎಸ್. ಘಟಕದ ಸಂಯೋಜಕ ಪ್ರೊ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹೃದಯದ ಆಕಾರ, ಸ್ವರೂಪ, ಕಾರ್ಯನಿರ್ವಹಣೆ, ಹೃದಯ ಸಂಬAಧಿತ ಕಾಯಿಲೆಗಳು, ಮುಂಜಾಗ್ರತಾ ಕ್ರಮಗಳು, ಆಹಾರ ಪದ್ಧತಿ, ಜೀವನ ಶೈಲಿ, ಯೋಗಾಸನಗಳು, ಹೃದಯಾಘಾತ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು. ಭಾಗವಹಿಸಿದ್ದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಂವಾದ ನಡೆಸಿ ಹೆಚ್ಚಿನ ಮಾಹಿತಿ ಪಡೆದರು. ಬುಳ್ಳಪ್ಪ ಕಾರ್ಯಕ್ರಮ ನಡೆಸಿಕೊಟ್ಟರು.