ವಿಶೇಷ ಚೇತನ ಮಕ್ಕಳಿಗೆ ಪರಿಸರ ನಿರ್ಮಾಣ-ಸಾಮಾಜಿಕ ಅರಿವು ಕಾರ್ಯಕ್ರಮ
ಗದಗ: ವಿಶೇಷ ಚೇತನ ಮಕ್ಕಳು ಸಾಧಿಸುವ ಸಾಮರ್ಥ್ಯ ಉಳ್ಳವರು. ಅವರಿಗೆ ನಮ್ಮೆಲ್ಲರ ಪ್ರೋತ್ಸಾಹ ಸಹಕಾರ ಬೇಕು ಹಾಗೂ ಅವರ ಪ್ರತಿಭೆಗೆ ಸ್ಪೂರ್ತಿ ನೀಡಿ ಕಲಿಕಾ ವಾತಾವರಣ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಗದುಗಿನ ಹುಡ್ಕೋ ಕಾಲೋನಿಯ ಸರ್ಕಾರಿ ಶಾಲೆ ನಂ. ೧೫ ರಲ್ಲಿ ಜರುಗಿದ ವಿಶೇಷ ಚೇತನ ಮಕ್ಕಳಿಗಾಗಿ ಪರಿಸರ ನಿರ್ಮಾಣ ಹಾಗೂ ಸಾಮಾಜಿಕ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಗ್ದ ಮಕ್ಕಳು ಕೆಲವೊಂದು ದೇಹನ್ಯೂನತೆ ಹೊಂದಿರುತ್ತಾರೆ. ಅವರಲ್ಲಿಯೂ ಎಲ್ಲ ಸಾಮರ್ಥ್ಯಗಳಿರುತ್ತವೆ. ಅವರಿಗಾಗಿ ಕೆಲವು ರಚನಾತ್ಮಕ ಕಾರ್ಯಗಳನ್ನು ಹಾಕಿಕೊಂಡು ಉತ್ತಮ ವಾತಾವರಣ, ಪರಿಸರ ಸ್ನೇಹಿ ಕಲಿಕಾ ಉಪಯುಕ್ತತೆಗೆ ಪೂರಕವಾಗುವಂತಹ ಪರಿಸರ ನಾವು ನಿರ್ಮಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಮತಿ ಪ್ರಮಿಳಾ ಬ್ಯಾಳಿ ವಿಶೇಷ ಚೇತನರ ಕುರಿತಾಗಿ ಸಮಾಜದಲ್ಲಿ ತಿಳುವಳಿಕೆ ಕಾರ್ಯಕ್ರಮ ಜರುಗುತ್ತಿರುವುದರಿಂದ ಆ ಮಕ್ಕಳ ಬಗೆಗೆ ಕಾಳಜಿ ಹಾಗೂ ಪರಿಸರ ನಿರ್ಮಾಣ ಸಾಧ್ಯವಾಗುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ವಿ.ಎನ್.ಬಸಾಪೂರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲಕರಾದ ಪ್ರಜ್ವಲ್ ಮುದಗಲ್ಲ, ಶಂಕರ ದಲಭಂಜನ, ಮಲ್ಲಿಕಾರ್ಜುನ ಹಡಪದ, ಗಿರಿಯಪ್ಪ ಗೊಲ್ಲರ, ಮಹದೇವಪ್ಪ ಜೀಂಕಾಳೆ, ಸಂತೋಷ ಪಾಟೀಲ, ನಿವೇದಿತಾ ಸಂಶಿ, ರೇಣುಕಾ ಗೌಳಕೇರ, ಮಹಾದೇವಿ ಉಪಸ್ಥಿತರಿದ್ದರು. ಬಿ.ಯಶೋಧಾ ಸ್ವಾಗತಿಸಿದರು, ಶೋಭಾ ವಗ್ಗಿ ವಂದಿಸಿದರು.