ಜಿಲ್ಲೆ

ನಗರದ ದುಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಸಚಿವ ಎಚ್.ಕೆ.ಪಾಟೀಲ ಭೇಟಿ

Gadag - Shivanand Hiremath
ಬಡಮಹಿಳೆ ಮತ್ತು ಮಕ್ಕಳಿಗೆ ವೇದ್ಯಕೀಯ ಸೇವೆ ತ್ವರಿಗತಿಯಲ್ಲಿ ದೊರಕಿಸಿ : ಸಚಿವ ಎಚ್.ಕೆ.ಪಾಟೀಲ
ವಿಜಯವಾಣಿ ಸುದ್ದಿಜಾಲ ಗದಗ 
ಬಡಮಹಿಳೆ ಮತ್ತು ಮಕ್ಕಳಿಗೆ ವೈದ್ಯಕೀಯ ಸೇವೆ ತ್ವರಿತಗತಿಯಲ್ಲಿ ದೊರಕಬೇಕು. ಯಾರೂ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂದು ಕಾನೂನು ಸಚಿವ ಡಾ. ಎಚ್ ಕೆ ಪಾಟೀಲ ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ರವಿವಾರ  ಕುಂದುಕೊರತೆ ಸಭೆ ಜರುಗಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ರೋಗಿಗಳಿಗೆ ಮೂಲಭೂತ ಸೌಲಭ್ಯದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯ ಒಳಗಡೆ ಹಾಗೂ ಹೊರಗಡೆ ಆವರಣ ಸ್ವಚ್ಛತೆಯಿಂದ ಕೂಡಿರುವಂತೆ ಕ್ರಮ ವಹಿಸಬೇಕು. ಆಸ್ಪತ್ರೆಗೆ ಬಂದ ರೋಗಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಯಲ್ಲಿನ ದಾಖಲಾದ ರೋಗಿ ಹಾಗೂ ಅವರ ಸಂಬಂಧಿಕರೊಂದಿಗೆ ಮಾತನಾಡಿ ಮೂಲಭೂತ ಸೌಕರ್ಯಗಳು ಒದಗುತ್ತಿರುವ ಕುರಿತು ಹಾಗೂ ಕುಂದುಕೊರತೆಗಳನ್ನು ಆಲಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವನಗೌಡ ಕರಿಗೌಡರ ಮಾತನಾಡಿ ಪ್ರತಿದಿನ 80 ರಿಂದ 100 ಒಪಿಡಿ ಹೊರರೋಗಿಗಳು,  ಬಾಣಂತಿಯರು ಹಾಗೂ ಸ್ತ್ರೀ ರೋಗಿಗಳು ಚಿಕಿತ್ಸೆ ಸೇವೆಯನ್ನು ಪಡೆಯುತ್ತಾರೆ. ಒಂದು ವರ್ಷದಲ್ಲಿ ಒಟ್ಟು 500 ರಿಂದ 600 ವರೆಗೆ ಹೆರಿಗೆ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ಅಂಕಿ ಅಂಶವನ್ನು ಸಭೆಗೆ ತಿಳಿಸಿದರು.
ಜಿಲ್ಲಾ ಕೇಂದ್ರದಲ್ಲಿ ಹೆರಿಗೆ ಆಸ್ಪತ್ರೆಗೆ ಬರುವ  ಗರ್ಭಿಣಿ ತಾಯಂದಿರು ಸಹಜ ಹೆರಿಗೆಯು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ತಾಲೂಕು ಆರೋಗ್ಯ ಕೇಂದ್ರದಲ್ಲಿ ನಡೆಯುತ್ತವೆ. ಮತ್ತು ಸಹಜವಾಗಿ ಹೆರಿಗೆ ಆಗದೆ ಇರುವ ಗರ್ಭಿಣಿ ತಾಯಂದಿರಿಗೆ ಗದಗ ಕೇಂದ್ರ ಸ್ಥಾನದಲ್ಲಿರುವ ಮಾನ್ವಿ ದುಂಡಪ್ಪ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಗೆ ಕಳುಹಿಸಲಾಗುತ್ತದೆ ಎಂದು ಸಭೆಯ ಗಮನಕ್ಕೆ ತಂದರು.
ಜಿಲ್ಲಾಸ್ಪತ್ರೆಯ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ನೀಲಗುಂದ ಅವರು ಆಸ್ಪತ್ರೆಗಳಲ್ಲಿನ ಕುಂದುಕೊರತೆಗಳ ನಿವಾರಣೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರ್‌ಸಾಬ ಬಬರ್ಜಿ, ಜಿಲ್ಲಾ ಪಂಚಾಯತ್ ಸಿಇಒ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಮಕ್ಕಳ ತಜ್ಞರು ಸ್ತ್ರಿರೋಗ ತಜ್ಞರು, ವೈದ್ಯರು ಅಧಿಕಾರಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.