ಜಿಲ್ಲೆ

ಜಿಲ್ಲೆಯಲ್ಲಿ 1758 ಕೋಟಿ ವೆಚ್ಚ: ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಉತ್ತಮ ಪ್ರಗತಿ

Gadag - Shivanand Hiremath
ಗದಗ: ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜನರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಗದಗ ಜಿಲ್ಲೆಯಾದ್ಯಂತ ಮಹತ್ತರ ಪ್ರಮಾಣದಲ್ಲಿ ಅನುಷ್ಠಾನಗೊಂಡಿರುವುದು ಅಂಕಿ–ಅಂಶಗಳಿಂದ ಸ್ಪಷ್ಟವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ ಬಿ ಅಸೂಟಿ ಹೇಳಿದರು.
ಗದಗ ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2025ರ ಜುಲೈ ಅಂತ್ಯದವರೆಗಿನ ಒಟ್ಟಾರೆ ಪ್ರಗತಿ ಉತ್ತಮವಾಗಿದೆ. ಇದಕ್ಕೆಲ್ಲ ಕಾರಣ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ್ ಅವರು ಮಾರ್ಗದರ್ಶನ ಮೂಲಕ ಪ್ರಗತಿ ಸಾಧನೆಯ ಸಾಧ್ಯವಾಗಿದೆ ಎಂದರು.
ಯೋಜನೆ ಆರಂಭದಿಂದ ‘ಗೃಹಲಕ್ಷ್ಮಿ ಯೋಜನೆ’ಯಲ್ಲಿ 2.56 ಲಕ್ಷ ಫಲಾನುಭವಿಗಳಿಗೆ ನೆರವು ತಲುಪಿದ್ದು, ಇದರ ಅನುಷ್ಠಾನ ಪ್ರಮಾಣ 97.99% ಆಗಿದೆ. ಈ ಯೋಜನೆಯಡಿ ಜಿಲ್ಲೆಗೆ ₹935 ಕೋಟಿ ಸಹಾಯ ನೀಡಲಾಗಿದೆ. ಇದೋಂದು ಮಹತ್ತರ ಮೈಲುಗಲ್ಲಾಗಿದೆ ಎಂದರು.
ಅದೇ ರೀತಿ ‘ಅನ್ನಭಾಗ್ಯ ಯೋಜನೆ’ ಮೂಲಕ 2.34 ಲಕ್ಷ ಜನರಿಗೆ ಅಕ್ಕಿ ವಿತರಣೆ ಆಗಿದ್ದು, ಇದರ ಅನುಷ್ಠಾನ ಪ್ರಮಾಣ 93.27%. ಇದಕ್ಕೆ ₹216.82 ಕೋಟಿ ವೆಚ್ಚವಾಗಿದೆ. ಈ ಯೋಜನೆಯಿಂದ ಹಸಿವು ಮುಕ್ತ ಕರ್ನಾಟಕ ಸಾಧ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಸಿವು ಮುಕ್ತ ಕರ್ನಾಟಕ ನನಸಾಗಿದೆ ಎಂದು ತಿಳಿಸಿದರು.
‘ಗೃಹಜ್ಯೋತಿ ಯೋಜನೆ’ ಅಡಿಯಲ್ಲಿ 2.77 ಲಕ್ಷ ಮನೆಮನೆಗಳಿಗೆ ಉಚಿತ ವಿದ್ಯುತ್ ಪ್ರಯೋಜನ ತಲುಪಿದ್ದು, ಪ್ರಗತಿ ಪ್ರಮಾಣ 98.68%. ಈ ಯೋಜನೆಗೆ ₹226.25 ಕೋಟಿ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ವೆಚ್ಚವಾಗಿದೆ.
‘ಯುವ ನಿಧಿ ಯೋಜನೆ’ ಮೂಲಕ 0.059 ಲಕ್ಷ ಯುವಕರಿಗೆ ಹಣಕಾಸು ನೆರವು ತಲುಪಿದ್ದು, ಶೇಕಡಾ 100% ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಇದರ ವೆಚ್ಚ ₹11.47 ಕೋಟಿಯಾಗಿದ್ದು, ನಿರುದ್ಯೋಗ ಯುವಕರಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಅದೇ ರೀತಿ, ‘ಶಕ್ತಿ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸಲಾಗಿದ್ದು, 1127.47 ಲಕ್ಷ ಪ್ರಯಾಣಗಳು ದಾಖಲಾಗಿವೆ. ಈ ಯೋಜನೆಯು ಕೂಡ 100% ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ₹369.29 ಕೋಟಿ ವೆಚ್ಚವಾಗಿದೆ.
ಒಟ್ಟಾರೆ, ಪಂಚ ಗ್ಯಾರಂಟಿ ಯೋಜನೆಗಳಡಿ ಗದಗ ಜಿಲ್ಲೆಯಲ್ಲಿ 1135.202 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆದಿದ್ದು, ಸರ್ಕಾರ ಇದಕ್ಕಾಗಿ ₹1758.83 ಕೋಟಿ ವೆಚ್ಚಮಾಡಿದೆ.
ಪಂಚ ಗ್ಯಾರಂಟಿ ಯೋಜನೆಗಳ ಸಕಾಲಿಕ ಜಾರಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಸರ್ಕಾರದ ಕಲ್ಯಾಣಕಾರ್ಯಗಳು ತಲುಪುತ್ತಿರುವುದಕ್ಕೆ ಇದೊಂದು  ಸಾಕ್ಷಿಯಾಗಿದೆ ಎಂದರು.
ರಾಜ್ಯ ಅಧ್ಯಕ್ಷರಾದ ಎಚ್ ಎಮ್ ರೆವಣ್ಣ ಅವರು ಸೂಚನೆ ಮೇರೆಗೆ ತಾಲೂಕಿನಲ್ಲಿ 3-4 ಗ್ರಾಮ ಪಂಚಾಯತ ಫಲಾನುಭವಿಗಳ ಸಮಸ್ಯೆ ಕುರಿತು ಜನಸ್ಪಂದನ ಸಭೆ ಜರುಗಿಸಲು ಸೂಚಿಸಿದ್ದಾರೆ ಅದನ್ನು ಸರಿಯಾಗಿ ನಿರ್ವಹಿಸೋಣ ಎಂದರು.
ಈ ಹಿಂದಿನ ಸಭೆಯಲ್ಲಿ ಪಡಿತರ ವಿತರಣೆ ಅಂಗಡಿಯಲ್ಲಿ ಗ್ಯಾರಂಟಿ ಯೋಜನೆಯ ಕುರಿತು ಪ್ಲೆಸ್ ಅಳವಡಿಕೆಗೆ ಸೂಚಿಸಲಾಗಿತ್ತು ಈ ಬಗ್ಗೆ ವಿವರವಾದ ಮಾಹಿತಿಯನ್ನು ಸಭೆಯಲ್ಲಿ ಸಲ್ಲಿಸುವಂತೆ ತಿಳಿಸಲಾಯಿತು.
ಅದೇ ರೀತಿಯಾಗಿ ಹಿಂದಿನ ಸಭೆಗಳ ನಡಾವಳಿಗಳು ಹಾಗೂ ಅನುಸರಣ ವರದಿಗಳನ್ನು ಸಭೆಯಲ್ಲಿ ಮಂಡಿಸಿ ಚರ್ಚಿಸಿ ಕೈಗೊಂಡ ಕ್ರಮದ ಕುರಿತು ಸಂಬಂದಿತ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂದು ತಿಳಿಸಲಾಯಿತು.
ಈ ಹಿಂದೆ ಹಲವಾರು ಬಾರಿ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಲ್ದಾಣದ ಸ್ವಚ್ಛತೆಗೆ, ಸಾರ್ವಜನಿಕರಿಗೆ ಸರಿಯಾಗಿ ಕೂರಲು ಆಸನ ವ್ಯವಸ್ಥೆ ಸೇರಿದಂತೆ ಹಲವಾರು ಸೂಚನೆಗಳನ್ನ ನೀಡಲಾಗಿದೆ ಈ ಎಲ್ಲ ಸೂಚನೆಗಳು ಆದಷ್ಟು ಬೇಗನೆ ಪರಿಹಾರವಾಗಲಿ ಇಲ್ಲದಿದ್ದಲ್ಲಿ ಸಂಬಂಧಿತ ಇಲಾಖೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳು ತಾಲೂಕ ಅಧ್ಯಕ್ಷರುಗಳು ಜಿಲ್ಲಾ ಸಮಿತಿ ಸದಸ್ಯರುಗಳು ಪಾಲ್ಗೊಂಡು ಗ್ಯಾರೆಂಟಿ ಅನುಷ್ಠಾನಕ್ಕೆ ಹಾಗೂ ಅರ್ಹರಿಗೆ ಯೋಜನೆ ತಲುಪಿಸುವಲ್ಲಿ ಇರುವ ಸಮಸ್ಯೆ ಹಾಗೂ ಪರಿಹಾರ ಕುರಿತು ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಸಮಿತಿಯ ಉಪಾದ್ಯಕ್ಷರುಗಳಾದ ಹೇಮಂತಗೌಡ ಪಾಟೀಲ, ಪಿ ಬಿ ಅಳಗವಾಡಿ, ಸಮಿತಿ ಸದಸ್ಯರು ಹಾಗೂ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಸಿ ಆರ್ ಮುಂಡರಗಿ, ಜಿ ಪಂ ಯೋಜನಾ ನಿರ್ದೇಶಕ ಎಂ ವಿ ಚಳಗೇರಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಬಾಕ್ಸ್ :
ಜಿಲ್ಲಾ ಸಮಿತಿಯ ಸದಸ್ಯರಾದ ಡಂಬಳದ ವಿರೂಪಾಕ್ಷಪ್ಪ ಯರಾಶಿ ಅವರು ಇತ್ತೀಚೆಗೆ ಅಕಾಲಿಕವಾಗಿ ಮರಣ ಹೊಂದಿದ ಕಾರಣ ಸಭೆಯಲ್ಲಿ ಸಭೆಯ ಆರಂಭಕ್ಕೂ ಮುನ್ನ ಸದರಿಯವರಿಗೆ ಎಲ್ಲರೂ ಮೌನಚರಣೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.