ಜಿಲ್ಲೆ

ಜಿಲ್ಲೆಯಲ್ಲಿ 1.31 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಹೆಸರು ಬಿತ್ತನೆ

Gadag - Shivanand Hiremath

ಶಿವಾನಂದ ಹಿರೇಮಠ, ಗದಗ
ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಕೃಷಿ ಇಲಾಖೆಯ 1.25 ಲಕ್ಷ ಹೆಕ್ಟೇರ್​ ಹೆಸರು ಬಿತ್ತನೆ ಗುರಿ ಪೈಕಿ 1.31 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಶೇ. 104.60ರಷ್ಟು ಬಿತ್ತನೆಯಾಗುವ ಮೂಲಕ ಜಿಲ್ಲೆಯಲ್ಲಿ ಶೇ. 4.60ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತನೆಯಾಗಿದೆ. ನಿರೀಸಿದಂತೆ ಈ ಬಾರಿ ಜಿಲ್ಲೆಯಲ್ಲಿ ಹೆಸರು ಬಂಪರ್​ ಬೆಳೆ ಆಗಲಿದೆ.
ಪ್ರಸಕ್ತ ಸಾಲಿನಲ್ಲಿ ಮಳೆ ನಿಗದಿತ ಸಮಯದಲ್ಲಿ ಆಗಿದ್ದರಿಂದ ರೈತರು ಸರಿಯಾದ ಸಮಯದಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಹಲವಡೆ ಹೆಸರು ಉತ್ತಮ ಇಳುವರಿ ನೀಡಿದೆ. ಕಳೆದ ಬಾರಿ ಮುಂಗಾರು ವೈಲ್ಯದಿಂದ ಬರಗಾಲ ಆವರಿಸಿ ಕಂಗಾಲಾಗಿದ್ದ ರೈತರು ಪ್ರಸಕ್ತ ಸಾಲಿನಲ್ಲಿ ಹೆಸರು, ಮೆಕ್ಕೆಜೋಳ, ತೊಗರಿ, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ ರೈತರು.
ಗುರಿ ಸಾಧನೆ ಮೀರಿ ಬಿತ್ತನೆಯಾದ ಬೆಳೆಗಳು:
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಹೆಸರು ಮತ್ತು ಮೆಕ್ಕೆಜೋಳ ಕೃಷಿ ಇಲಾಖೆಯ ನಿರೀಕ್ಷೆಗೂ ಮೀರಿ ಬಿತ್ತನೆಯಾಗಿದೆ. 1.25 ಲಕ್ಷ ಹೆಕ್ಟೇರ್​ ಬಿತ್ತನೆ ಗುರಿ ಪೈಕಿ 1.31 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. 1.01 ಲಕ್ಷ ಹೆಕ್ಟೇರ್​ ಬಿತ್ತನೆ ಗುರಿ ಪೈಕಿ 1.02 ಲಕ್ಷ ಹೆಕ್ಟೇರ್​ ಮೆಕ್ಕೆಜೋಳ ಬಿತ್ತನೆಯಾಗಿದೆ. ಇನ್ನು ದ್ವಿದಳ ಧಾನ್ಯದ ಮುಖ್ಯ ಬೆಳೆ ತೊಗರಿಯು 750 ಹೆಕ್ಟೇರ್​ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ 1,155 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆಯಾಗಿದೆ. 29 ಸಾವಿರ ಹೆಕ್ಟೇರ್​ ಬಿತ್ತನೆ ಗುರಿ ಪೈಕಿ 28 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ತೃಣಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಕಾಳು ಹಾಗೂ ವಾಣಿಜ್ಯ ಬೆಳೆ ಸೇರಿ 3.01 ಲಕ್ಷ ಹೆಕ್ಟೇರ್​ ಗುರಿ ಪೈಕಿ 2.93 ಲಕ್ಷ ಹೆಕ್ಟೇರ್​ ಬಿತ್ತನೆಯಾಗಿದ್ದು, ಶೇ. 97.44ರಷ್ಟು ಸಾಧನೆಯಾಗಿದೆ.