ಜಿಎನ್ಟಿಟಿಎಫ್ ಸಂಸ್ಥೆ ಮೂಲಕ ಯುವಜನತೆಗೆ ಕೌಶಲ್ಯ ಅಭಿವೃದ್ಧಿ ಪಡಿಸುವ ತರಬೇತಿ ನೀಡಿ ಉದ್ಯೋಗ ಪಡೆಯುವಂತ ಕಾರ್ಯವಾಗಬೇಕು: ಸಿಎಂ ಸಿದ್ದರಾಮಯ್ಯ
ವಿಜಯವಾಣಿ ಸುದ್ದಿಜಾಲ ಗದಗ
ಜಿಎನ್ಟಿಟಿಎಫ್ ಸಂಸ್ಥೆ ಮೂಲಕ ಯುವಜನತೆಗೆ ಕೌಶಲ್ಯ ಅಭಿವೃದ್ಧಿ ಪಡಿಸುವ ತರಬೇತಿ ನೀಡಿ ಉದ್ಯೋಗವನ್ನು ಪಡೆಯುವಂತ ಕಾರ್ಯವಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಗದಗ ಕೋ ಆಪರೇಟೀವ್ ಇಂಡಸ್ಟ್ರಿಯಲ್ ಎಸ್ಟೇಟ್ ಆವರಣದಲ್ಲಿ ಮಂಗಳವಾರ ಜಿಎನ್ಟಿಟಿಎಫ್ ಸಂಸ್ಥೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜಿಎನ್ಟಿಟಿಎಫ್ ಎಂಬ ಪ್ರತಿಷ್ಠಿತ ಸಂಸ್ಥೆಯನ್ನು ಗದಗ ನಗರದಲ್ಲಿ ಪ್ರಾರಂಭಿಸಿದ್ದು ಸಂತೋಷದ ವಿಷಯವಾಗಿದೆ. ಈಗಾಗಲೇ ಈ ಸಂಸ್ಥೆ ರಾಜ್ಯದ 16 ಕಡೆ ಕಾರ್ಯನಿರ್ವಸುತ್ತಿದ್ದು ಹಲವಾರು ತರಬೇತಿ ಮೂಲಕ ಯುವಜನಕ್ಕೆ ಕೆಲಸಕ್ಕೆ ಬೇಕಾದ ಕೌಶಲ್ಯವನ್ನು ತರಬೇತಿ ಮೂಲಕ ನೀಡುತ್ತಿದೆ. ಯುವ ಜನರಿಗೆ ಕೌಶಲ್ಯ ಅಭಿವೃದ್ಧಿ ಆಗಬೇಕು. ಇಲ್ಲದಿದ್ದರೆ ಉದ್ಯೋಗ ದೊರಕಿಸಿಕೊಳ್ಳುವುದು ಕಷ್ಟ. ಈಗಿನ ಮಾರುಕಟ್ಟೆಯಲ್ಲಿರುವ ಉದ್ಯೋಗಕ್ಕೆ ಬೇಕಾದ ಕೌಶಲ್ಯವನ್ನು ದಿನದಿಂದ ದಿನಕ್ಕೆ ಅಭಿವೃದ್ಧಿ ಪಡಿಸಿಕೊಳ್ಳಬೇಕು. ಕೌಶಲ್ಯ ಇಲ್ಲದೆ ಹೋದರೆ ಯುವಕರಿಗೆ ಕೆಲಸ ಸಿಗುವುದು ಕಷ್ಟ. ಹಾಗಾಗಿ ನೂತನವಾಗಿ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನು ಪ್ರಾರಂಭ ಮಾಡಲಾಯಿತು ಎಂದು ಹೇಳಿದರು.
ನಮ್ಮ ಸರ್ಕಾರ ಪಂಚ ಗ್ಯಾರಂಟಿ ಗಳಲ್ಲಿ ಒಂದಾದ ಯುವನಿಧಿ ಮೂಲಕ ನಿರುದ್ಯೋಗಿ ಪದವೀಧರಿಗೆ 3000 ರೂ, ಡಿಪ್ಲೊಮಾ ಕಲಿತವರಿಗೆ 1500 ರೂ, ಹಾಗೇ ವರ್ಷಗಳ ಕಾಲ ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯನ್ನು ನೀಡುಲಾಗುತ್ತಿದೆ. ಈ 2 ವರ್ಷದಲ್ಲಿ ಯುವಜನತೆ ತಮಗೆ ಆಸಕ್ತಿಯಿರುವ ಯಾವುದಾದರು ಒಂದು ಕೌಶಲ್ಯವನ್ನು ಅಭಿವೃದ್ಧಿ ಪಡೆಸಿಕೊಳ್ಳಲು ಕೌಶ್ಯಭಿವೃದ್ಧಿ ಇಲಾಖೆಯಿಂದ ತರಬೇತಿ ನೀಡಬೇಕೆಂದು ಕೌಶಲ್ಯ ಅಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಸೂಚಿಸಲಾಗಿದೆ. ಅದರಂತೆ ಅವರು ಕೌಶಲ್ಯ ಅಭಿವೃದ್ಧಿ ಪಡಿಸುವ ತರಬೇತಿ ಕೈಗೊಳ್ಳುತ್ತಿದ್ದು ಹಾಗು ಉದ್ಯೋಗ ಮೇಳವನ್ನು ಏರ್ಪಡಿಸಿ, ಉದ್ಯಮಿ ಮತ್ತು ಉದ್ಯೋಗ ಆಕಾಂಕ್ಷೆಗಳ ವೇದಿಕೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಜಿಲ್ಲೆಯ ವಿದ್ಯಾಥಿರ್ಗಳ, ಯುವ ಜನರ ಕೌಶಲ್ಯ ಹೆಚ್ಚಿಸಲು ಈ ಸಂಸ್ಥೆ ಪ್ರಾರಂಭಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಮಹತ್ವಾಕಾಂ ಯುವ ಸಮೂಹ ಇದೆ. ಅವರಿಗೆ ಉದ್ಯೋಗ ಕೌಶಲ್ಯ ನೀಡುವುದು ಈ ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಪೌರಾಡಳಿತ ಮತ್ತ ಹಜ್ ಸಚಿವ ರಹೀಂಖಾನ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ. ಎಸ್. ಪಾಟೀಲ, ನರಗುಂದ ವಿಧಾನಸಭೆ ಶಾಸಕ ಸಿ. ಸಿ. ಪಾಟೀಲ, ಮಾಜಿ ಶಾಸಕ ಡಿ. ಆರ್. ಪಾಟೀಲ, ಜಿಎನ್ಟಿಟಿಎಫ್ ಚೇರಮನ್ ಕೃಷ್ಣಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.