ಗದಗ: ಗದಗ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಗೆ ಕೆ.ಎಚ್.ಪಾಟೀಲರ ಹೆಸರನ್ನು ನಾಮರಕರಣ ಮಾಡಲು ಸರ್ಕಾರ ಕ್ರಮ ವಹಿಸಿದ್ದನ್ನು ಜಿಲ್ಲಾ ಬಿಜೆಪಿ ವಕ್ತಾರ ಎಂ. ಎಂ. ಹಿರೇಮಠ ವಿರೋಧಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೆ. ಎಚ್. ಪಾಟೀಲರ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ, ಕೆ. ಎಚ್. ಪಾಟೀಲರ ಹೆಸರನ್ನು ಈಗಾಗಲೇ ಗದಗ ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ನಾಮಕರಣ ಮಾಡಲಾಗಿದೆ. ರೈತರಿಂದ ವಸೂಲಿ ಮಾಡಿದ ತೆರಿಗೆ ಹಣದಲ್ಲಿ ಕಟ್ಟಿದ ರೈತ ಭವನಕ್ಕೂ ಅವರ ಹೆಸರಿಡಲಾಗಿದೆ. ನಗರದ ವೀರಶೈವ ಲೈಬ್ರರಿ ಎದುರಿಗೆ ಕೆ. ಎಚ್. ಪಾಟೀಲ್ ಸರ್ಕಲ್ ಎಂದು ನಾಮಕರಣ ಸೇರಿದಂತೆ ಎಪಿಎಂಸಿ ಯಾರ್ಡ್ನಲ್ಲಿ ಹಾಗೂ ಕಾಟನ್ಸೆಲ್ ಸೊಸೈಟಿಯಲ್ಲಿ ಕೆ. ಎಚ್. ಪಾಟೀಲರ ಮೂತಿರ್ಯನ್ನು ಪ್ರತಿಷ್ಠಾಪಿಸಲಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರದ ಅನುದಾನದಲ್ಲಿ ಕಟ್ಟುತ್ತಿರುವ ಹೊಸ ಬಡಾವಣೆಗೆ ಕೆ.ಎಚ್.ಪಾಟೀಲರ ಹೆಸರನ್ನು ಇಡಲು ನಗರಸಭೆಯಿಂದ ಠರಾವ್ ಪಾಸ್ ಮಾಡಲಾಗಿದೆ. ಕೆ. ಎಚ್. ಪಾಟೀಲ ಕೃಷಿ ವಿಜ್ಞಾನಕೇಂದ್ರ, ಕೆ.ಎಚ್.ಪಾಟೀಲ ಆಸ್ಪತ್ರೆ ಹಾಗು ಕೆ.ಎಚ್.ಪಾಟೀಲರ ಹೆಸರಿನಲ್ಲಿ ಇನ್ನೂ ಅನೇಕ ರಸ್ತೆಗಳಿಗೆ ಕಾಲೂನಿಗಳಿಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಹೀಗಿದ್ದರೂ ಜಿಮ್ಸಗೆ ಕೆ.ಎಚ್. ಪಾಟೀಲ ಹೆಸರು ನಾಮಕಾರಣ ಮಾಡುತ್ತಿರುವುದನ್ನು ಬಿಜೆಪಿ ವಿರೋಧಿಸುತ್ತದೆ. ಡಾ. ಬಿ. ಆರ್. ಅಂಬೇಡ್ಕರ್ ಅಥವಾ ಮಾಜಿ ರಾಷ್ಟ್ರಪತಿ ಎಪಿಜಿ ಅಬ್ದುಲ್ ಕಲಾಂ, ಮಾಜಿ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರೀ ಅಥವಾ ಮಾಜಿ ಗೃಹ ಸಚಿವ ಸರ್ಧಾರ ವಲ್ಲಭಬಾಯಿ ಪಟೇಲ್ ಅವರ ಹೆಸರನ್ನು ನಾಮಕರಣ ಮಾಡಲು ಬಿಜೆಪಿ ಆಗ್ರಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದ್ದಾರೆ.