ಗಜೇಂದ್ರಗಡ : ತಾಲೂಕಿನ ರಾಜೂರಿನ ಶ್ರೀ ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ 60 ದಿನಗಳವರೆಗೆ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ಜರುಗಿತು.
ಶಾಲೆಯ ಮುಖ್ಯೋಪಾಧ್ಯಾಯರಾದ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಕೆ. ಬಿ. ಬೆನಕನವಾರಿ ಅವರು ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳು ಮಾನಸಿಕವಾಗಿ ಸದೃಢವಾಗಲು ಹಾಗೂ ಅವರಲ್ಲಿನ ಬೌದ್ಧಿಕ ಪ್ರಜ್ಞೆ ವಿಕಸಿತಗೊಳ್ಳಲು ಮಕ್ಕಳಿಗೆ ನಮ್ಮ ತಲೆಮಾರು ಪರಂಪರೆ ಅನುಭವಿಸುವ ವಾತಾವರಣ ಕಲ್ಪಿಸುವುದು ಅನಿವಾರ್ಯ. ಆದರೆ ನಗರೀಕರಣದ ಬೆಳವಣಿಗೆಯಲ್ಲಿ ಮಕ್ಕಳು ತಮಗೆ ಬಾಲ್ಯದಲ್ಲಿ ಸಿಗಬೇಕಾದ ಅನೇಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ವೇಗವಾಗಿ ಓಡುತ್ತಿರುವ ಆಧುನಿಕ ಜಗತ್ತಿನಲ್ಲಿ ನಮ್ಮ ಮಕ್ಕಳು ಬಾಲ್ಯ ಸುಖ ಕಳೆದುಕೊಂಡು ಏಕಾಂತನ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಪೋಷಕರಿಗೆ ಎಷ್ಟೇ ಒತ್ತಡ ಹಾಗೂ ಸಮಯದ ಕೊರತೆಗಳು ಇದ್ದರೂ ಮಕ್ಕಳಿಗಾಗಿ ಸಮಯ ಮಾಡಿಕೊಂಡು ಅವರಿಗೆ ಸಹಜ ಬಾಲ್ಯ ಕಲ್ಪಿಸಬೇಕಾಗಿದೆ, ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ತಮ್ಮ ಕಾರ್ಯವಿಧಾನದಲ್ಲಿ ಬದಲಾವಣೆ ಮಾಡಿಕೊಂಡು ನೈಜ ಶಿಕ್ಷಣ ಪರಿಚಯಿಸಬೇಕಾಗಿದೆ, ಈ ನಿಟ್ಟಿನಲ್ಲಿ ನಮ್ಮ ಶ್ರೀ ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯು ತನ್ನ ಶಿಕ್ಷಣ ವಿಧಾನದಲ್ಲಿ ನಮ್ಮ ನೆಲದ ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆ ಪರಿಚಯಿಸುವ ಕಾರ್ಯವನ್ನು ಅಳವಡಿಸಿಕೊಂಡಿದೆ, ಇದರ ಜೊತೆಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಿ ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಸಂಸ್ಕೃತಿ ಪರಂಪರೆಯನ್ನು ಪರಿಚಯ ಮಾಡಿಸುತ್ತಿರುವುದು ಶ್ಲಾಘನೀಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ಜಿ. ಜಿ. ವ್ಯಾಪಾರಿ ರವರು ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರತರಲು ಇಂತಹ ಬೇಸಿಗೆ ಶಿಬಿರಗಳು ಸಹಾಯಕಾರಿಯಾಗಲಿವೆ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ವೇದಿಕೆ ಕಲ್ಪಿಸಿ ಕೊಟ್ಟಂತಾಗಿದೆ, ಶಿಬಿರದಲ್ಲಿ ಪಡೆದ ಪಠ್ಯಕ್ರಮದ ತರಬೇತಿ ಮಕ್ಕಳ ಜ್ಞಾನದ ಮೇಲೆ ಸಾಕಷ್ಟು ಸಕರಾತ್ಮಕ ಪರಿಣಾಮ ಬೀರಲಿದೆ, ಅಷ್ಟೇ ಅಲ್ಲದೆ ಬೇಸಿಗೆ ಶಿಬಿರವು ವಿದ್ಯಾರ್ಥಿಗಳ ಸೃಜನಾತ್ಮಕ ಚಟುವಟಿಕೆಗಳಿಗೆ ಉತ್ತಮ ವೇದಿಕೆಯಾಗಿದೆ. ಪ್ರತೀ ಮಗು ವಿದ್ಯಾರ್ಥಿ ಜೀವನದಲ್ಲಿ ಇರುವಾಗಲೇ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಕಲಿಯಲು ಈ ಶಿಬಿರವು ಸಹಾಯಕವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೂಡು ಕುಟುಂಬಗಳ ಮರೆಯಾಗುವಿಕೆ ಹಾಗೂ ನಗರೀಕರಣದಿಂದ ಮಕ್ಕಳು ಸಹಜ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಸಹಜ ಬಾಲ್ಯ ಮಕ್ಕಳ ಬೆಳವಣಿಗೆಗೆ ಗಟ್ಟಿತನವನ್ನು ರೂಪಿಸಲಿದೆ ಎಂದು ಶಿಬಿರದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಕರೆ ನೀಡಿದರು.
ಕಾರ್ಯಕ್ರಮದ ಅತಿಥಿಗಳಾದ ಶ್ರೀಮತಿ ಎಸ್. ಕೆ. ಬೆನಕನವಾರಿ ರವರು ಮಕ್ಕಳ ಮನಸ್ಸು ವಿಕಾಸಗೊಳ್ಳಲು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪೋಷಕರು ಆದ್ಯತೆ ಕೊಡಬೇಕು, ಇಂದಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಅಂಕಗಳಿಸಬೇಕು ಎಂದು ಆಶಿಸುತ್ತಾರೆ ಆದರೆ ಅವರ ಮಾನಸಿಕ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಾಸನದ ಬಗ್ಗೆ ಗಮನವೇ ಹರಿಸುವುದು ಕಡಿಮೆಯಾಗಿದೆ. ನಿಮ್ಮ ಮಕ್ಕಳ ಅಂಕಗಳು ಅಂಕಪಟ್ಟಿಗೆ ಸೀಮಿತವಾದರೆ, ಅವರ ಪಠ್ಯೇತರ ಚಟುವಟಿಕೆಗಳು ಅವರ ಮುಂದಿನ ಜೀವನಕ್ಕೆ ಆಶಾಕಿರಣವಾಗಿ ಕಾಣಬಹುದು. ಅವರ ಚಟುವಟಿಕೆಗಳು ಕೇವಲ ಶಿಬಿರಕ್ಕೆ ಮೀಸಲಾಗದೆ ಅವರಿಗೆ ಪ್ರತಿನಿತ್ಯವೂ ಪ್ರೋತ್ಸಾಹಿಸಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ಶಿಬಿರದ ವಿದ್ಯಾರ್ಥಿನಿಯಾದ ಕು. ಸಾವಿತ್ರಿ ಬೆನಕನವಾರಿ ಮಾತನಾಡಿ ನಮ್ಮ ಶಾಲೆಯು ನಮ್ಮಂತಹ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಿದೆ, ನಮ್ಮ ಶಾಲೆಯು ಶಿಬಿರವನ್ನು ಉತ್ತಮವಾಗಿ ಸಂಘಟಿಸಿದೆ. ಶಿಬಿರದಲ್ಲಿ ನಮಗೆ ಪಠ್ಯಕ್ರಮದ ಸಿಲಬಸ್ ಜೊತೆಗೆ ಮಣ್ಣಿನ ಮಾದರಿ, ಚಿತ್ರಕಲೆ, ಸಂಗೀತ, ನೃತ್ಯ, ರಂಗೋಲಿ, ಮೆಹಂದಿ, ಕರಾಟೆ, ಯೋಗಾಸನ, ಶ್ಲೋಕ ಹಾಗೂ ಮುಂತಾದ ಕಲೆಗಳ ತರಬೇತಿ ಚೆನ್ನಾಗಿ ನಡೆದಿರುವುದು ಕಂಡು ಬಂದಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಇದೇ ವೇಳೆ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಗ್ರಾಮೀಣ ಹಾಗೂ ಸಂಪ್ರದಾಯಕ ಕ್ರೀಡೆಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ವಿತರಿಸಲಾಯಿತು, ಬೇಸಿಗೆ ಶಿಬಿರದ ಕುರಿತು ಇನ್ನೂ ಕೆಲವು ಮಕ್ಕಳು ಹಾಗೂ ಪಾಲಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕು. ಸ್ಮಿತಾ ಪಾಟೀಲ ಹಾಗೂ ಸಂಗಡಿಗರು ಹಾಡಿದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶಾಲೆಯ ವಿದ್ಯಾರ್ಥಿಗಳಾದ ಕು. ಪುಟ್ಟರಾಜ ಕಡಬಲಕಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು, ಕು. ನಿಂಗಪ್ಪ ಹಕಪ್ಪರದ ಸ್ವಾಗತಿಸಿದರು, ಕು. ಹರ್ಷಾ ಜೋಗಿನ್ ವಂದಿಸಿದರು. ನಂತರ ಶಿಬಿರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಬೇಸಿಗೆ ಶಿಬಿರದ ಸಮಸ್ತ ಶಿಕ್ಷಕ/ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.