ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರ ಮೂಲಕ ಸಲ್ಲಿಕೆಯಾಗಿರುವ ಕಾಂತರಾಜು ವರದಿಯ ದತ್ತಾಂಶಗಳಲ್ಲಿ ನಮೂದಾಗಿರುವ ಗಾಣಿಗ ಸಮಾಜದ ರಾಜ್ಯದ ಜನಸಂಖ್ಯೆ ಸರಿಯಾಗಿಲ್ಲ. ವಿಜಯಪುರ ಒಂದೇ ಜಿಲ್ಲೆಯಲ್ಲಿ ನಮ್ಮವರು ಆರು ಲಕ್ಷದಷ್ಟಿದ್ದಾರೆ. ಹೀಗಾಗಿ ಈ ವರದಿಯ ದತ್ತಾಂಶಗಳೆಲ್ಲವೂ ಸುಳ್ಳು. ಇದು ಸಮಾಜಕ್ಕೆ ಸಿಗಬೇಕಾಗಿರುವ ಸೌಲಭ್ಯ, ರಾಜಕೀಯ ಸ್ಥಾನ-ಮಾನಗಳನ್ನು ತಪ್ಪಿಸುವ ಹುನ್ನಾರ ಎಂದು ಗದಗ ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಬಸವರಾಜ ಬಿಂಗಿ ಕಿಡಿಕಾರಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ವರದಿಯಲ್ಲಿ ನಮ್ಮ ಸಮಾಜದ ಜನಸಂಖ್ಯೆಯನ್ನು ಕೇವಲ 7 ಲಕ್ಷ ಎಂದು ತೋರಿಸಿದ್ದಾರೆ. ಇದು ರಾಜ್ಯದಲ್ಲಿ ಇರುವ ಕೆಸ್ತ ಹಾಗೂ ಜೈನ ಸಮಾಜಕ್ಕಿಂತಲೂ ಕಡಿಮೆಯಿದೆ. ಹಾಗಾದರೆ, ಸರ್ಕಾರ ನಮ್ಮನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸುತ್ತಾರಾ ಎಂದು ಪ್ರಶ್ನಿಸಿದರು.
ಅಖಿಲ ಕರ್ನಾಟಕ ಗಾಣಿಗ ಸಮಾಜದ ರಾಜ್ಯ ಟಕದ ಅಧ್ಯಕ್ಷ ಡಾ.ಶೇಖರ ಸಜ್ಜನರ ಮಾತನಾಡಿ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಸರ್ಕಾರವು ಸಮಾಜಗಳನ್ನು ಒಡೆಯುವ ಕೆಲಸ ಮಾಡಿದಂತಿದೆ. ನಮ್ಮ ಸಮಾಜದಲ್ಲಿ ಐದು ಒಳಪಂಗಡಗಳಿವೆ. ಇದು ಹಾವನೂರ ಆಯೋಗ, ಪ್ರಸ್ತುತ ಇರುವ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯಲ್ಲೂ ಉಲ್ಲೇಖವಿದೆ. ಆದರೆ, ರಾಜ್ಯ ಸರ್ಕಾರ ಗಾಣಿಗ ಸಮಾಜದಲ್ಲಿ ಬರುವ ಐದು ಒಳಪಂಗಡಗಳ ಜೊತೆಗೆ ಮತ್ತೆ ಐದು ಸೇರಿಸಿ ಸಮಾಜವನ್ನು ಒಡೆಯುವ ಹುನ್ನಾರ ಮಾಡಿದೆ ಎಂದರು.
ಅಶೋಕ ನವಲಗುಂದ, ನಿಂಗಪ್ಪ ಕೆಂಗಾರ, ಸುರೇಶ ಮರಳಪ್ಪನವರ, ಕೋಶಾಧ್ಯಕ್ಷ ಶರಣಗೌಡ ಪವಾಡಿಗೌಡರ, ಐ.ಎಂ. ಕಿರೇಸೂರ, ರಮೇಶ ಮಂದಾಲಿ, ಬಿ.ಎಸ್. ವಡವಟ್ಟಿ, ಪ್ರಕಾಶ ಮುಧೋಳ ಇತರರು ಇದ್ದರು.