ಜಿಲ್ಲೆ

ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿಗೆ ಬೆಂಬಲ ಬೆಲೆ ನಿಗದಿ

Gadag - Shivanand Hiremath

ಗದಗ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಹಿಂಗಾರು ಹಂಗಾಮಿನ ಸೂರ್ಯಕಾಂತಿ ಹುಟ್ಟುವಳಿ ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ 2024-25 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೃಷಿ ಹುಟ್ಟುವಳಿಯಿಂದ ಸೂರ್ಯಕಾಂತಿ ಖರೀದಿಸುವ ಕುರಿತು ಜಿಲ್ಲಾ ಟಾಸ್ಕ್ ಫೋರ್ಸ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತೆರೆಯಲಾಗುವ ಸೂರ್ಯಕಾಂತಿ ಹುಟ್ಟುವಳಿ ಖರೀದಿ ಕೇಂದ್ರಗಳಲ್ಲಿ ಖರೀದಿಸಲಾಗುವ ಎಫ್. ಎ ಕ್ಯೂ ಗುಣಮಟ್ಟ ಪರಿಶೀಲನೆಗಾಗಿ ಗ್ರೇಡರ್‌ಗಳನ್ನು ನೇಮಕ ಮಾಡಬೇಕು ಮತ್ತು ಅವರಿಗೆ ಎಫ್‌ಎಕ್ಯೂ ಗ್ರೇಡಿಂಗ್ ತರಬೇತಿ ನೀಡಬೇಕು. ಸರ್ಕಾರದ ಆದೇಶಾನುಸಾರ ಪ್ರತಿ ಎಕರೆಗೆ 4 ಕ್ವಿಂಟಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ 20 ಕ್ವಿಂಟಾಲ್ ಸೂರ್ಯಕಾಂತಿ ಖರೀದಿಸಬೇಕು. ಸರ್ಕಾರದ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಹುಟ್ಟುವಳಿಯ ಖರೀದಿ ಕುರಿತು ರೈತರು ಸದುಪಯೋಗಪಡೆದುಕೊಳ್ಳಲು ರೈತರಿಗೆ ತಿಳುವಳಿಕೆ ನೀಡಲು ಕರಪತ್ರ ಗಳ ಮೂಲಕ ಹಾಗೂ ವ್ಯಾಪಕ ಪ್ರಚಾರ ಕೈಗೊಳ್ಳುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ರೈತರು ಯೋಜನೆಯ ಲಾಭ ಪಡೆಯಲು ಅನುಕೂಲವಾಗುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ನಿರ್ದೇಶನ ನೀಡಿದರು.
ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಸುಧಾ ಬಂಡಿ ಅವರು ಮಾತನಾಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಹುಟ್ಟುವಳಿಗೆ ಪ್ರತಿ ಕ್ವಿಂಟಾಲ್‌ಗೆ ರೂ 7,280 ರಂತೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಸರ್ಕಾರದ ಆದೇಶದ ಅನುಸಾರ ಎನ್.ಸಿ.ಸಿ.ಎಫ್. ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿಯಾಗಿ ಹಾಗೂ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ ನಿಯಮಿತ ( ಕೆ ಓ ಎಫ್ ) ಬೆಂಗಳೂರು ಇವರನ್ನು ರಾಜ್ಯ ಮಟ್ಟದ ಖರೀದಿ ಏಜೆನ್ಸಿಯಾಗಿ ನೇಮಿಸಿದ್ದು ರೈತರು ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ಆದೇಶಿಸಲಾಗಿದೆ. ಜಿಲ್ಲೆಯ 9 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ , ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ ಇಲಾಖೆ, ಸಹಕಾರಿ ಸಂಘಗಳ ಉಪನಿಬಂಧಕರು, ಕೆ ಓ ಎಫ್ ವ್ಯವಸ್ಥಾಪಕರು ಹಾಜರಿದ್ದರು.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಯನ್ವಯ ಜಿಲ್ಲೆಯ 9 ಕಡೆಗಳಲ್ಲಿನ  ಸೂರ್ಯಕಾಂತಿ ಖರೀದಿ ಕೇಂದ್ರಗಳು : ಗದಗ-ಬಳಗಾನೂರು, ಹೊಂಬಳ,: ಶಿರಹಟ್ಟಿ- ರಣತೂರ, ಶಿಗ್ಲಿ ; ರೋಣ- ಅಬ್ಬಿಗೇರಿ,: ನರಗುಂದ- ಕಣಕಿಕೊಪ್ಪ , ನರಗುಂದ ; ಮುಂಡರಗಿ- ಬರದೂರು, ಕಲಕೇರಿ.