ಜಿಲ್ಲೆ

ಮತಾಂತರಕ್ಕೆ ನಲುಗಿದ ಗದಗದ ಕುಟುಂಬ: ಗೋವಾದಲ್ಲಿ ಬಾಡಿಗೆ ಮನೆ ಕೊಡಿಸುವ ನೆಪದಲ್ಲಿ ಸಲುಗೆ, ತಾಯಿ, ಮಗಳು ನಾಪತ್ತೆ

ರಮೇಶ್​ ಕುಮಾರ್​​ ಬಿ ಎಡಮೋಳೆ

| ಶಿವಾನಂದ ಹಿರೇಮಠ ಗದಗ

ಮನೆ ಒಡತಿ ಮತಾಂತರಗೊಂಡು ಅನ್ಯಧರ್ಮದ ಯುವಕನನ್ನು ವರಿಸಿದ ಪರಿಣಾಮ ಹಿಂದು ಕುಟುಂಬವೊಂದು ಬೀದಿಗೆ ಬಂದಿದೆ. ಕುಟುಂಬದ ಹಿರಿಯ ಮಗಳೂ ಇತ್ತೀಚೆಗೆ ಕಾಣೆಯಾಗಿದ್ದು, ಅವಳೂ ಮತಾಂತರವಾಗಿರುವ ಶಂಕೆ ಮೂಡಿದೆ. ದೂರು ಕೊಟ್ಟರೂ ತನಿಖೆ ನಡೆಸದೇ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ.

ಏನಿದು ಪ್ರಕರಣ?: ಗದಗಿನ ಸಂಜಯ್ ಗಾಂಧಿ ಕಾಲನಿ ನಿವಾಸಿ ಪ್ರಕಾಶ ಗುಜರಾತಿ ಮತ್ತು ಕುಟುಂಬ ಕೋವಿಡ್ ಎರಡನೇ ಅಲೆಯ ನಂತರ ಉದ್ಯೋಗ ಅರಸಿ ಗೋವಾಕ್ಕೆ ತೆರಳಿತ್ತು. ಗೋವಾದಲ್ಲಿ ಮನೆ ಹುಡುಕಾಟ ನಡೆಸುತ್ತಿದ್ದ ಈ ಕುಟುಂಬಕ್ಕೆ ಮುಕ್ಬೂಲ್ ಬಾಯಬಡಕಿ ಎಂಬುವವನ ಪರಿಚಯವಾಗಿತ್ತು. ಈತ ಮನೆ ಬಾಡಿಗೆ ಪಡೆಯಲು ನೆರವಾಗಿದ್ದ. ಒಂದಷ್ಟು ದಿನ ಅಲ್ಲಿಯೇ ವಾಸವಿದ್ದ ಕುಟುಂಬ ನಂತರ ಗದಗಿಗೆ ಆಗಮಿಸಿತ್ತು. ಈ ವೇಳೆ ಮನೆ ಒಡತಿ ಹೇಮಾವತಿ ಪುನಃ ಗೋವಾಕ್ಕೆ ಹೋಗೋಣ ಎಂದು ಪತಿ ಪ್ರಕಾಶ ಗುಜರಾತಿಗೆ ಆಗಾಗ ಒತ್ತಾಯಿಸುತ್ತಿದ್ದಳು. ಮನೆಯಲ್ಲೇ ನಮಾಜ್, ಮತ್ತಿತರ ಇಸ್ಲಾಂ ಧರ್ಮದ ಆಚರಣೆ ಮಾಡುತ್ತಿದ್ದಳು ಎಂದು ಪ್ರಕಾಶ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪತ್ನಿಯ ಒತ್ತಾಯಕ್ಕೆ ಮಣಿದ ಪ್ರಕಾಶ ಮತ್ತೆ ಗೋವಾಕ್ಕೆ ಕುಟುಂಬ ಸಮೇತ ತೆರಳಿದ್ದಾನೆ. ಈ ವೇಳೆ ಹೇಮಾವತಿ ಮನೆಯಲ್ಲಿದ್ದ 3 ಲಕ್ಷ ರೂ. ಮತ್ತು 15 ಗ್ರಾಂ ಚಿನ್ನದೊಂದಿಗೆ ಮಕ್ಬೂಲ್ ಜತೆ ಹೋಗಿದ್ದಾಳೆ ಎನ್ನಲಾಗಿದೆ. ಮನೆಯ ಹಿರಿಯ ಮಗಳೂ ನಾಪತ್ತೆ ಆಗಿದ್ದು, ಇಬ್ಬರೂ ಮತಾಂತರ ಆಗಿದ್ದಾರೆ ಎಂದು ತಂದೆ ಪ್ರಕಾಶ ಗುಜರಾತಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಆರೋಪಿಗಳಿಂದ ಬೆದರಿಕೆ: ‘ನನ್ನ ಹೆಂಡತಿಗೆ ತಲೆಕೆಡಿಸಲಾಗಿದೆ. ಹೆಂಡತಿ ಕರೆಯಲು ಹೋದರೆ ಮಕ್ಬೂಲ್ ಮತ್ತು ಅವನ ಅಣ್ಣ ಅಲ್ತಾಫ್ ಬೆದರಿಕೆ ಹಾಕುತ್ತಾರೆ. ಭಯ ಹುಟ್ಟಿಸುತ್ತಾರೆ. ಹೇಮಾವತಿಯನ್ನು ಕಳಿಸುವುದಿಲ್ಲ ಎಂದು ಹೆದರಿಸುತ್ತಾರೆ. ಮಕ್ಬೂಲ್-ಹೇಮಾವತಿ ಮದುವೆ ಆಗಿದ್ದಾರೆ’ ಎಂದು ಪ್ರಕಾಶ ಗುಜರಾತಿ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಹೆಂಡತಿಯನ್ನು ಕರೆತರಲು ಪೊಲೀಸರು ಗದಗಿನಿಂದ ನನ್ನನ್ನು ಕರೆದುಕೊಂಡು ಹೋಗಿದ್ದರು. ಬೆಂಗಳೂರು, ಗೋವಾ ಸಂಚರಿಸಿ ನನ್ನಿಂದ 1.50 ಲಕ್ಷ ರೂಪಾಯಿ ಖರ್ಚು ಮಾಡಿಸಿದ್ದಾರೆ. ಕೊನೆಗೆ ಮಕ್ಬೂಲ್ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಪ್ರಕಾಶ ಗಂಭೀರ ಆರೋಪ ಮಾಡಿದ್ದಾರೆ.

ಪತ್ನಿ ಹೇಮಾವತಿ ಲವ್ ಜಿಹಾದ್​ಗೆ ಒಳಗಾಗಿ ಮತಾಂತರಗೊಂಡಿದ್ದಾಳೆ. ಮಗಳೂ ನಾಪತ್ತೆಯಾಗಿದ್ದಾಳೆ. ಪೊಲೀಸರು ನನ್ನ ದೂರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಾಯಿ-ಮಕ್ಕಳನ್ನು ಒಂದಾಗಿಸಲು ಪೊಲೀಸರು ಸಹಕರಿಸಬೇಕು. | ಪ್ರಕಾಶ್ ಗುಜರಾತಿ ನೊಂದ ಯುವಕ ತಾಯಿ ಹೇಮಾವತಿ ಮತ್ತು ಮಗಳು ನಾಪತ್ತೆ ಪ್ರಕರಣ ಗಮನಕ್ಕೆ ಬಂದಿದೆ. ಮಗಳು ಇರುವ ಸ್ಥಳ ಗೊತ್ತಾಗಿದ್ದು, ಪೊಲೀಸರು ಶೋಧ ಮುಂದುವರಿಸಿದ್ದಾರೆ. ಹೇಮಾವತಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ತನಿಖೆ ಪೂರ್ಣಗೊಳಿಸುತ್ತೇವೆ. | ಬಾಬಾಸಾಬ್ ನೇಮಗೌಡ ಎಸ್ಪಿ, ಗದಗ