ಜಿಲ್ಲೆ

ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದಕ್ಕೆ ಖೇದ

Gadag - Shivanand Hiremath

ಗದಗ: ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರಿಗೆ ಗೌರವದ ಸ್ಥಾನ ನೀಡಲಾಗಿದೆ. ಅವರನ್ನು ಮನೆಯ ತೋರಣವೆಂದು ಹಿಂದಿನವರು ಭಾವಿಸಿದ್ದರು. ಆದರೆ ಇಂದಿನ ಪೀಳಿಗೆಯವರಿಗೆ ಹಿರಿಯರೆಂದರೆ ಭಾರ ಎನ್ನುವ ಮನೋಭಾವ ಮೂಡಿದ್ದು ಅವರನ್ನು ವೃದ್ಧಾಶ್ರಮಗಳಿಗೆ ಸೇರಿಸಿ ತಮ್ಮ ಸುಖವನ್ನು ಮಾತ್ರ ಬಯಸುತ್ತಿರುವ ಪರಂಪರೆಗೆ ಹಿರಿಯ ಸಾಹಿತಿ ಡಿ.ವಿ. ಬಡಿಗೇರ ಖೇದ ವ್ಯಕ್ತಪಡಿಸಿದ್ದಾರೆ. ಅವರು ಮಲ್ಲಸಮುದ್ರದ ಮಾತೃಪುನರ್ ಮಿಲನ ಸೇವಾ ಸಮಿತಿಯ ಆನಂದಾಶ್ರಮದಲ್ಲಿ ನ್ಯಾಯವಾದಿ, ನೋಟರಿ ಮನೋಹರ ಮೇರವಾಡೆ ಕುಟುಂಬವರ್ಗದವರು ಅವರ ಹಿರಿಯ ಸಹೋದರ ದಿ. ಗೋವಿಂದಸಾ ಅವರ ಜನ್ಮದಿನಾಚರಣೆಯನ್ನು ಸದರ ಸಂಸ್ಥೆಯಲ್ಲಿ ಆಶ್ರಯ ಪಡೆದ ಹಿರಿಯ ಜೀವಗಳಿಗೆ ಸಿಹಿ ಊಟ ನೀಡುವ ಮೂಲಕ ಆಚರಿಸಿದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ತಂದೆಯ ಸಲುವಾಗಿ ಭೀಷ್ಮನಂತಹ ಮಹಾಯೋಧರು ತಮ್ಮ ಜೀವನದ ಯವ್ವನದ ಕ್ಷಣಗಳನ್ನೆ ತ್ಯಾಗ ಮಾಡಿ ಆಜೀವ ಪರ್ಯಂತ ಬ್ರಹ್ಮಚಾರಿಯಾಗಿ ಉಳಿದರು. ಶ್ರವಣ ಕುಮಾರ ವೃದ್ಧ ತಾಯಿ ತಂದೆಯರನ್ನು ತಕ್ಕಡಿಯಲ್ಲಿ ಕುಳ್ಳಿರಿಸಿಕೊಂಡು ಹೊತ್ತು ತಿರುಗಿದ ಉದಾಹರಣೆಗಳು ನಮ್ಮ ಇತಿಹಾಸದಲ್ಲಿವೆ. ಕಾರಣ ಮಕ್ಕಳು ವೃದ್ಧ ತಂದೆ-ತಾಯಿಯನ್ನು ಪೋಷಿಸುವುದು ಹೊರೆ ಎಂದು ಭಾವಿಸದೇ ಅವರನ್ನು ಗೌರವದಿಂದ ಸಂರಕ್ಷಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆಯಲೆಂದು ಹೇಳಿದರು. ಆದಾಗ್ಯೂ ಅನಿವಾರ್ಯ ಸಂದರ್ಭಗಳಲ್ಲಿ ಹಿರಿಯರಿಗೆ, ವೃದ್ಧರಿಗೆ ಆಶ್ರಯ ತಾಣಗಳಾಗಿ ಇಂದು ಕೆಲವು ವೃದ್ಧಾಶ್ರಮಗಳು ಆಶ್ರಯ ನೀಡಿ ಪೋಷಿಸುತ್ತಿರುವುದನ್ನು ಅವರು ಶ್ಲಾಘಿಸಿದರು. ಮಲ್ಲಸಮುದ್ರದ ಆನಂದಾಶ್ರಮ ಖಾಸಗಿ ಸಂಸ್ಥೆಯಾದರೂ ವಯೋವೃದ್ಧರಿಗೆ ಸಕಲ ಸೌಲಭ್ಯ ನೀಡಿ ಮನೆಯ ವಾತಾವರಣದಲ್ಲಿ ಜೀವಿಸುವಂತೆ ಏರ್ಪಾಡು ಮಾಡಿದ್ದನ್ನು ಅಭಿನಂದಿಸಿದರು.
ಆತಿಥ್ಯವಹಿಸಿಕೊAಡ ನ್ಯಾಯವಾದಿ ನೋಟರಿ, ಮನೋಹರ ಮೇರವಾಡೆಅವರು ಮಾತನಾಡಿ ಹಿರಿಯರ ಹೆಸರಿನಲ್ಲಿ ನಡೆಸುವ ಪಾರಂಪರಿಕ ಕಾರ್ಯಕ್ರಮದ ಹೆಸರಿನಲ್ಲಿ ಮಾಡುವ ದುಂದುವೆಚ್ಚದ ಬದಲು ಅದೇ ಹಣದಿಂದ ವೃದ್ಧಾಶ್ರಮಗಳಲ್ಲಿ ಆಶ್ರಯ ಪಡೆದ ಹಿರಿಯರಿಗೆ ಸಿಹಿ ಊಟ ಬಟ್ಟೆ ಔಷದ ನೀಡಿ ಅವರನ್ನು ಸಂತೃಪ್ತಿಪಡಿಸಿ ಆನಂದಿಸುವುದು ಆತ್ಮ ಸಂತೋಷಕ್ಕೆ ದಾರಿ ಮಾಡಿಕೊಡುತ್ತದೆ. ಇದರಿಂದ ಅಗಲಿದ ಹಿರಿಯರ ಆತ್ಮಕ್ಕೆ ನಿಜವಾದ ಶಾಂತಿ ಸಿಗುತ್ತದೆ. ಅಂತೆಯೇ ಆನಂದಾಶ್ರಮದAತಹ ಸೇವಾ ಸಂಸ್ಥೆಗಳಿಗೆ ಜನರು ಸಹಾಯ ಸಹಕಾರ ನೀಡಿ ಇಲ್ಲಿ ಆಶ್ರಯಪಡೆದ ವೃದ್ಧರನ್ನು ಸೇವಾ ಕೈಂಕರ್ಯದ ಮೂಲಕ ಗೌರವಿಸುವ ಪರಂಪರೆಗೆ ಮುಂದಾಗಬೇಕೆAದು ಕರೆ ನೀಡಿದರು.
ಸೇವಾ ಸಂಸ್ಥೆಯ ಮುಖ್ಯಸ್ಥ ಗಂಗಾಧರ ನಭಾಪೂರ, ಸುರೇಶ ರೇವಣಕರ, ರಾಜು ವೆರ್ಣೇಕರ, ರಘುನಾಥ ಖಟವಟೆ, ಯಲ್ಲಪ್ಪ ಹಂಚಿನಾಳ, ಜಯಶ್ರೀ ಮೇರವಾಡೆ, ದೀಪಕ ಮೇರವಾಡೆ, ಜಗನ್ನಾಥ ಮೇರವಾಡೆ, ನಜೀರ ಸಂಶಿ, ಕೀರ್ತಿ ಮೇರವಾಡೆ, ಆನಂದಾಶ್ರಮದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.