ಗದಗ : ಭಾರತ ದೇಶವನ್ನು ಹಿಂದೂ ಸಂಸ್ಕೃತಿಯಿಂದ ಬೇರ್ಪಡಿಸುವ ಹುನ್ನಾರ ಹೊಂದಿರುವ ವಿಭಜಕ ಶಕ್ತಿಗಳು ಸದ್ಯ ಧಾರ್ಮಿಕ ಕೇಂದ್ರಗಳ ಮೇಲೆ ತಮ್ಮ ವಕ್ರದೃಷ್ಠಿ ನೆಟ್ಟಿವೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಮೋಹನ ಮಾಳಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇವಾಲಯಗಳು ನಮ್ಮ ಸಂಸ್ಕೃತಿಯ ಹೆಗ್ಗುರುತುಗಳಾಗಿದ್ದು, ನಮ್ಮ ಆಚಾರ-ವಿಚಾರ, ಸಂಪ್ರದಾಯಗಳನ್ನು ಒಳಗೊಂಡ ನಮ್ಮ ದೇಶದ ಅಸ್ಮಿತೆಗಳಾಗಿವೆ. ಬಹುಸಂಖ್ಯಾತ ಹಿಂದೂ ಸಮುದಾಯದ ಪಾಲಿಗೆ ದೇವಾಲಯಗಳು ಪವಿತ್ರ ಕ್ಷೇತ್ರಗಳಾದ ಕಾರಣ ಅವುಗಳ ಕುರಿತು ಜನರಲ್ಲಿ ಕೀಳರಿಮೆ ಹುಟ್ಟುವಂತೆ ಪ್ರಯತ್ನಗಳು ನಡೆಯುತ್ತಲೆ ಇವೆ, ಇಂಥ ಪಿತೂರಿಯ ಕುರಿತು ಜನರು ಜಾಗೃತರಾಗಬೇಕಿದೆ. ನಮ್ಮ ಸಂಸ್ಕೃತಿ-ಪರಂಪರೆಯ ಕುರಿತು ನಮಗಿರುವ ಹೆಮ್ಮೆಯನ್ನು ಕುಗ್ಗಿಸಿ ನಮ್ಮ ಧಾರ್ಮಿಕ ಭಾವನೆಯನ್ನು ನಾಶಮಾಡುವುದು ಕಮ್ಮುನಿಷ್ಠವಾದಿಗಳ ಷಡ್ಯಂತ್ರವಾಗಿದ್ದು, ಕಳೆದೊಂದು ಶತಮಾನದ ಇತಿಹಾಸವನ್ನು ಅಧ್ಯಯನ ಮಾಡಿದರೆ ಇವರ ಹುನ್ನಾರದ ಅರಿವಾಗುತ್ತದೆ. ಮೂಢನಂಬಿಕೆ ಎಂಬ ಹಣೆಪಟ್ಟಿ ಹಾಗೂ ಮಹಿಳಾವಾದದ ವೇಷ ಹಾಕಿಕೊಂಡು ಧಾರ್ಮಿಕ ಕ್ಷೇತ್ರಗಳ ಮೇಲೆ ಕತ್ತಿ ಮಸಿಯುತ್ತಿದ್ದಾರೆ.
ಸದ್ಯ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಶ್ರೀ ಮಂಜುನಾಥ ಸ್ವಾಮಿಯ ಶ್ರೀಕ್ಷೇತ್ರ ಧರ್ಮಸ್ಥಳದ ಕೀರ್ತಿಗೆ ಮಸಿ ಬಳಿಯಲು ದೇಶದ್ರೋಹಿಗಳು ಶತಪ್ರಯತ್ನ ನಡೆಸಿದ್ದು, ಯಾವುದೇ ಸಾಕ್ಷಿ-ಆಧಾರಗಳಿಲ್ಲದಿದ್ದರೂ ಸರಣಿ ಕೊಲೆ, ಅತ್ಯಾಚಾರ ಎಂದು ಕಟ್ಟುಕಥೆಗಳನ್ನು ಹರಿಬಿಟ್ಟು ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ, ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ಈ ಪ್ರಕರಣವನ್ನು ಎಸ್.ಐ.ಟಿಗೆ ಒಪ್ಪಿಸಿ ಸದ್ಯ ಮುಖಭಂಗಕ್ಕೆ ಒಳಗಾಗಿದೆ. ಕೇವಲ ಒಂದಿಬ್ಬರ ಊಹಾಪೋಹ ನಂಬಿ
ಧರ್ಮಸ್ಥಳದಂಥ ಐತಿಹಾಸಿಕ ಧಾರ್ಮಿಕ ಕ್ಷೇತ್ರದ ಮೇಲೆ ತನಿಖೆ ಮಾಡಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಸಂಶಯಾಸ್ಪದವಾಗಿದ್ದು, ಸತತ ತನಿಖೆ ಬಳಿಕ ಅಲ್ಲಿ ಯಾವುದೇ ಸಾಕ್ಷಿ ಪುರಾವೆ ಸಿಗದಿದ್ದರೂ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ? ನೂರಾರು ಹೆಣ ಹೂತಿರುವೆ ಎಂದು ಬುರುಡೆ ಬಿಟ್ಟಿರುವ ಆ ಮಾಸ್ಕ್ ಧಾರಿಯ ಗೌಪ್ಯತೆಯನ್ನು ಕಾಪಾಡುತ್ತಿರುವುದು ಯಾರಿಗಾಗಿ ಎಂದು ಪ್ರಶ್ನಿಸಿದ್ದಾರೆ.
ಧರ್ಮಸ್ಥಳ ಮಾತ್ರವಲ್ಲದೇ ದೇಶದ ಅನೇಕ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಒಂದಿಲ್ಲೊಂದು ನೆಪ ಇಟ್ಟುಕೊಂಡು ಟಾರ್ಗೆಟ್ ಮಾಡಲಾಗುತ್ತಿದ್ದು, ನಮ್ಮ ಸಂಸ್ಕೃತಿ-ಪರಂಪರೆಯ ಕುರಿತು ಜನರಲ್ಲಿ ಅಸಹ್ಯ ಭಾವ ಮೂಡಿಸುವುದು ಇದರ ಹಿಂದಿನ ದುರುದ್ದೇಶವಾಗಿದೆ.
ದೇವಾಲಯಗಳು ಭಾರತೀಯತೆಯ ಸಂಕೇತವಾಗಿದ್ದು, ಅವುಗಳ ಕೀರ್ತಿಗೆ ಚ್ಯುತಿ ತಂದು ಭಾರತೀಯ ಪ್ರಜ್ಞೆಯನ್ನು ಘಾಸಿಗೊಳಿಸಬೇಕು ಎಂಬುದು ದೇಶವಿರೋಧಿಗಳ ಸಂಚಾಗಿದೆ. ಈ ಸೂಕ್ಷ್ಮವನ್ನು ಅರ್ಥಮಾಡಿಕೊಂಡು ಇಂದಿನ ವಿದ್ಯಮಾನಗಳನ್ನು ಅವಲೋಕಿಸುವುದು ನಮ್ಮ ಜವಾಬ್ದಾರಿಯಾಗಿದೆ.
ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಧಾರ್ಮಿಕ ಆಚರಣೆಗಳನ್ನು ಅಳಿಸಿಹಾಕುವ ಮೂಲಕ ಇಲ್ಲಿನ ಜನರ ಮೇಲೆ ಸವಾರಿ ಮಾಡಬಹುದು ಎನ್ನುವುದು ಕಮ್ಯುನಿಷ್ಠರ ಧ್ಯೇಯವಾಗಿದೆ, ಹಿಂದೂ ಸಮಾಜ ಎಚ್ಚೆತ್ತುಕೊಳ್ಳುವ ಕಾಲ ಇದಾಗಿದ್ದು ನಮ್ಮ ಪರಂಪರೆಯ ಶ್ರೇಷ್ಠತೆಗೆ ಭಂಗ ತರುತ್ತಿರುವವರ ವಿರುದ್ಧ ಧ್ವನಿ ಎತ್ತಿ ಅವರಿಗೆ ತಕ್ಕ ಶಾಸ್ತಿ ಮಾಡಬೇಕಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.