ಜಿಲ್ಲೆ

ಡೆಂಗ್ಯು ಜ್ವರದ ಕುರಿತು ಜಾಗೃತಿ ಕಾರ್ಯಕ್ರಮ.

Gadag - Shivanand Hiremath
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಡೆಂಗ್ಯು ವಿರೋಧಿ ಮಾಸಾಚರಣೆ ಆಚರಿಸಲಾಯಿತು.
ಗದಗ ಜಿಲ್ಲಾ ಆಸ್ಪತ್ರೆಯ ತರಬೇತಿ ವೈದ್ಯರಾದ ಡಾ. ಮೇಘನಾ. ಟಿ. ರವರು ಡೆಂಗ್ಯೂ ಜ್ವರವು ವೈರಸನಿಂದ ಉಂಟಾಗುವ ಖಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಇಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ರೋಗದ ಮುಖ್ಯ ಲಕ್ಷಣಗಳು ಏನೆಂದರೆ ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು. ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇನ್ನೋರ್ವ ವೈದ್ಯರಾದ ಡಾ. ಮೇಘನಾ ಎನ್. ಆರ್. ರವರು ಈ ರೋಗಕ್ಕೆ ಚಿಕಿತ್ಸೆ ಏನೆಂದರೆ ಡೆಂಗ್ಯೂ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ, ರೋಗದ ಲಕ್ಷಣಗಳು ಅನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಹತ್ತಿರದ ಸರಕಾರಿ ಆಸ್ಪತ್ರೆ ಇಲ್ಲವೇ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕೆಂದು ಸಲಹೆ ನೀಡಿದರು.
ಮತ್ತೋರ್ವ ವೈದ್ಯರಾದ ಡಾ. ಮೃಧು ಹಿರೇಮಠ ಅವರು ಈ ರೋಗದ ನಿಯಂತ್ರಣ ಹೇಗೆಂದರೆ ಸೊಳ್ಳೆಗಳ ನಿಯಂತ್ರಣ ಒಂದೇ ಡೆಂಗ್ಯೂ ರೋಗವನ್ನು ಹತೋಟಿಗೆ ತರುವ ಮುಖ್ಯ ವಿಧಾನ. ಈ ಸೊಳ್ಳೆಗಳು ನೀರನ್ನು ಶೇಖರಿಸಿರುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಮಣ್ಣಿನ ಮಡಿಕೆ, ಉಪಯೋಗಿಸದ ಒರಳು ಕಲ್ಲು, ವಾಹನಗಳ ಟೈರ್ ಮುಂತಾದ ಕಡೆ ಶೇಖರವಾಗುವ ನೀರಿನಲ್ಲಿ ಈ ಸೊಳ್ಳೆ ಉತ್ಪತ್ತಿಯಾಗುವುದರಿಂದ ಈ ರೀತಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಶ್ರೀಮತಿ ಎಸ್. ಎಚ್. ಮುರ್ನಾಳ್ ರವರು ಎಲ್ಲಾ ನೀರಿನ ತೊಟ್ಟಿ, ಡ್ರಮ್, ಬ್ಯಾರೆಲ್, ಏರ್ ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರ್, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು  ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡಬೇಕು. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸಿ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯದ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡಿದರು.
ಶಾಲೆಯ ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ. ಎಸ್. ಹುಯಿಲಗೋಳ ರವರು ಸರಕಾರವು ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಡೆಂಗ್ಯೂ ಜ್ವರದ ಕುರಿತು ತಿಂಗಳ ಪೂರ್ತಿ ಜಾಗೃತಿ ಕಾರ್ಯಕ್ರಮವನ್ನು ಕೈಗೊಳ್ಳುತ್ತಾರೆ, ವಿದ್ಯಾರ್ಥಿಗಳು ಅದರ ಕುರಿತು ಮಾಹಿತಿ ತಿಳಿದುಕೊಂಡು, ತಾವು ತಮ್ಮ ಕುಟುಂಬದವರಿಗೆ ಹಾಗೂ  ನೆರೆಹೊರೆಯ ಕುಟುಂಬದವರಿಗೆ ತಿಳುವಳಿಕೆಯ ಮಾಹಿತಿ ನೀಡಿ ಈ ರೋಗದ ಕುರಿತು ಜಾಗೃತಿ ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಶ್ರೀಮತಿ ಸವಿತಾ ಪಾಟೀಲ್, ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ, ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ, ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.