ಜಿಲ್ಲೆ

ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಪ್ರದರ್ಶನ

Gadag - Shivanand Hiremath
ಪ್ರಜೆಗಳ ಮನಸೂರೆಗೊಳಿಸಿದ ಪ್ರಜಾಪ್ರಭುತ್ವದ ಮಹತ್ವ ಸಾರುವ ಚಿತ್ರಗಳು ಗದಗ: ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಅಂತರಾಷ್ಟಿಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು. ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್.ಪಾಟೀಲ ಅವರು ಚಿತ್ರಕಲಾ ಪ್ರದರ್ಶನಕ್ಕೆ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು.
ಕರ್ನಾಟಕ ವಸತಿ ಶಿಕ್ಷಣಗಳ ಸಂಸ್ಥೆಯ ಗದಗ ಜಿಲ್ಲಾ ಚಿತ್ರಕಲಾ ಶಿಕ್ಷಕರು ರಚಿಸಿದ ಮಹತ್ವ ಸಾರುವ ಚಿತ್ರಗಳು ನೆರೆದ ಗಣ್ಯರ ಹಾಗೂ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ನನ್ನ ಮತ ನನ್ನ ಹಕ್ಕು , ದೇಶಕ್ಕಾಗಿ ಮತದಾನ, ಮತದಾನದಲ್ಲಿ ಒಗ್ಗಟ್ಟಿರಲಿ, ಭಾರತದ ಸಂವಿಧಾನ, ಎಲ್ಲ ಜಾತಿ ಧರ್ಮದವರು ಮತದಾನ ಮಾಡಬೇಕು, ಒಂದು ಮತ ಒಂದು ಮೌಲ್ಯ, ಮತದಾನ ನಮ್ಮ ಮನೆಯ ಹೆಣ್ಣುಮಕ್ಕಳಷ್ಟೇ ಶ್ರೇಷ್ಟ ಯಾರೂ ಮಾರಿಕೊಳ್ಳಬಾರದು, ಮತದಾನದಲ್ಲಿ ಅಡಗಿದೆ ಮುಂದಿನ ಭವಿಷ್ಯ, ನನ್ನ ದೇಶದ ಭವಿಷ್ಯ ನನ್ನ ಬೆರಳಿನ ತುದಿಯಲ್ಲಿದೆ, ಮತದಾನ ಮರೆಯದಿರಿ ಎಂಬಿತ್ಯಾದಿ ವಿಷಯಗಳ ಕುರಿತು ಚಿತ್ರಕಲಾ ಶಿಕ್ಷಕರು ಚಿತ್ರಕಲೆಯ ಮೂಲಕ ಬೆಳಕು ಚೆಲ್ಲಿದ ಚಿತ್ರಗಳು ಆಕರ್ಷಣೀಯವಾಗಿದ್ದವು.
ಈ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ , ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ.ನಂದಾ ಹಣಬರಟ್ಟಿ, ಎಸ್.ಎನ್.ಬಳ್ಳಾರಿ ಸೇರಿದಂತೆ ಗಣ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. **********