ಜಿಲ್ಲೆ

ದೀಪಾವಳಿ, ಎಲ್ಲೆಲ್ಲೂ ಹಬ್ಬದ ವಾತಾವರಣ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಬೆಳಕಿನ ಹಬ್ಬ ದೀಪಾವಳಿಯ ಸಡಗರ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮನೆ ಮಾಡಿದೆ. ಎಲ್ಲೆಡೆ ದೀಪಾವಳಿ ಆಚರಣೆಗೆ ಸಿದ್ಧತೆ ನಡೆದಿದೆ. ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳು, ರಂಗೋಲಿ, ಹಣತೆ ಖರೀದಿಗೆ ಸಾರ್ವಜನಿಕರು ಮುಗಿ ಬಿದ್ದಿರುವುದು ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ.

ಸ್ಥಳಿಯ ಮಾರುಕಟ್ಟೆ ಹಾಗೂ ಜಿಲ್ಲೆಯ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳು ಬಂದಿವೆ. ಹೀಗಾಗಿ ಜಿಲ್ಲೆಯಲ್ಲಿ ಗುರುವಾರ ಮಾರುಕಟ್ಟೆಯು ಜನಜಂಗುಳಿಯಿಂದ ಕೂಡಿತ್ತು. ಅದರಲ್ಲೂ ಮಹೇಂದ್ರಕರ್​ ವೃತ್ತ, ಟಾಂಗಾಕೂಟ, ಜನತಾ ಬಜಾರ್​, ಮಾಬೂ ಸುಬಾನಿ ಕಟ್ಟಿ ಹಾಗೂ ಕೆಸಿ ರಾಣಿ ರಸ್ತೆ, ಬೆಟಗೇರಿ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ಬಟ್ಟೆ ಖರೀದಿ ಬಲು ಜೋರು:

ಜಿಲ್ಲೆಯ ಪ್ರಮುಖ ಅಂಗಡಿಗಳು, ನಾನಾ ಬಡಾವಣೆಗಳ ನಿವಾಸಿಗಳು ಮನೆಗಳನ್ನು ಸ್ವಚ್ಛಗೊಳಿಸಿ ಸುಣ್ಣ-ಬಣ್ಣದಿಂದ ಸಿಂಗಾರಗೊಳಿಸುತ್ತಿದ್ದಾರೆ. ವಿದ್ಯುತ್​ ದೀಪಾಲಂಕಾರದಿಂದ ಧನಲಕ್ಮಿ ಪೂಜೆಗೆ ಸಿದ್ಧಗೊಳಿಸಲು ಅಣಿಯಾಗಿದ್ದಾರೆ. ಮಕ್ಕಳು ಹೊಸ ಬಟ್ಟೆ ಹಾಕಿಕೊಂಡು ಚಕ್ಕುಲಿ, ಕೊಡುಬಳೆ, ಕಚಿರ್ಕಾಯಿ ಮುಂತಾದ ಸಿಹಿ ಮತ್ತು ಖಾರದ ತಿಂಡಿ ಸವಿಯಲು ಕಾತುರದಿಂದ ಕಾಯುತ್ತಿದ್ದಾರೆ. ಲಕ್ಷಿ$್ಮಪೂಜೆಗೆ ಸೀರೆ ಖರೀದಿಸಲು ಮಹಿಳೆಯರು ಬಟ್ಟೆಗಳ ಅಂಗಡಿ ಮುಂಭಾಗದಲ್ಲಿ ಮುಗಿಬಿದ್ದರುವು ದೃಶ್ಯ ಸಾಮಾನ್ಯವಾಘಿ ಕಂಡು ಬಂದಿತು.

ಹೂವು ಖರೀದಿ ಜೋರು:

ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಚೆಂಡು ಹೂವು, ಸೇವಂತಿಗೆ ಹೂವಿನ ಮಾರಾಟ ಜೋರಾಗಿದೆ. ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಹೂವಿನ ಬೆಳೆ ನಾಶವಾಗಿದೆ. ಹೀಗಾಗಿ ಚೆಂಡು ಹೂವು ಹಾಗೂ ಸೇವಂತಿಗೆ ಹೂವಿನ ಬೆಲೆ ಏರಿಕೆ ಕಂಡು ಬರುತ್ತಿದೆ. ಚೆಂಡು ಹೂವು ಕೆಜಿಗೆ 100 ರೂ., ಬಿಳಿ ಸೇವಂತಿಗೆ ಕೆಜಿಗೆ 150&200 ರೂ. ಮಾರಾಟವಾಗುತ್ತಿದೆ.

ಮಾರುಕಟ್ಟೆಯಲ್ಲಿ ಜನ ಜಂಗುಳಿ:

ನಗರದ ಗ್ರೇನ್​ ಮಾರುಕಟ್ಟೆ, ಕೆ. ಎಚ್​.ಪಾಟೀಲ ವೃತ್ತ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು, ಹಬ್ಬದ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದಿದ್ದರು. ದೀಪಾವಳಿ ಹಿನ್ನೆಲೆಯಲ್ಲಿ ಸಿದ್ಧ ಉಡುಪುಗಳ ಮಳಿಗೆ ಹಾಗೂ ಬಟ್ಟೆ ಅಂಗಡಿಗಳು ಭಾರಿ ಪ್ರಮಾಣದ ರಿಯಾಯಿತಿಗಳನ್ನು ಘೋಷಿಸಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಅಲ್ಲದೆ, ಗೃಹೋಪಯೋಗಿ ಅಂಗಡಿ, ಎಲೆಕ್ಟ್ರಾನಿಕ್ಸ್​ ಮಳಿಗೆ, ದಿನಸಿ ಅಂಗಡಿ ಸೇರಿದಂತೆ ಇತರೆಡೆಯೂ ಜನದಟ್ಟಣೆ ಹೆಚ್ಚು ಕಂಡುಬರುತ್ತಿದೆ.

ಬಾಕ್ಸ್​

ಏರಿಕೆ ಬಿಸಿ:

ಹಬ್ಬದ ಅಂಗವಾಗಿ ಒಂದು ಮಾರು ಸೇವಂತಿ ಹೂವು 60 ರೂ. ಮಾರಾಟ ಆಗುತ್ತಿದೆ. ಚೆಂಡು ಹೂ ಕೆಜಿಗೆ 80 ರಿಂದ 100 ಮಾರಾಟ ಮಾಡಲಾಗುತ್ತಿದೆ. ಒಂದು ಜತೆ ಬಾಳೆ ಕಂದಿಗೆ ಕೆಲವೆಡೆ 50 ರಿಂದ 50ಕ್ಕೆ ಮಾರಾಟ ಮಾಡಲಾಗುತ್ತಿದೆ. ಜೋಡಿ ಕಬ್ಬಿಗೆ 20 ರಿಂದ 40 ರೂ. ವರೆಗೆ ಮಾರಾಟ ಆಗುತ್ತಿವೆ. ಹಬ್ಬದ ನಿಮಿತ್ಯ ಹಣ್ಣುಗಳ ಬೆಲೆಯೂ ತೀವ್ರವಾಗಿ ಏರುಗತಿ ಕಾಣುತ್ತಿದೆ. ಒಂದು ಕೆಜಿ ಸೇಬಿಗೆ 150 ರಿಂದ 300 ರೂ., ಬಾಳೆಹಣ್ಣು 50 ರಿಂದ 80, ಮೋಸಂಬಿ 80 ರಿಂದ 100, ದಾಳಿಂಬೆ ಒಂದು ಕೆಜಿಗೆ 80 & 120 ರೂ., ಹೀಗೆ ಬೆಲೆಗಳು ಹೆಚ್ಚಾಗಿದ್ದರೂ ಗ್ರಾಹಕರು ಖರೀದಿ ಮಾಡಲು ಮುಂದಾಗಿದ್ದಾರೆ.

ಟ್ರಾಫಿಕ್​ ಜಾಮ್​:

ನಗರದ ಮಾರುಕಟ್ಟೆಯಲ್ಲಿ ದೀಪವಾಳಿ ಹಬ್ಬದ ಅಂಗವಾಗಿ ವಿವಿಧ ವಸ್ತುಗಳನ್ನು ಖರೀದಿ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಅದರಲ್ಲೂ ಕಾರ್​, ಬೈಕ್​, ತ್ರಿಚಕ್ರ ಸೇರಿದಂತೆ ಇತರೆ ವಾಹನಗಳಲ್ಲಿ ಆಗಮಿಸಿದ್ದರಿಂದ ಮಾರುಕಟ್ಟೆಯಲ್ಲಿ ಜನದಟ್ಟಣೆಯಿಂದ ಕೂಡಿತ್ತು. ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಆಗಮಿಸಿದ್ದರಿಂದದ ಟ್ರಾಫಿಕ್​ ಜಾಮ್​ ಉಂಟಾಯಿತು. ಪೊಲೀಸ್​ ಇಲಾಖೆ ಗ್ರಾಹಕರನ್ನು ನಿಯಂತ್ರಣ ಮಾಡಲು ಹರಸಾಹಸ ಪಟ್ಟರು.