ಯೋಗೋತ್ಸವ, ಯೋಗ ಆಶುಭಾಷಣ, ಬೋಧನಾ ಕೌಶಲ್ಯ ಸ್ಪರ್ಧೆಗಳ ಉದ್ಘಾಟನೆ.
ವಿಜಯವಾಣಿ ಸುದ್ದಿಜಾಲ ಗದಗ
ಯಾವುದೇ ವಿಷಯವನ್ನು ಜನತೆಗೆ ವಿದ್ಯಾಥಿರ್ಗಳಿಗೆ ಮನಮುಟ್ಟುವಂತೆ ತಿಳಿಸುವುದು ಬೋಧಕರ ಕರ್ತವ್ಯ. ಕಲ್ಲು ಬಂಡೆಯಂತೆ ಇರುವವರನ್ನು ತಿದ್ದಿ, ತೀಡಿ ಮೂತಿರ್ ಸ್ವರೂಪರನ್ನಾಗಿರಿಸುವಲ್ಲಿ ಬೋಧಕರ ಪಾತ್ರ ಮುಖ್ಯವಾಗಿದೆ ಎಂದು ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಕಲಾವತಿ ಸಂಕನಗೌಡ್ರ ಹೇಳಿದರು.
ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಬುಧವಾರ ನಡೆದ ಗದಗ ಜಿಲ್ಲಾ ಮಟ್ಟದ ಯೋಗ ಆಶುಭಾಷಣ ಮತ್ತು ಯೋಗ ಬೋಧನಾ ಕೌಶಲ್ಯ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದಲ್ಲಿ ಯೋಗ ಬೋಧಕರ ಪಾತ್ರ ಅತ್ಯಮೂಲ್ಯವಾಗಿದೆ. ಯೋಗವು ಕಲೆ, ಸಾಹಿತ್ಯ, ಕ್ರೀಡೆ, ವಿಾನ, ವೈದ್ಯಕಿಯ ಶಿಕ್ಷಣ ಒಳಗೊಂಡಿದೆ. ಯೋಗವು ಕೇವಲ ಬೋಧನೆ ವಿಷಯವಲ್ಲ. ಪ್ರಾಯೋಗಿಕ ವಿಷಯವಾಗಿದೆ. ಯೋಗ ಶಿಕ್ಷಕರು ಬೋಧನೆ ಜೊತೆಯಲ್ಲಿ ಪ್ರಾಯೋಗಿಕ ಕಲೆಯನ್ನು ರೂಢಿಸಿಕೊಂಡು ಬೋಧಿಸಿದ್ದಾದರೆ ಜನತೆ ದೈಹಿಕ, ಮಾನಸಿಕವಾಗಿ ಸಶಕ್ತರಾಗುವರು. ಇದರಿಂದ ಬಲಿಷ್ಠ ಭಾರತ ನಿರ್ಮಾಣಗೊಳ್ಳುವುದು. ಈ ನಿಟ್ಟಿನಲ್ಲಿ ಭವ್ಯ ಭಾರತ ನಿರ್ಮಾಣಕ್ಕೆ ಯೋಗ ಶಿಕ್ಷಕರು ಬೋಧನಾ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಹಿಮಾಲಯ ಯೋಗ ಕೇಂದ್ರದ ಸಂಚಾಲಕಿ ಮಂಜುಳಾ ಇಟಗಿ ಮಾತನಾಡಿ, ಯೋಗ ಬೋಧನೆ ಪರಿಣಾಮಕಾರಿ ಆಗಿರಲು ಬೋಧಕರು ಯೋಗ ಸಾಧನೆ ಮತ್ತು ಅಧ್ಯಯನ ಶೀಲರಾಗಿರಬೇಕು. ತಮಗಾದ ಅನುಭವ, ಅನಿಸಿಕೆಗಳನ್ನು ಇನ್ನೀತರರಿಗೆ ಪರಿಣಾಮಕಾರಿ ಆಗಿ ತಿಳಿಸಬೇಕು ಎಂದರು.
ಯೋಗ ಆಶುಭಾಷಣ ಮತ್ತು ಯೋಗ ಬೋಧನಾ ಕೌಶಲ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸುನಂದಾ ಜ್ಯಾನೋಪಂತರ, ದ್ವೀತಿಯ ಸ್ಥಾನ ಗೌರಿ ಜಿರಂಕಳಿ, ತೃತೀಯ ಸ್ಥಾನ ಬಸವರಾಜ ಸಂಗಪ್ಪಶೆಟ್ಟರ ಹಾಗೂ ಯಶವಂತ ಮತ್ತೂರ ಗಳಿಸಿದರು.
ಕೆ.ಎಸ್. ಪಲ್ಲೇದ, ಎಂ. ಎಸ್. ಶಿರಿಯಣ್ಣವರ, ಶಿವಲೀಲಾ ಅಕ್ಕಿ ಇತರರು ಇದ್ದರು.