ಗದಗ: ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಲೋಕಕ್ಕೆ ದಾಸಶ್ರೇಷ್ಠ ಕನಕದಾಸರ ಕೊಡುಗೆ ಅಪಾರವಾದುದು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರ ಸಹಯೋಗದಲ್ಲಿ ಸೋಮವಾರ ಗದಗ ನಗರದ ಹಾತಲಗೇರಿ ನಾಕಾ ಬಳಿಯ ಭಕ್ತ ಕನಕದಾಸ ವೃತ್ತದಲ್ಲಿ ಕನದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಭಕ್ತ ಕನಕದಾಸ ಜಯಂತಿ ಆಚರಣೆಯು ಸಾಂಸ್ಕೃತಿಕ ಲೋಕಕ್ಕೆ ಚೇತನವನ್ನು ತೋರಿಸುತ್ತದೆ ಎಂದರು.
ಕನಕದಾಸರ ಜಯಂತಿಯನ್ನು ಭಕ್ತಿಪೂರ್ವಕವಾಗಿ, ಅಭಿಮಾನಪೂರ್ವಕವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ದಾಸ ಸಾಹಿತ್ಯದೊಳಗೆ ಕನಕದಾಸರು ನೀಡಿರುವ ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆ ದೊಡ್ಡ ಪ್ರಮಾಣದಲ್ಲಿ ಆಧ್ಯಾತ್ಮಿಕ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಕನಕದಾಸರು ಕವಿ, ದಾರ್ಶನಿಕ ಮತ್ತು ಸಂಗೀತಗಾರರಾಗಿ ಬೆಳೆದರು ಮತ್ತು ಕರ್ನಾಟಕದಲ್ಲಿ ಭಕ್ತಿ ಸಾಹಿತ್ಯದ ಯುಗವನ್ನು ಆರಂಭಿಸಿದರು. ಕನಕದಾಸರ ಕಾವ್ಯಗಳು ಕರ್ನಾಟಕ ಶೈಲಿಯಲ್ಲಿ ರಚನೆಯಾದ ಕಾವ್ಯಗಳಾಗಿದ್ದು, ಅವರು ತಮ್ಮ ಎಲ್ಲಾ ಹಾಡುಗಳಿಗೆ ‘ಕಾಗಿನೆಲೆ ಆದಿಕೇಶವ’ ಎಂಬ ಕಾವ್ಯನಾಮವನ್ನು ಬಳಸಿದ್ದಾರೆ. ನಳಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ, ರಾಮಧಾನ್ಯಚರಿತ್ರೆ ಮತ್ತು ಮೋಹನತರಂಗಿಣಿ ಅವರ ಕೆಲವು ಪ್ರಸಿದ್ಧ ಕೃತಿಗಳಾಗಿವೆ ಎಂದು ಹೇಳಿದರು.
ಶಾಲಾ-ಕಾಲೇಜಿ ವಿದ್ಯಾರ್ಥಿಗಳಿಗೆ ಭಕ್ತ ಕನಕದಾಸರ ದಾಸ ಸಾಹಿತ್ಯದ ಪುಸ್ತಕಗಳನ್ನು ದೊರೆಯುವ ಹಾಗೆ ಮಾಡಿ ಕನದಾಸರ ಭಕ್ತಿ ಸಾಹಿತ್ಯವನ್ನು ಪರಿಚಯಿಸಬೇಕಿದೆ ಎಂದು ಸಚಿವ ಎಚ್. ಕೆ. ಪಾಟೀಲ ನುಡಿದರು.
ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಭಕ್ತ ಕನಕದಾಸ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, ಜಿಲ್ಲಾ ಗ್ರಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಅನಿಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಪ್ರಭು ಬುರಬುರೆ, ರವಿ ದಂಡಿನ, ಪ್ರಕಾಶ ಕರಿ ಸೇರಿ ಅನೇಕರು ಇದ್ದರು.