ಗದಗ: ದಿನದಿಂದ ದಿನಕ್ಕೆ ಡೆಂಗ್ಯೂ ಹರಡುವಿಕೆ ಪ್ರಮಾಣ ಅಧಿಕವಾಗುತ್ತಿದ್ದು ಡೆಂಗ್ಯೂ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಹೇಳಿದರು.
ನಗರದ ತ್ರಿಕೂಟೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗದಗ ಶಹರ ಲಾರ್ವಾ ಸಮೀಕ್ಷಾ ಅಭಿಯಾನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಲಾರ್ವಾ ಸಮೀಕ್ಷಾ ಕಾರ್ಯವನ್ನು ಮಾಡುವ ವಿಧಾನ ತಮ್ಮೆಲ್ಲರಿಗೂ ಈಗಾಗಲೇ ಗೊತ್ತಿದೆ. ಪ್ರಸಕ್ತ ವರ್ಷದಲ್ಲಿ ಡೆಂಗ್ಯೂ ಕಾಯಿಲೆ ಅಧಿಕವಾಗಿದ್ದು ಲಾರ್ವಾ ಸಮೀಕ್ಷೆ ಕಾರ್ಯವನ್ನು ಸರಿಯಾಗಿ ನಿರ್ವಹಿಸಬೇಕು. ಅಲ್ಲದೇ ಲಾರ್ವಾ ಸಮೀಕ್ಷೆ ವೇಳೆ ಮನೆ ಮನೆ ತೆರಳಿ ಕುಟುಂಬದ ಸದಸ್ಯರಿಗೆ ಸೊಳ್ಳೆಗಳ ಉತ್ಪತ್ತಿ ತಾಣಗಳ ಬಗ್ಗೆ ಮಾಹಿತಿ ನೀಡಿ ಅವುಗಳನ್ನು ಸಂಪೂರ್ಣ ನಾಶಪಡಿಸುವ ವಿಧಾನವನ್ನೂ ಸಹ ತಿಳಿಸಿಕೊಡಬೇಕು ಎಂದರು.
ಯಾವುದೇ ಜ್ವರವಿದ್ದರೂ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು. ಆರೋಗ್ಯ ಸಿಬ್ಬಂದಿಯು ನಿಮ್ಮ ಮನೆಯ ಹತ್ತಿರ ಬಂದಾಗ ಜ್ವರ ಪೀಡಿತರು ರಕ್ತ ಲೇಪನ ಸಂಗ್ರಹಿಸಲು ಸಹಕರಿಸಬೇಕು. ಸೊಳ್ಳೆಗಳ ನಾಶಕ್ಕೆ ಕೀಟನಾಶಕ ಸಿಂಪಡಿಸಲು ಬರುವ ಆರೋಗ್ಯ ಸಿಬ್ಬಂದಿಗೆ ನೆರವಾಗಿ, ಎಲ್ಲ ಕೋಣೆಗಳಿಗೂ ಕೀಟನಾಶಕ ಸಿಂಪಡಿಸಲು ಅವಕಾಶ ನೀಡಬೇಕು. ಕೀಟನಾಶಕ ಸಿಂಪಡಿಸಿದ ನಂತರ ಆರು ವಾರಗಳವರೆಗೆ ಸುಣ್ಣ ಬಣ್ಣವನ್ನು ಗೋಡೆಗಳಿಗೆ ಬಳಿಯಬಾರದು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿ ನಾಲೆಗಳಲ್ಲಿ ಕಸಕಡ್ಡಿಗಳನ್ನು ಎಸೆಯದೇ ನೀರಿನ ಸರಾಗವಾದ ಹರಿಯುವಿಕೆಗೆ ತಡೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರು ಮಾತನಾಡಿ ಈಡಿಸ್ ಸೊಳ್ಳೆಗಳು ಮನೆಯಲ್ಲಿರುವ ನೀರು ಶೇಖರಣೆಯ ತೊಟ್ಟಿಗಳು, ಬ್ಯಾರಲ್ ಗಳು, ಡ್ರಮ್ ಗಳು, ಹೂವಿನ ಕುಂಡ ಮುಂತಾದವುಗಳಲ್ಲದೇ ಮನೆ ಸುತ್ತ ಮುತ್ತ ಬಯಲಲ್ಲಿ ಬಿಸಾಡಿದ ಪಿಂಗಾಣಿ ವಸ್ತುಗಳು, ಪ್ಲಾಸ್ಟಿಕ್ ಕಪ್ಪುಗಳು, ಟೈರ್‍ಗಳು, ಎಳೆನೀರಿನಿಂದ ಚಿಪ್ಪು ಮತ್ತು ಇತರೆ ವಸ್ತುಗಳಲ್ಲಿ ನೀರು ಸಂಗ್ರಹವಾದಾಗ ಉತ್ಪತ್ತಿಯಾಗುತ್ತವೆ. ಅವುಗಳ ಸಂಪುರ್ಣ ಸರ್ವನಾಶ ಮಾಡುವ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ ಮಾತನಾಡಿ ಗದಗ ಜಿಲ್ಲೆಯಲ್ಲಿ 2024ರ ಜುಲೈ 19 ವರವರೆಗೆ 1750 ಪ್ರಕರಣವನ್ನು ಸಂಶಯಾಸ್ಪದವೆಂದು ಗುರುತಿಸಿ 1373 ಜನರ ರಕ್ತದ ಮಾದರಿ ಪರೀಕ್ಷಿಸಲಾಗಿದೆ. ಆ ಪೈಕಿ 117 ಜನರಿಗೆ ಡೆಂಗ್ಯೂ ಜ್ವರ ಇದ್ದುದು ಖಚಿತಪಟ್ಟಿದೆ. 21 ಜನರು ಜಿಮ್ಸ್‍ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅದರಲ್ಲಿ 4 ಜನರು ಐಸಿಯುದಲ್ಲಿದ್ದಾರೆ. 12 ಜನರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ನೀಲಗುಂದ ಅವರು ಮಾತನಾಡಿ ಮನೆಯಲ್ಲಿರುವ ನೀರು ಸಂಗ್ರಹಣಾ ಪಾತ್ರೆಗಳು ಮತ್ತು ಡ್ರಮ್‍ಗಳನ್ನು ಸರಿಯಾದ ಮುಚ್ಚಳದಿಂದ ಮುಚ್ಚಿರಿ ಹಾಗೂ ದೊಡ್ಡ ತೊಟ್ಟಿಗಳನ್ನು ವಾರಕ್ಕೊಮ್ಮೆ ಸಂಪೂರ್ಣವಾಗಿ ಖಾಲಿ ಮಾಡಿ, ಸರಿಯಾಗಿ ಮುಚ್ಚಿರಿ ಅಥವಾ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸಬೇಕು. ಮನೆಯ ಎಲ್ಲ ಕಿಟಕಿ ಬಾಗಿಲುಗಳೀಗೆ ಕೀಟ ತಡೆಗಟ್ಟುವ ಜಾಲರಿಗಳನ್ನು ಅಳವಡಿಸಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ನೀರಿನ ಬಾವಿ, ಕಾರಂಜಿಗಳು, ಕಟ್ಟಡ ನಿರ್ಮಾಣಕ್ಕಾಗಿ ಸಂಗ್ರಹಿಸಿದ ನೀರು ಶೇಖರಣೆ, ಕೆರೆ , ಕುಂಟೆ ಹೊಂಡ , ಗದ್ದೆ ಜೌಗು ಪ್ರದೇಶದಲ್ಲಿ ಸೊಳ್ಳೆ ಮರಿಗಳನ್ನು ತಿನ್ನುವ ಗ್ಯಾಂಬೂಸಿಯಾ ಮತ್ತು ಗಪ್ಪಿಯೆಂಬ ಲಾರ್ವಾಹಾರಿ ಮೀನುಗಳನ್ನು ಬಿಟ್ಟು ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಬೇಕು ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಮೀನಾಕ್ಷಿ, ಡಾ.ವೈ.ಕೆ.ಭಜಂತ್ರಿ, ಡಾ.ಮಹೇಶ ಕೊಪ್ಪಳ, ಪ್ರಮುಖರಾದ ಸುಧೀರ ಕಾಟಿಗೇರ, ಕೀಟಶಾಸ್ತ್ರಜ್ಞರಾದ ಅನ್ನಪೂರ್ಣ ಶೆಟ್ಟರ್, ಜಿಲ್ಲಾ ಸರ್ವೇಕ್ಷಣಾ ಘಟಕದ ಸಿಬ್ಬಂದಿಗಳು, ಗದಗ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ನಿರೀಕ್ಷಣಾಧಿಕಾರಿಗಳು, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.