ವಿಜಯವಾಣಿ ಸುದ್ದಿಜಾಲ ಗದಗ
ಗದಗ-ಬೆಟಗೇರಿಯಿಂದ ಕೆಲವೇ ಕಿ.ಮೀ. ಅಂತರದಲ್ಲಿನ ನಾಗಸಮುದ್ರದ ಹೊರ ವಲಯದಲ್ಲಿ ಪಾಳಾ-ಬದಾಮಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಶ್ರೀದಂಡಿನ ದುರ್ಗಾದೇವಿ ಜಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿವೆ.
ದೇಶದ ಫಾರ್ದಿ(ಹರಣಶಿಕಾರಿ) ಜನಾಂಗದ ಆರಾಧ್ಯ ದೈವವಾದ ಶ್ರೀದಂಡಿನ ದುರ್ಗಾದೇವಿ ಜಾತ್ರೆ ಸೋಮವಾರ, ಮಂಗಳವಾರ ಸಾಂಪ್ರದಾಯಿಕವಾಗಿ ಭಕ್ತರ ಸಡಗರ ಸಂಭ್ರಮದ ಮಧ್ಯೆ ಜರುಗಲಿದೆ. ಜಾತ್ರೆಗೆ ದೇವಿಯ ಕಟ್ಟೆಯನ್ನು ಅಂದಚೆAದದ ಬಣ್ಣ ಬಳಿದು ಸಿಂಗರಿಸಲಾಗಿದೆ. ಸುತ್ತಲೂ ವಿದ್ಯುದ್ದೀಪಗಳನ್ನು ಹಾಕಲಾಗಿದೆ. ಭಕ್ತರಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಈ ಭಾಗದಲ್ಲಿ ದಂಡಿನ ದುರ್ಗಮ್ಮ ಎಂದೇ ಪ್ರಸಿದ್ಧವಾಗಿರುವ ಈ ದೇವಿಯ ಜಾತ್ರೆಗೆ ದೇಶದ ಮೂಲೆಮೂಲೆಯಲ್ಲಿರುವ ಪಾರ್ದಿ ಜನಾಂಗದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭಾನುವಾರದಂದು ಶ್ರೀದಂಡಿನ ದುರ್ಗಾದೇವಿಯ ಪಾಲಕಿ ಮುಳಗುಂದದಿAದ ಮೆರವಣಿಗೆ ಹೊರಟಿದ್ದು, ಗದಗ-ಬೆಟಗೇರಿ ಸೆಟ್ಲಮೆಂಟ್ ಹಳೆಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಸೋಮವಾರ ಡೊಳ್ಳು ಭಜನೆ, ಶಹನಾಯಿ, ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಗೆಯ ಜತೆಗೆ ಹೊರಡುವ ಪಾಲಕಿ ನಾಗಸಮುದ್ರ ಗ್ರಾಮದ ದಂಡಿನ ದುರ್ಗಾದೇವಿ ದೇವಸ್ಥಾನ ತಲುಪಲಿದೆ.
ಪಾರ್ದಿ ಜನಾಂಗದ ಬಂಧು-ಭಗಿನಿಯರು ಶ್ರೀದಂಡಿನ ದುರ್ಗಮ್ಮ ದೇವಿ ಜಾತ್ರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲದೇ ಮಹಾರಾಷ್ಟ ಮಧ್ಯ ಪ್ರದೇಶ, ರಾಜಸ್ಥಾನ, ಆಂಧ್ರ ಪ್ರದೇಶ, ತಮಿಳುನಾಡಿನಿಂದ ಕುಟುಂಬ ಸದಸ್ಯರ ಸಮೇತ ಆಗಮಿಸುತ್ತಾರೆ. ಜಾತ್ರೆಗೆ ಆಗಮಿಸಿರುವ ಭಕ್ತರು ಆ ಪ್ರದೇಶದಲ್ಲಿ ಎರಡು ದಿನಗಳ ತಮ್ಮ ವಾಸ್ತವ್ಯಕ್ಕೆ ತಾತ್ಕಾಲಿಕವಾಗಿ ಡೇರೆಗಳನ್ನು ನಿರ್ಮಿಸಿಕೊಳ್ಳುವುದರಿಂದ ಸೋಮವಾರದಿಂದ ಬುಧವಾರದವರೆಗೆ ಅಲ್ಲೊಂದು ಹೊಸ ನಗರವೇ ಸೃಷ್ಟಿಯಾದಂತೆ ಕಂಡು ಬರುತ್ತದೆ.
ದೇವಿಯ ಜಾತ್ರೆಗೆ ಸಾವಿರಾರು ಭಕ್ತರು ತಮ್ಮ ಸ್ವಂತ ವಾಹನಗಳಲ್ಲಿ ದೂರದ ರಾಜ್ಯಗಳಿಂದ ಆಗಮಿಸುವುದರಿಂದ ಪಾಳಾ ಬದಾಮಿ ರಸ್ತೆಯ ಎರಡೂ ಬದಿಗೆ ನೂರಾರು ವಾಹನಗಳು ಸಾಲು ಸಾಲಾಗಿ ನಿಂತಿರುತ್ತವೆ. ದೇಶದ ವಿವಿಧ ರಾಜ್ಯಗಳಲ್ಲಿರುವ ಪಾರ್ದಿ ಜನಾಂಗದ ಒಂದೆಡೆ ಸಭೆ ಸೇರಿ ಈ ದೇವಿಯ ಜಾತ್ರೆಯನ್ನು ವಾರ್ಷಿಕ ಯಾವ ದಿನ ಆಚರಿಸಬೇಕೆಂಬುದನ್ನು ನಿರ್ಧರಿಸುತ್ತಾರೆ.
ಜಾತ್ರೆಗೆ ಆಗಮಿಸಿರುವ ಭಕ್ತರು ದೇವಿಗೆ ಪೂಜೆ, ನೈವೇದ್ಯ, ಅಭಿಷೇಕದ ಜತೆಗೆ ಕೆಲವರು ಬೇವಿನ ಉಡುಗೆ ಧರಿಸುವುದು, ದೀಡ್ ನಮಸ್ಕಾರ ಹಾಕುವುದರ ಮೂಲಕ ತಮ್ಮ ಹರಕೆ ತೀರಿಸುತ್ತಾರೆ. ಭಕ್ತರು ಬೆಳಗ್ಗೆ ತಮ್ಮ ಪೂಜಾ ಕಾರ್ಯಗಳನ್ನು ಮುಗಿಸಬೇಕು. ದೇವಿಗೆ ದೀಡ್ ನಮಸ್ಕಾರ ಹಾಕುವವರು ಬೆಳಗ್ಗೆ ಹಾಕಿ ಮುಂದಿನ ಧಾರ್ಮಿಕ ಕಾರ್ಯಗಳಿಗೆ ಅವಕಾಶ ಮಾಡಿಕೊಡಬೇಕು. ಜಾತ್ರೆ ಅತ್ಯಂತ ಶಾಂತಿಯುತವಾಗಿ ನಡೆಯುವಂತೆ ಕಾನೂನು ಸುವ್ಯವಸ್ಥೆ ಪಾಲಿಸಲು ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕ್ರಮಗಳನ್ನು ಕೈಕೊಂಡಿದೆ.
ಬಾಕ್ಸ್
ಕೋಳಿ ಮಾರಾಟ ಜೋರು:
ಶ್ರೀದಂಡಿನ ದುರ್ಗಾದೇವಿ ಜಾತ್ರಾಮಹೋತ್ಸವ ಅಂಗವಾಗಿ ಬೆಟಗೇರಿ ಮಾರುಕಟ್ಟೆ ಹತ್ತಿರ ಅಗತ್ಯ ವಸ್ತುಗಳ ಖರೀದಿ ಜೋರಾಗಿ ನಡೆಯುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಸಾವರಾರು ಜನರು ಜಾತ್ರಾಮಹೋತ್ಸವ ಬರುತ್ತಾರೆ. ಹೀಗಾಗಿ ಕೋಳಿ ಮಾರಾಟ ಜೋರಾಗಿದೆ. ೧೦೦ ರಿಂದ ೩೦೦ರವರಿಗೆ ಕೋಳಿ ಮಾರಾಟ ಮಾಡಲಾಗುತ್ತದೆ. ಜಾತ್ರಾಮಹೋತ್ಸವದ ಅಂಗವಾಗಿ ವಿವಿಧ ವಸ್ತುಗಳ ಮಾರಾಟ ಕೂಡ ಜೋರಾಗಿ ನಡೆಯುತ್ತದೆ.