ಜಿಲ್ಲೆ

ಕೋವಿಡ್ ನಿಯಂತ್ರಣ, ಸೋಂಕಿತರ ಚಿಕಿತ್ಸೆಯಲ್ಲಿ ನಿಷ್ಕಾಳಜಿ ಬೇಡ: ಎಚ್.ಕೆ.ಪಾಟೀಲ

Gadag - Shivanand Hiremath

ಗದಗ: ರಾಜ್ಯದಲ್ಲಿ ಈಗಾಗಲೇ 416 ಕೋವಿಡ್ 19 ನೂತನ ತಳಿಯ ಪ್ರಕರಣಗಳು ವರದಿಯಾಗಿದ್ದು  ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಗದಗ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಯಲ್ಲಿ ನಿಷ್ಕಾಳಜಿ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.  

ನಗರದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮಾಡಿಕೊಳ್ಳಲಾದ ವ್ಯವಸ್ಥೆಯನ್ನು ಪರಿಶೀಲಿಸಿ  ನಂತರ ಜಿಮ್ಸ್‍ನಲ್ಲಿ ಬುಧವಾರದಂದು ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದರು.  

ಸರ್ಕಾರ ನೀಡಿರುವ ಮಾರ್ಗಸೂಚಿಗಳು ಜಿಲ್ಲೆಯಲ್ಲಿ ಯಥಾವತ್ತಾಗಿ ಅನುಷ್ಟಾನಗೊಳಿಸುವುದರೊಂದಿಗೆ ಸರಿಯಾಗಿ ಪಾಲನೆಯಾಗಬೇಕು. ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ  ಗುಣಮುಖರಾಗುವಂತೆ ನೋಡಿಕೊಳ್ಳಬೇಕು ಎಂದರು.

ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾತನಾಡಿ ಜಿಲ್ಲಾಸ್ಪತ್ರಯೆಲ್ಲಿ ಒಟ್ಟು 890 ಬೆಡ್ ಗಳಿದ್ದು 735 ಆಕ್ಸಿಜನ್ ಬೆಡ್‍ಗಳನ್ನು ಹೊಂದಿದೆ. ಈ ಪೈಕಿ 50 ಬೆಡ್‍ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ. ಜಿಮ್ಸ್ ಆವರಣದಲ್ಲಿ 20 ಹಾಗೂ 13 ಕೆ ಎಲ್. ಆಕ್ಸಿಜನ್ ಸಂಗ್ರಹಣಾ ಸಾಮಥ್ರ್ಯದ ಘಟಕ ಹೊಂದಿದ್ದು 4 ಆಕ್ಸಿಜನ್ ಜನರೇಟರ್ ಪ್ಲಾಂಟ್ ಸಹ ಕಾರ್ಯಪ್ರವೃತ್ತವಾಗಿವೆ ಎಂದರು. ಈಗಾಗಲೇ ಆಕ್ಸಿಜನ್ ಪೂರೈಕೆ ಕುರಿತಂತೆ ಡ್ರೈರನ್ ಮಾಡಲಾಗಿದೆ. ಇರುವ ಆಂಬುಲೆನ್ಸ್‍ಗಳೆಲ್ಲ ಸುಸ್ಥಿತಿಯಲ್ಲಿದ್ದು  ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ 4 ಚಾಲಕರ ಸಿಬ್ಬಂದಿಗಳ ಅಗತ್ಯವಿದೆ. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಅಗತ್ಯವಿರುವ ಮೆಡಿಸಿನ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಮಾತನಾಡಿ ಕೋವಿಡ್ ಸೋಂಕಿತರ ಪರೀಕ್ಷೆ ನಿಯಮಿತವಾಗಿ ಜರುಗಿಸಬೇಕು. ಸೋಂಕಿತರ ಪ್ರಮಾಣ ಅಧಿಕವಾದಲ್ಲಿ ಜಿಲ್ಲಾಸ್ಪತ್ರೆಗೆ ಅಗತ್ಯದ ಭದ್ರತಾ ಸಿಬ್ಬಂದಿಗಳನ್ನು ಸಹ ನೀಡಲು ಕ್ರಮ ವಹಿಸಲಾಗುವುದು. ಒಟ್ಟಾರೆ ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಕಾರ್ಯಮಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ನೀಲಗುಂದ, ಡಾ.ಬಿ.ಸಿ.ಕರಿಗೌಡ್ರ, ಡಾ. ಸೋಮಶೇಖರ ಬಿಜ್ಜಳ, ಡಾ. ಪಲ್ಲೇದ, ಡಾ. ವೆಂಕಟೇಶ ರಾಠೋಡ, ಲೆಕ್ಕಾಧಿಕಾರಿ ಜೆ.ಸಿ. ಪ್ರಶಾಂತ ಸೇರಿದಂತೆ ಜಿಮ್ಸ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.