ಜಿಲ್ಲೆ

ಕಾಂಗ್ರೆಸ್​ ಪಕ್ಷದಲ್ಲೇ ಸಿಎಂ ಬದಲಾವಣೆಗೆ ಅವಸರ: ಬೊಮ್ಮಾಯಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಸಿಎಂ ಸಿದ್ದರಾಮಯ್ಯ ಬದಲಾವಣೆಗೆ ಕಾಂಗ್ರೆಸ್​ ಪಕ್ಷದಲ್ಲಿ ಬಹಳಷ್ಟು ಆಂತರಿಕ ಚಟುವಟಿಕೆ ನಡೆಯುತ್ತಿದ್ದು, ಸಿಎಂ ಬದಲಾವಣೆಗೆ ಕಾಂಗ್ರೆಸ್​ ಪಕ್ಷದಲ್ಲೇ ಅವಸರವಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಲು ಮಾನಸಿಕವಾಗಿ ಸಿದ್ದರಾಗುತ್ತಿದ್ದಾರೆ. ಸಿಎಂ ರಾಜೀನಾಮೆ ನೀಡಿದರೆ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್​ ನಾಯಕರಿಂದ ಸತತ ಪ್ರಯತ್ನ ನಡೆದಿದೆ. ಆದರೆ, ಸರ್ಕಾರವನ್ನು ಅಭದ್ರಗೊಳಿಸುವ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಹೇಳಿದರು.
ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರತ್ಯೇಕ ಕೆಲಸಕ್ಕೆ ಭೇಟಿ ಆಗಿರಬಹುದು. ನಮ್ಮ ಹೈಕಮಾಂಡ ಬಹಳ ಸ್ಪಷ್ಟವಾಗಿದೆ. ತಾತ್ವಿಕವಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವಿದೆ ಎಂದರು.
ಜಾತಿ ಗಣತಿ ಚರ್ಚೆ:
ಜಾತಿಗಣತಿ ವಿಷಯವಾಗಿ ವಿಧಾನ ಪರಿಷತ್​ ಸದಸ್ಯ ಬಿ. ಕೆ. ಹರಿಪ್ರಸಾದ್​ ಹೇಳಿಕೆ ಪ್ರತಿಕ್ರಿಯಿಸಿ, ಹರಿಪ್ರಸಾದು ಮನದಾಳದ ಮಾತು ಹೇಳಿದ್ದಾರೆ. ಜಾತಿಗಣತಿ ಮುಖ್ಯವೋ? ಸರ್ಕಾರ ಬೀಳುವುದು ಮುಖ್ಯಮೋ? ಎಂಬುದನ್ನು ಬಿ. ಕೆ ಹರಿಪ್ರಸಾದ ಸ್ಪಷ್ಟ ಪಡಿಸಬೇಕು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಕಮಿಟಿ ಕೊಟ್ಟ ವರದಿಯನ್ನು ಕಾಂಗ್ರೆಸ ಏಕೆ ಸ್ವೀಕರಸಿಲ್ಲ. ಜಯಪ್ರಕಾಶ್​ ಹೆಗಡೆ ಅವರು ಆಯೋಗದ ಅಧ್ಯಕ್ಷರಾಗಿ 2-3 ತಿಂಗಳಲ್ಲಿ ಹೇಗೆ ವರದಿ ಕೊಡುತ್ತಾರೆ? ಎಂದರು.
ಹೊಂದಾಣಿಕೆ ಇಲ್ಲ:
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ದ ಮುಡಾ ಹಗರಣದ ಆರೋಪ ಬಂದಮೇಲೆ ಜಾತಿ ಗಣತಿ ವರದಿ ಬಿಡುಗಡೆ ಮಾಡುವ ಬಗ್ಗೆ ಉಲ್ಲೇಖಿಸುತ್ತಿದ್ದಾರೆ. ಜಾತಿ ಗಣತಿ ವರದಿ ಬಿಡಿಗಡೆಗೆ ಅವರ ಪಕ್ಷದಲ್ಲಿ ಮೊದಲಿನಿಂದಲೂ ವಿರೋಧ ಇದೆ. ಡಿಸಿಎಂ ಡಿ. ಕೆ. ಶಿವಕುಮಾರ್​, ಶಾಸಕ ಶಾಮನೂರ ಶಿವಶಂಕರಪ್ಪ ವಿರೋಧಿಸಿ ಸಹಿ ಮಾಡಿಕೊಟ್ಟಿದ್ದಾರೆ. ಅವರಲ್ಲಿಯೇ ಹೊಂದಾಣಿಕೆ, ಸ್ಪಷ್ಟತೆ ಇಲ್ಲ ಎಂದರು.
ಕಪ್ಪತಗುಡ್ಡದ ಜೀವ ವೈವಿದ್ಯತೆ ಕಾಪಾಡಬೇಕು: ಬೊಮ್ಮಾಯಿ
ಗದಗ ಜಿಲ್ಲೆಯ ಕಪ್ಪತ ಗುಡ್ಡದ ಜೀವ ವೈವಿಧ್ಯತೆಯಲ್ಲಿ ಅಸಮತೋಲನ ಉಂಟಾಗಿದೆ. ಅದನ್ನು ಸರಿಪಡಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಬೇಕು. ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ವನ್ಯ ಜೀವಿ ಮಂಡಳಿ ಸಭೆ ನಡೆಸಿ ನಿಸರ್ಗವನ್ನು ಕಾಪಾಡುವ ಕೆಲಸ ಆರಂಭಿಸಲಾಗಿತ್ತು. ಕಪ್ಪತ ಗುಡ್ಡದ ಜೀವ ವೈವಿಧ್ಯತೆ ಕಾಪಾಡಲು ಗಣಿಗಾರಿಕೆಯಂತಹ ಚಟುವಟಿಕೆ ನಡೆಯಲು ಅವಕಾಶ ಕೊಡದೇ ಈ ಭಾಗದ ಪರಿಸರ ಕಾಪಾಡುವ ನಿರ್ಧಾರ ಕೈಗೊಳ್ಳಬೇಕು ಎಂದರು.