ಗದಗ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ಆಗಷ್ಟ್ 22 ರಿಂದ 25 ರ ವರೆಗೆ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಡಂಬಳ ನಾಕಾ ಹತ್ತಿರದ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದಲ್ಲಿ ಶಿಬಿರಕ್ಕೆ ಚಾಲನೆ ನೀಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಶಿಬಿರ ಯಶಸ್ವಿಗೋಳಿಸಬೇಕು ಅಂತ ಜಯಂತಿ ಅಕ್ಕನವರು ಮನವಿ ಮಾಡಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಒಂದು ಹನಿ ಅನಂತ ಆಶೀರ್ವಾದಗಳು ಎಂಬ ಧೈಯ ಉಳ್ಳ ರಕ್ತದಾನವು ಅಪಘಾತ ಬಾಧಿತರು, ಗರ್ಭಿಣಿಯರು, ಕ್ಯಾನ್ಸರ್, ತಲೆಸೀಮಿಯಾ ಹಾಗೂ ಶಸ್ತ್ರ ಚಿಕಿತ್ಸೆಗೊಳಗಾದವರಿಗೆ, ಜೀವದಾನವಾಗುತ್ತದೆ. ಒಂದು ಹನಿ ರಕ್ತವೇ ಅನೇಕ ಜೀವಗಳ ಭರವಸೆ ಎಂಬ ಸಂದೇಶವನ್ನು ಈ ಅಭಿಯಾನ ಸಾರುತ್ತಿದೆ' ಅಂತ ಹೇಳಿದರು.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ದೆಹಲಿಯಲ್ಲಿ 'ಬೃಹತ್ ರಕ್ತದಾನ ಅಭಿಯಾನ' ಉದ್ಘಾಟಿಸಿದರು. ಭಾರತ ಮತ್ತು ನೆಪಾಳದಾಧ್ಯಂತ ಮೆಗಾ ರಕ್ತದಾನ ಶಿಬಿರದ ಮೂಲಕ ಬ್ರಹ್ಮಕುಮಾರಿಸ್ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಲು ಸಜ್ಜುಗೋಂಡಿದೆ. ಬ್ರಹ್ಮಕುಮಾರಿಸ್ ಸಂಸ್ಥೆಯ ಗೌರವಾನ್ವಿತ ಪೂರ್ವ ಮುಖ್ಯ ಆಡಳಿತಾಧಿಕಾರಿ ರಾಜಯೋಗಿನಿ ದಾದಿ ಪ್ರಕಾಶಮಣಿ ಅವರ 18 ನೇ ಪುಣ್ಯತಿಥಿ (25 ಆಗಸ್ಟ್ 2025) ಯಂದು, ವಿಶ್ವ ಭಾತೃತ್ಮ ದಿನ ಎಂದು ಆಚರಿಸಲಾಗುತ್ತದೆ. ಈ ಪವಿತ್ರ ಸಂದರ್ಭದಲ್ಲಿ ರಕ್ತದ ತುರ್ತು ಅಗತ್ಯವನ್ನು ಪೂರೈಸುವ ಹಾಗೂ ವಿಶ್ವ ಭ್ರಾತೃತ್ವದ ಸಂದೇಶವನ್ನು ಹರಡುವ ಉದ್ದೇಶದಿಂದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಬೃಹತ್ ರಕ್ತದಾನ ಅಭಿಯಾನವನ್ನು ಆಯೋಜಿಸಿದೆ ಎಂದರು.
ರಾಷ್ಟ್ರ ಮಟ್ಟದ ಉದ್ಘಾಟನಾ ಸಮಾರಂಭವು ಇದೇ 17 ಆಗಸ್ಟ್ 2025 ರಂದು ದೆಹಲಿಯ ಓಂ ಶಾಂತಿ ರಿಟ್ರೇಟ್ ಸೆಂಟರ್ (ಓ.ಆರ್.ಸಿ) ನಲ್ಲಿ ನೆರವೇರಿತು. ಈ ಅಭಿಯಾನವನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಅಧಿಕೃತವಾಗಿ ಉದ್ಘಾಟಿಸಿದರು. ಉದ್ಘಾಟನೆಯ ನಂತರ, 22 ರಿಂದ 25 ಆಗಸ್ಟ್ 2025 ರವರೆಗೆ, ಭಾರತ ಮತ್ತು ನೇಪಾಳದ 1500ಕ್ಕೂ ಹೆಚ್ಚು ಬ್ರಹ್ಮಕುಮಾರಿಸ್ ಸೇವಾ ಕೇಂದ್ರಗಳಲ್ಲಿ ಬೃಹತ್ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಆಗಷ್ಟ್ 22 ರಿಂದ 25 ರ ವರೆಗೆ 100 ಗಂಟೆಗಳಲ್ಲಿ 1,00,000 (ಒಂದು ಲಕ್ಷ) ಯೂನಿಟ್ ರಕ್ತ ಸಂಗ್ರಹಿಸಿ ಅದನ್ನು ಸಾರ್ವಜನಿಕ ಆರೋಗ್ಯಕ್ಕಾಗಿ ನೀಡುವ ಹೆಗ್ಗುರಿಯನ್ನು ಹೊಂದಲಾಗಿದೆ ಎಂದರು.
ಈ ಅಭಿಯಾನವನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಡಿಸ್ಟ್ರಿಕ್ಟ್ ಬ್ಲಡ್ ಬ್ಯಾಂಕ್‌ಗಳು, ರೆಡ್ ಕ್ರಾಸ್ ಸೊಸೈಟಿ, ಸರ್ಕಾರಿ ಆಸ್ಪತ್ರೆಗಳು,ವೈದ್ಯಕೀಯ ಕಾಲೇಜುಗಳು, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಐ.ಎಸ್.ಬಿ.ಟಿ.ಐ ರಕ್ಷಣಾ ಪಡೆಗಳು, ಎನ್.ಸಿ.ಸಿ, ಎನ್.ಎಸ್.ಎಸ್, ಕಾರ್ಪೊರೇಟ್ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ನಡೆಸಲಾಗುತ್ತಿದೆ ಎಂದರು.