ಬಿ-ಖಾತೆ ಹೊಂದಿರುವ ಆಸ್ತಿ ಖರೀದಿಸಿದ ಮಾಲೀಕರು ಆ ಆಸ್ತಿಯ ಆಧಾರದ ಮೇಲೆ ಬ್ಯಾಂಕ್‌ಗಳಲ್ಲಿ ಸೇರಿದಂತೆ ಯಾವುದೇ ಸೌಲಭ್ಯ ಪಡೆಯಲಾಗದೆ ಪರದಾಡುವಂತಾಗಿದೆ.
ಜಿಲ್ಲೆಯಲ್ಲಿ ಈ ವರೆಗೆ 2343 ಬಿ ಖಾತಾ ಆಸ್ತಿಗಳನ್ನು ಗುರುತಿಸಲಾಗಿದೆ. ಇದರಲ್ಲಿ 1355 ಬಿ ಖಾತಾ ಆಸ್ತಿಗಳಿಗೆ ಇ ಖಾತಾ ಮಾಡಲಾಗಿದೆ. ಇನ್ನುಳಿದ ಬಿ ಖಾತೆಗಳಿಗೂ ಇ ಖಾತಾ ಮಾಡಬೇಕು. ಆದರೆ, ಬಿ ಖಾತಾ ಮಾಡಿಸಿಕೊಂಡರೂ ಖಾತಾದಾರರಿಗೆ ಹಕ್ಕು ಪತ್ರ ಸಿಗದಂತಾಗಿದೆ.
ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕವಾಗಿ ಶಕ್ತಿ ನೀಡುವ ಮತ್ತು ಸಾರ್ವಜನಿಕರ ಆಸ್ತಿಗಳನ್ನು ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಮಾಡಿ ಕೊಡುವ ಮೂಲಕ ಅನಧಿಕೃತ ಆಸ್ತಿಗಳ ಮಾರಾಟಕ್ಕೆ ಅವಕಾಶ ನೀಡಿದರೆ, ಜನರಿಗೂ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಸರ್ಕಾರ ಅನಧಿಕೃತ, ಅಕ್ರಮ ಆಸ್ತಿಗಳಿಗೆ ಬಿ-ಖಾತೆ ನೀಡಲು ಅವಕಾಶ ಮಾಡಿಕೊಟ್ಟಿದೆ. ಆದರೆ, ಬಿ-ಖಾತೆ ಮಾಡಿಸಿಕೊಂಡು ತಮ್ಮ ಆಸ್ತಿಗಳನ್ನು ಬೇರೆಯವರಿಗೆ ಮಾರಾಟ ಮಾಡಿದ ನಂತರ, ಖರೀದಿಸಿದವರ ಹೆಸರಿಗೆ ಖಾತೆ ವರ್ಗಾವಣೆ ಮಾಡಿಸಿಕೊಳ್ಳಲು ಅವಕಾಶ ಇಲ್ಲದಂತಾಗಿದೆ. ನೋಂದಣಿಯಾಗಿದ್ದರೂ, ಮೂಲ ಖಾತೆದಾರನ ಹೆಸರಿನಲ್ಲೇ ಆಸ್ತಿ ಹಕ್ಕು ಉಳಿಯುತ್ತಿವೆ.
ಬಿ ಖಾತೆ ಆಸ್ತಿ ಖರೀದಿಸಿ, ಖಾತೆ ಮಾಡಿಸಿಕೊಂಡು, ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಅಭಿವೃದ್ಧಿ ಹೊಂದುವ ಆಲೋಚನೆಯಲ್ಲಿರುವರ ಮಾಲೀಕರ ಕನಸುಗಳು ಭಗ್ನಗೊಳ್ಳುತ್ತಿವೆ. ಬಿ-ಖಾತೆದಾರರಿಗೆ ಸಿಗಬೇಕಾಗಿರುವ ಸೌಲಭ್ಯಗಳು, ಖಾತೆಯಿಂದ ಪ್ರಯೋಜನಗಳ ಕುರಿತು ಯಾವುದೇ ಮಾರ್ಪಾಡುಗಳನ್ನು ಮಾಡದಿರುವ ಕಾರಣ, ಯಾವ ಸೌಲಭ್ಯಗಳನ್ನೂ ಪಡೆಯಲಾಗದಂತೆ ಆಗಿದೆ.
ಆಸ್ತಿ ಮಾಲೀಕ ರಿಂದ ಅರ್ಜಿಗಳನ್ನು ಸ್ವೀಕರಿಸಿದ ನಂತರ ಆಸ್ತಿ ತೆರಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸಂದಾಯ ಆಗಬೇಕಾಗಿರುವ ಎಲ್ಲಾ ಶುಲ್ಕಗಳನ್ನು ಚಲನ್ ಮೂಲಕ ಬ್ಯಾಂಕ್ ಗಳಲ್ಲಿ ಹಾಗೂ ಆನ್‌ಲೈನ್ ಮೂಲಕ ಪಾವತಿಸಿದ ನಂತರ, ನಿಗದಿಪಡಿಸಿರುವ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಬಿ-ಖಾತೆ ಮಾಡಿ, ಬಿ-ಖಾತೆ ಪ್ರತಿಗಳನ್ನು ಅರ್ಜಿದಾರರಿಗೆ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸಾವಿರಾರು ಜನ ಖಾತೆಗಳನ್ನು ಪಡೆದುಕೊಂಡಿದ್ದಾರೆ. ಬಿ-ಖಾತೆಗಳು ಮಾಡಿಸುವುದರಿಂದ ಸ್ಥಳೀಯ ಸಂಸ್ಥೆಗಳ ಖಜಾನೆಗೆ ಆರ್ಥಿಕ ಸಂಪನ್ಮೂಲ ಹರಿದು ಬಂದಿದೆ ವಿನಹ ಇದರಿಂದ ಖಾತೆ ಮಾಡಿಸಿಕೊಂಡಿರುವ ನಾಗರಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಬಿ-ಖಾತೆಯ ಆಧಾರದಲ್ಲಿ ನಿವೇಶನಗಳು, ಮನೆಗಳು ಮಾರಾಟ ಮಾಡಲಾಗುತ್ತಿದೆ. ಉಪನೋಂದಣಾಕಾರಿಗಳ ಕಚೇರಿಯಲ್ಲಿ ನೋಂದಣಿಯಾದ ನಂತರವೂ, ನೋಂದಣಿ ಮಾಡಿಸಿಕೊಂಡವರ ಹೆಸರಿಗೆ ಖಾತೆ ವರ್ಗಾವಣೆ ಆಗುತ್ತಿಲ್ಲ.
ಹಣ ಕೊಟ್ಟು ಆಸ್ತಿ ಖರೀದಿಸಿದರೂ, ಪ್ರಯೋಜ ನವಿಲ್ಲ. ಈ ಅವ್ಯವಸ್ಥೆಯನ್ನು ಸರಿಪಡಿಸ ಬೇಕೆಂಬ ಒತ್ತಾಯ ಹೆಚ್ಚಿದೆ.
ಸರ್ಕಾರ ಫೆಬ್ರುವರಿ 2025 ರಲ್ಲಿ ಬಿ-ಖಾತೆ ಆಂದೋಲನ ಆರಂಭ ಮಾಡಿದ ನಂತರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಅನೇಕ ಏಜೆಂಟರು ಹುಟ್ಟಿಕೊಂಡಿದ್ದಾರೆ. ವಾರ್ಡ್‌ವಾರು ಯಾವ ನಿವೇಶನಗಳು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿವೆ ಎಂಬುದನ್ನು ಹುಡುಕಿ ಕೊಂಡು, ನೇರವಾಗಿ ಮಾಲೀಕರ ಬಳಿಗೆ ಹೋಗಿ ಅವರಿಗೆ ಸ್ಥಳೀಯ ಸಂಸ್ಥೆಗಳಲ್ಳಿ ಖಾತೆ ಮಾಡಿಸಿಕೊಡುವುದಾಗಿ ದಾಖಲೆಗಳನ್ನು ಪಡೆಯುತ್ತಿದ್ದಾರೆ. ಅಲ್ಲದೇ, ಸರ್ಕಾರ ನಿಗದಿ ಪಡಿಸಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಈ ಮಧ್ಯವರ್ತಿಗಳೇ ಅರ್ಜಿ ಸಲ್ಲಿಸಿ, ಖಾತೆಗೆ ಳನ್ನು ಮಾಡಿಸಿಕೊಡುತ್ತಿದ್ದಾರೆ. ಬಿ-ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸುವಾಗ, ಅರ್ಜಿದಾರರು ಶುದ್ದ ಕ್ರಯಪತ್ರಗಳನ್ನು ಸಲ್ಲಿಸಬೇಕು. ಆದರೆ, ಬಹಳಷ್ಟು ಖಾತೆಗಳನ್ನು ಮಾಡುವಾಗ ಜಿಪಿಎ ಆಗಿರುವ ದಾಖಲೆಗಳನ್ನು ತಿರುಚಿ, ಶುದ್ದಕ್ರಯಪತ್ರವೆಂದು ಸಲ್ಲಿಸಿ, ಖಾತೆ ಮಾಡಿಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
ಸ್ಥಳೀಯ ಸಂಸ್ಥೆ - ಒಟ್ಟು ಬಿ - ಇಖಾತಾ ಹೊಂದಿದ ಬಿ
ಲಕ್ಷೇಶ್ವರ - 117 - 81 - 36
ಸರ್ಕಾರದ ನಿರ್ದೇಶನದಂತೆ ಬಿ ಖಾತಾ ಮಾಡಿಕೊಡಲಾಗುತ್ತಿದೆ. ಕಾವೇರಿ ತಂತ್ರಾಂಶ, ಭೂಮಿ ತಂತ್ರಾಂಶದ ಜತೆಗೆ ಸ್ಥಳೀಯ ಸಂಸ್ಥೆಯ ಇಆಸ್ತಿ ತಂತ್ರಾಂಶ ಜೋಡಣೆ ಆಗಿರುತ್ತದೆ. ಹಾಗಾಗಿ ನಕಲಿ ಕ್ರಯಪತ್ರಗಳು ನೋಂದಣಿ ಅಸಾಧ್ಯ. ಒಂದುವೇಳೆ ಇಂತಹ ಕೃತ್ಯಗಳು ನಡೆಯುತ್ತಿದ್ದರೆ ಸಾರ್ವಜನಿಕರು ಗಮನಕ್ಕೆ ತರಬೇಕು.
* ಬಸನಗೌಡ ಕೋಟುರು. ಯೋಜನಾ ನಿರ್ದೇಶಕ. ಗದಗ
ಬಿ ಖಾತಾ ಸಮಸ್ಯೆಗಳು ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿವೆ. ಬಿ ಖಾತಾ ಹಿಙದಿದರೂ ಸಹ ಆಸ್ತಿ ಹಕ್ಕು ಸಾಧಿಸಲು ಸಾಧ್ಯವಿಲ್ಲ. ಬಿ ಖಾತಾ ಖರೀದಿಸುವ ಮೊದಲು ಜನರು ಯೋಚಿಸಬೇಕು.
* ರವಿಕಾಂತ ಅಂಗಡಿ, ಸಾಮಾಜಿಕ ಹೋರಾಟಗಾರ