ಗದಗ: ದೇಶವು 100 ವರ್ಷಗಳ ಸ್ವಾತಂತ್ರ್ಯ ಆಚರಿಸುವ 2047 ರ ವೇಳೆಗೆ ಸ್ವಾವಲಂಭಿ ಸದೃಢ ಹಾಗು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವದೇ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವಾಗಿದೆ ಎಂದು ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ನಡೆದ ವಿಕಸಿತ ಭಾರತದ ಅಮೃತಕಾಲ - ಮೋದಿ ಸರ್ಕಾರಕ್ಕೆ 11 ವರ್ಷ ಅಭಿಯಾನದ ಕಾರ್ಯಾಗಾರವನ್ನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಿಕ್ಷಣ,ಆರೋಗ್ಯ,ಕೃಷಿ, ಕೈಗಾರಿಕೆ, ಸಾರಿಗೆ, ವಿಜ್ಞಾನ ಮತ್ತು ತಂತ್ರಜ್ಞಾನ,ಮೂಲಸೌಕರ್ಯ ಸೃಷ್ಟಿ, ಉದ್ಯೋಗ, ಮಹಿಳಾ ಅಭಿವೃದ್ಧಿ ಹೀಗೆ ಎಲ್ಲಾ ರಂಗಗಳಲ್ಲೂ ಭಾರತ ಸಾಧನೆ ಗೈದಿದ್ದು ವಿಶ್ವದ ನಾಲ್ಕನೆಯ ಬೃಹತ್ ಆರ್ಥಿಕ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. 2047 ರ ವೇಳೆಗೆ ದೇಶವು 35 ಟ್ರೆಲಿಯನ್ ಡಾಲರ್ ಆರ್ಥಿಕತೆ ಹೊಂದಿ ಜಾಗತಿಕವಾಗಿ ಎರಡನೆಯ ದೊಡ್ಡ ರಾಷ್ಟ್ರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕಕ್ಕೆ ಸಾವಿರಾರು ಕೋಟಿ ಮೌಲ್ಯದ ನೂರಕ್ಕೂ ಹೆಚ್ಚು ಯೋಜನೆಗಳನ್ನು ಕೇಂದ್ರವು ಒದಗಿಸಿದ್ದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡದೆ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಕಾರ್ಯಗತಗೊಳ್ಳದಂತೆ ನೀಚ ರಾಜಕೀಯವನ್ನು ಮಾಡುತ್ತಿದೆ ಎಂದು ಶಾಸಕ ಚಂದ್ರು ಲಮಾಣಿ ಆರೋಪಿಸಿದರು.
ಅಭಿಯಾನದ ಜಿಲ್ಲಾ ಸಂಚಾಲಕ ಹಾಗು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಮಾತಾನಾಡಿ ಜೂನ್ 9 ರಿಂದ ಪ್ರಾರಂಭವಾದ ಅಭಿಯಾನವು ಆಗಷ್ಟ 15 ರವರೆಗೂ ನಡೆಯಲಿದ್ದು ಪರಿಸರ ಅಭಿವೃದ್ಧಿ, ಸ್ವಚ್ಛತೆ,ಯೋಗ, ಆರೋಗ್ಯ ಸಂಬಂದಿತ ಕಾರ್ಯಗಳು, ವಿಚಾರ ಸಂಕಿರಣಗಳು ಮುಂತಾದ ಜನಕಲ್ಯಾಣ ಕಾರ್ಯಕ್ರಮಗಳ ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನ ಪ್ರತಿ ನಾಗರಿಕರಿಗೂ ತಲುಪಿಸುವ ಕಾರ್ಯಸೂಚಿಯನ್ನ ಶಿಭಿರಾರ್ಥಿಗಳಿಗೆ ಪ್ರಸ್ತುತಪಡಿಸಿದರು.
ಕಾರ್ಯಗಾರದ ಸಂಪನ್ಮೂಲ ವ್ಯೆಕ್ತಿ ಹಿರಿಯ ಧುರೀಣ ನಾಗರಾಜ ಕುಲಕರ್ಣಿ ಮಾತನಾಡಿ ಬ್ರಿಟಿಷ್ ಕಾಲದ ಅಪ್ರಯೋಜಕ ಕಾನೂನು ಹಾಗು ನಿಯಮಗಳನ್ನು ರದ್ದುಗೊಳಿಸಿ ದೇಶದಲ್ಲಿ ಭ್ರಷ್ಟಾಚಾರ ರಹಿತ ಜನಪರ ಆಡಳಿತ ರೂಪಿಸಿದ ಶ್ರೇಯಸ್ಸು ಬಿಜೆಪಿ ಪಕ್ಷಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಮಾತನಾಡಿ ಆರ್ಥಿಕ ಸ್ವಾವಲಂಭನೆ, ರಕ್ಷಣಾ ವ್ಯೆವಸ್ಥೆ, ವಿದೇಶಾಂಗ ನೀತಿಗಳ ಸುಧಾರಣೆ, ತಳ ಸಮುದಾಯಗಳ ಶ್ರೇಯೋಭಿವೃದ್ಧಿ, ಒಕ್ಕೂಟ ವ್ಯೆವಸ್ಥೆಯ ಬಲಪಡಿಸುವ ಮೂಲಕ ಸಮಗ್ರ ಭಾರತದ ಅಭಿವೃದ್ಧಿಗೆ ಮೋದಿ ಸರ್ಕಾರದ ಈ ಹನ್ನೊಂದು ವರ್ಷದ ಕೊಡುಗೆ ಅಪಾರ. ಅವರ ಸಂಕಲ್ಪ ಈಡೇರಿಸುವ ಸಲುವಾಗಿ ಬಿಜೆಪಿಯ ಪ್ರತಿ ಕಾರ್ಯಕರ್ತನು ಅಭಿಯಾನದಲ್ಲಿ ಪಾಲ್ಗೊಂಡು ಸೇವಾಕಾರ್ಯ ಕೈಗೊಳ್ಳಬೇಕು ಎಂದರು.
ವೇದಿಕೆಯಲ್ಲಿ ಜಿಲ್ಲಾ ಅಭಿಯಾನ ತಂಡದ ಭದ್ರೇಶ ಕುಸಲಾಪೂರ, ತಿಮ್ಮರಡ್ಡಿ ಮರಡ್ಡಿ, ಉಮೇಶ ಮಲ್ಲಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆರ್ ಕೆ ಚವಾಣ್, ಪಕ್ಕೀರೇಶ ರಟ್ಟೀಹಳ್ಳಿ ಉಪಸ್ಥಿತರಿದ್ದರು. ಮಂಡಲ ಅಧ್ಯಕ್ಷರಾದ ಸೋಮಶೇಖರ್ ಚರೇದ,ಅಂದಪ್ಪ ಹಾರುಗೇರಿ, ಹೇಮಗಿರೀಶ ಹಾವಿನಾಳ,ಸುನೀಲ ಮಹಾಂತಶೆಟ್ಟರ,ಮಹೇಶ ಮುಸ್ಕಿನಭಾವಿ,ಬೂದಪ್ಪ ಹಳ್ಳಿ, ಸುರೇಶ ಮರಳಪ್ಪನವರ ಹಾಗು ಮಂಡಲ ಅಭಿಯಾನ ತಂಡದ ಸದಸ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.