ಗದಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕನ್ನಡ ಪ್ರಾಥಮಿಕ ಶಾಲಾ ವತಿಯಿಂದ ಭಾರತದ ಅತ್ಯಂತ ಗೌರವಯುತ ಉದ್ಯಮಿ ರತನ್ ಟಾಟಾ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಮಾತನಾಡಿ ರತನ್ ಟಾಟಾ ರವರು ಕಳೆದ ಒಂದು ಶತಮಾನದಲ್ಲಿ ದೇಶ ಕಂಡ ಅತ್ಯಂತ ಗೌರವಯುತ, ಸೇವಾ ಮನೋಭಾವದ ಉದ್ಯಮಿ ರತನ್ ಟಾಟಾ ರವರು ಆಗಿದ್ದರು. ಭಾರತ ಮಾತ್ರವಲ್ಲ ಇಡೀ ಜಗತ್ತೇ ಅತ್ಯಂತ ಗೌರವವಾಗಿ ಕಾಣುತ್ತಿದ್ದ ಉದ್ಯಮಿ ರತನ್ ಟಾಟಾ ಅವರು ತಮ್ಮ 86ನೇ ವಯಸ್ಸಲ್ಲಿ ಮೃತಪಟ್ಟಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಉದ್ಯಮಿಯಾಗಿ ಲಾಭವನ್ನಷ್ಟೇ ನೋಡದೆ ದೇಶಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ರತನ್ ರವರ ನಾಯಕತ್ವದಲ್ಲಿ ಟಾಟಾ ಗ್ರೂಪ್ ಜಾಗತಿಕ ಉದ್ಯಮವಾಗಿ ಬೆಳೆಯಿತು. ಜನರಿಗೆ ಅನುಕೂಲವಾಗುವ ಮನೆ ಮಾತಾಗಿರುವ ಟಾಟಾ ಟಿ, ಟಾಟಾ ಮೋಟರ್ಸ್ ಮತ್ತು ಟಾಟಾ ಸ್ಟೀಲ್, ಆಟೋಮೊಬೈಲ್, ಉಕ್ಕು, ದೂರಸಂಪರ್ಕ ಮತ್ತು ಮತ್ತು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಉದ್ಯಮವನ್ನು ತೊಡಗಿಸಿಕೊಂಡಿದ್ದರು. ಇವರ ಉದ್ಯಮ ಸಾಧನೆ, ಸೇವಾ ಕಾರ್ಯಕ್ಕೆ ಮೆಚ್ಚಿ ಕೇಂದ್ರ ಸರ್ಕಾರವು ಪದ್ಮಭೂಷಣ, ಪದ್ಮವಿಭೂಷಣ ನೀಡಿ ಗೌರವಿಸಿದೆ. ಇವರು ತಮ್ಮ ಸಂಪಾದನೆಯ ಶೇ 60ಕ್ಕೂ ಹೆಚ್ಚು ಹಣವನ್ನು ಟಾಟಾ ಚಾರಿಟಿಗೆ ದಾನವಾಗಿ ನೀಡುತ್ತಿದ್ದರು. ಹಾಗಾಗಿ ಇವರನ್ನು ಆಧುನಿಕ ಜಗತ್ತಿನ ಕರ್ಣ ಎಂದು ಕರೆಯುವರು. ಎಷ್ಟೋ ಜನರಿಗೆ ಉದ್ಯೋಗ ನೀಡಿ ಉದ್ಯೋಗದಾತರಾಗಿದ್ದಾರೆ, ಎಷ್ಟೋ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಜಗತ್ತು ಕಂಡ ಅತ್ಯಂತ ಸರಳ ಸಜ್ಜನಿಕೆಯ, ಶಾಂತ ಸ್ವಭಾವದ ಉದ್ಯಮಿ ರತನ್ ಟಾಟಾ ರವರು ಇಂದು ನಮ್ಮನ್ನು ಅಗಲಿದ್ದಾರೆ. ಇವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದರು.
ಭಾರತದ ಗಣ್ಯ ಉದ್ಯಮಿ ರತನ್ ಟಾಟಾ ರವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಎರಡು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ಪವನ. ಎಸ್. ಹುಯಿಲಗೋಳ, ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ. ಎಸ್. ಹುಯಿಲಗೋಳ, ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ವಿ. ಹವಾಲ್ದಾರ, ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ, ಶಾಲೆಯ ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.