ಜಿಲ್ಲೆ

ಜಗತ್ತಿನಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮೊಟ್ಟಮೊದಲು ಪ್ರತಿಪಾದಿಸಿದವರು ಬಸವಣ್ಣನವರು: ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ

Gadag - Shivanand Hiremath
ಗದಗ: ರಾಜ್ಯಾದ್ಯಂತ ವ್ಯಸನಮುಕ್ತ ಸಮಾಜ ನಿರ್ಮಾಣ, ಸಮಸಮಾಜದ ಪರಿಕಲ್ಪನೆ ಪಸರಿಸುವುದು, ಮೌಢ್ಯ ಆಚರಣೆ ಮತ್ತು ಶೋಷಣೆಯಿಂದ ಜನರನ್ನು ಮುಕ್ತಗೊಳಿಸುವುದು, ಕಾಯಕ, ದಾಸೋಹದ ಮಹತ್ವವನ್ನು ಸಾರುವ ಬಸವಾದಿ ಶರಣರ ಕನಸನ್ನು ಸಾಕಾರಾಗೊಳಿಸಲು ಬಸವ ಸಂಸ್ಕೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ನಗರದ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಸಮಸ್ತ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆಯಿಲ್ಲ. ಆದರೆ, ಲಿಂಗಾಯತ ಎಂದು ಬರೆಸುವ ಜನರ ಕೊರತೆಯಿಂದಾಗಿ ಲಿಂಗಾಯತರ ಸಂಖ್ಯೆ ಕಡಿಮೆಯಾಗುತ್ತಿದೆ. ಲಿಂಗಾಯತರ ಸಂಖ್ಯೆ ಕಡಿಮೆಯಾಗಬಾರದು, ನಿಮ್ಮ ಜನಸಂಖ್ಯೆಗೆ ಅನುಗುಣವಾಗಿ ನಿಮ್ಮ ಮೀಸಲಾತಿ ಇರುತ್ತದೆ. ಟಿಕೆಟ್ ಸಿಗುತ್ತದೆ, ಸಚಿವ ಸ್ಥಾನ ಸಿಗುತ್ತದೆ. ಆದ್ದರಿಂದ ಲಿಂಗಾಯತ ಎಂದು ಬರೆಸಲಾಗದೇ ಬೇರೆ ಏನೋ ಬರೆಸುತ್ತ ಹೋದರೆ ಲಿಂಗಾಯತರು ಮುಂಬರುವ ಎಲ್ಲ ಅವಕಾಶಗಳಿಂದ ವಂಚಿತರಾಗುತ್ತಾರೆ ಎಂಬುದನ್ನು ವ್ಮರೆಯಬಾರದು ಎಂದು ಹೇಳಿದರು.
ಜಗತ್ತಿನಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮೊಟ್ಟಮೊದಲು ಪ್ರತಿಪಾದಿಸಿದವರು ಮತ್ತು ಅಂತಹ ಮೌಲ್ಯಗಳನ್ನು ಅನುಷ್ಠಾನಕ್ಕೆ ತಂದವರು ಬಸವಣ್ಣನವರಾಗಿದ್ದಾರೆ. ಸಾಮಾಜಿಕ ನ್ಯಾಯ, ಜಾತಿ-ಮತ-ಪಂಥಗಳ ಭೇದವನ್ನು ಮರೆತು ಸಮಸಮಾಜವನ್ನು ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.
ಅಸ್ಪೃಶ್ಯತೆ ಎಂಬುದು ನಮ್ಮ ಸಮಾಜಕ್ಕೆ ಅಂಟಿದ ಶಾಪವಾಗಿದೆ. ಆ ಶಾಪ ಮುಕ್ತವಾದಾಗ ಮಾತ್ರ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ. ವ್ಯಸನಮುಕ್ತ, ಸರ್ವಾಂಗ ಸುಂದರವಾದ ಸಮಾಜ, ಜಾತಿ-ಮತ-ಪಂಥ, ಲಿಂಗ ಬೇಧಗಳಿಂದ ಮುಕ್ತವಾಗಿರುವ ಸಮಾಜವನ್ನು ನಿರ್ಮಾಣ ಮಾಡುವುದೇ ಬಸವ ಅನುಯಾಯಿಗಳ ಕರ್ತವ್ಯ ಎಂದು ಹೇಳಿದರು.
ಬೂದೀಶ್ವರ ಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಆದರ್ಶಗಳು, ಮೌಲ್ಯಗಳು ಸಮಾಜಕ್ಕೆ ಅವಶ್ಯವಾಗಿದೆ. ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಸಮಾಜದಲ್ಲಿರುವ ಜನರಿಗೆ ತಲುಪಿಸುವ ಕೆಲಸ ಮಾಡಿದರೆ ಜನರಲ್ಲಿ ಅರಿವು ಉಂಟಾಗುತ್ತದೆ. ವ್ಯಸನ, ಅಂಧಶ್ರದ್ಧೆ ಮತ್ತು ಮೂಢನಂಬಿಕೆಗಳಿಂದ ಮುಕ್ತರಾಗುತ್ತಾರೆ ಎಂದು ಹೇಳಿದರು.
ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೂಡಲಸಂಗಮ ಬಸವಧರ್ಮ ಮಹಾಪೀಠದ ಡಾ. ಗಂಗಾ ಮಾತಾಜಿ, ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ, ನಿಜಗುಣ ಪ್ರಭು ಸ್ವಾಮೀಜಿ,   ಮಾತನಾಡಿದರು.
ವಿಶ್ರಾಂತ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಡಿ.ಆರ್. ಪಾಟೀಲ, ಮಾಜಿ ಸಚಿವ ಎಸ್.ಎಸ್. ಪಾಟೀಲ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ,  ಕೆ.ಎಸ್. ಚೆಟ್ಟಿ, ಶೇಖಣ್ಣ ಕವಳಿಕಾಯಿ, ಜಿ.ಬಿ. ಪಾಟೀಲ, ಶ್ರೀದೇವಿ ಶೆಟ್ಟರ, ಸುಧಾ ಹುಚ್ಚಣ್ಣವರ, ಗೌರಕ್ಕ ಬಡಿಗಣ್ಣವರ, ಗಿರಿಜಕ್ಕ ಹಸಬಿ, ಅಮರೇಶ ಅಂಗಡಿ ಸೇರಿ ಹಲವರು ಪಾಲ್ಗೊಂಡಿದ್ದರು.
ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು ವಿಷಯದ ಕುರಿತು ಆಳಂದದ ತೋಂಟದಾರ್ಯ ಅನುಭವ ಮಂಟಪದ ಸಂಚಾಲಕ ಕೋರಣೇಶ್ವರ ಸ್ವಾಮೀಜಿ, ಅಸ್ಪೃಶ್ಯತಾ ನಿವಾರಣೆಗೆ ಶರಣರ ಕೊಡುಗೆ ವಿಷಯದ ಕುರಿತು ಡಾ. ಸಿದ್ಧನಗೌಡ ಪಾಟೀಲ ಉಪನ್ಯಾಸ ನೀಡಿದರು. ನಂತರ ಜಂಗಮದೆಡೆಗೆ ನಾಟಕ ಪ್ರದರ್ಶನಗೊಂಡಿತು.
ಕೋಟ್
ಲಿಂಗಾಯತರು ಎಚ್ಚರಗೊಳ್ಳುವ ಸಮಯ ಬಂದಿದ್ದು, ಈ ಸಂದರ್ಭದಲ್ಲಿ ಎಚ್ಚರಗೊಳ್ಳದಿದ್ದರೆ ಮುಂದಿನ ಹತ್ತು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಆದ್ದರಿಂದ, ಪ್ರತಿಯೊಬ್ಬ ಲಿಂಗಾಯತರು ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಲಿಂಗಾಯತರು ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ತಮ್ಮ ಜಾತಿಯ ಹೆಸರನ್ನು ಬರೆಸಬೇಕು. ಇದರಿಂದ ಲಿಂಗಾಯತರ ನಿಖರ ಸಂಖ್ಯೆ ತಿಳಿಯುತ್ತದೆ.
-ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ
ಬಾಕ್ಸ್
ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆ:
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಸಮಸ್ತ ಬಸವಪರ ಸಂಘಟನೆಗಳ ಆಶ್ರಯದಲ್ಲಿ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಅಂಗವಾಗಿ ಹಮ್ಮಿಕೊಂಡಿರುವ ರಥಯಾತ್ರೆಯನ್ನು ನಗರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಗರದ ಹತ್ತಿಕಾಳ ಕೂಟದಲ್ಲಿರುವ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಆರಂಭವಾದ ಬಸವ ರಥಯಾತ್ರೆ ಹುಯಿಲಗೋಳ ನಾರಾಯಣರಾವ್ ವೃತ್ತ, ಮಹೇಂದ್ರಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತ ಮಾರ್ಗವಾಗಿ ತೆರಳಿ ತೋಂಟದಾರ್ಯ ಮಠದವರೆಗೂ ಸಾಗಿತು. ಮೆರವಣಿಗೆಯಲ್ಲಿ ಕದಳಿ ಮಹಿಳಾ ವೇದಿಕೆಯ ಸದಸ್ಯರು ವಚನದ ಕಟ್ಟುಗಳನ್ನು ತಲೆಮೇಲೆ ಹೊತ್ತು ಸಾಗಿದರು. ವಿವಿಧ ಸ್ತಬ್ದಚಿತ್ರಗಳು ಹಾಗೂ ಕಲಾತಂಡಗಳು ರಥಯಾತ್ರೆಯ ಮೆರುಗನ್ನು ಹೆಚ್ಚಿಸಿದ್ದವು.