ವಿಜಯವಾಣಿ ಸುದ್ದಿಜಾಲ ಗದಗ
ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಸೋಮವಾರ ಜಿಲ್ಲಾದ್ಯಂತ ಮುಸ್ಲಿಂ ಸಮುದಾಯದವರು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು. ಬೆಳಗ್ಗೆ ವಿವಿಧ ಕಡೆ ಪ್ರಾರ್ಥನೆ ಸಲ್ಲಿಸಿ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಬಡವರಿಗೆ ದಾನ ಮಾಡಿದರು.
ಬೆಳಗ್ಗೆಯಿಂದಲೇ ಜನರು ತಕರೀರ್ ಹೇಳುತ್ತ ಮಸೀದಿ ಕಡೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕಂಡು ಬಂದಿತು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಹಿರಿಯರು ಹಾಗೂ ಕಿರಿಯರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ವಿಶೇಷ ಖಾದ್ಯ ತಯಾರಿಸಿ ಬಂಧು-ಬಳಗ, ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಹಬ್ಬದೂಟ ಬಡಿಸಿದರು. ಮುಸ್ಲಿಂ ಧರ್ಮದ ಶಿಷ್ಠಾಚಾರದಂತೆ ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಬಂಧುಗಳು ಸಾಮೂಹಿಕ ಪ್ರಾರ್ಥನೆ ನಂತರ ತಮ್ಮ ಬಂಧು-ಬಳಗ ಹಾಗೂ ಗೆಳೆಯರನ್ನು ಕಂಡು ಕುಶಲ ವಿಚಾರಿಸಿದರು.
ನಗರದ ಮುಸ್ಲಿಂ ಬಾಂಧವರೊಂದಿಗೆ ಸಚಿವ ಎಚ್.ಕೆ. ಪಾಟೀಲ ಬಕ್ರೀದ್ ಹಬ್ಬ ಆಚರಿಸಿದರು.
ನಗರದಲ್ಲಿ ನಡೆದ ಪ್ರಾರ್ಥನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ, ಉಮರ್ ಫಾರೂಕ್ ಹುಬ್ಬಳ್ಳಿ, ಬಿ. ಬಿ. ಅಸೂಟಿ, ಅಶೋಕ ಮಂದಾಲಿ ಇದ್ದರು.
ವಿಶೇಷ ಖಾದ್ಯ:
ಬಕ್ರೀದ್ ಹಬ್ಬದ ಅಂಗವಾಗಿ ಮನೆಯಲ್ಲಿ ವಿಶೇಷ ಖಾದ್ಯ ತಯಾರಿಸಿ ಬಂಧು-ಬಳಗ, ಸ್ನೀಹಿತರನ್ನು ಮನೆಗೆ ಆಹ್ವಾನಿಸಿ ಹಬ್ಬದೂಟ ಬಡಿಸಿದರು. ಜತೆಗೆ ಮನೆ ಮಂದಿ ಒಟ್ಟಿಗೆ ಕುಳಿತು, ಸುರುಕುಂಬ, ಬಿರಿಯಾನಿ ಸವಿದರು. ಸಮಾಜದ ಕೆಲ ಸ್ಥಿತಿವಂತರು ಬಡವರಿಗೆ ಆಹಾರ ಸಾಮಗ್ರಿ ಹಾಗೂ ವೈದ್ಯಕಿಯ ಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡಿದರು.