Gadag: ಪ್ರತಿ ವರ್ಷ ಹೇಳುತ್ತಲೇ ಬರುತ್ತಿದ್ದೇವೆ ಮನೆಗೊಂದು ಮರ ಊರಿಗೊಂದು ವನ ಇದು ಬರೆ ಹೇಳಿಕೆ ಆಗಬಾರದು ಕಾರಣ ನಮ್ಮ ಉತ್ತಮ ಭವಿಷ್ಯಕ್ಕಾಗಿ, ನಮ್ಮ ಮುಂದಿನ ಪೀಳಿಗೆಯ ಉಜ್ಜವವಾದ ನಾಳೆಗಳಿಗಾಗಿ ಪರಿಸರವನ್ನ ಉಳಿಸಿ ಬೆಳೆಸಬೇಕಾಗಿದೆ ಆವೊಂದು ಉದ್ದೇಶದಿಂದ ನಾವು ಇಂದಿನ ಮಕ್ಕಳಿಗೆ, ಯುವ ಜನರಿಗೆ ಪರಿಸರದ ಕಾಳಜಿ ಮೂಡಿಸಲು ಆಚರಿಸುವ ದಿನವೇ ವಿಶ್ವ ಪರಿಸರ ದಿನ. ಜಾಗತಿಕ ಮಟ್ಟದಲ್ಲಿ ಸುಮಾರು ನೂರಕ್ಕಿಂತ ಹೆಚ್ಚಿನ ರಾಷ್ಟ್ರಗಳು ಜೂನ್ ಐದನ್ನು ಪರಿಸರ ದಿನವನ್ನಾಗಿ ಆಚರಿಸುವುದರಿಂದಲೇ ಇದು ವಿಶ್ವ ಪರಿಸರ ದಿನಾಚರಣೆ ಎನಿಸಿಕೊಂಡಿದೆ.
ವನಮಹೋತ್ಸವ ಎಂದೂ ಕರೆಯುವ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ 5ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. 1974ರಿಂದ ಆಚರಿಸಲ್ಪಡುತ್ತಿರುವ ಪರಿಸರ ದಿನದಂದು ಪರಿಸರ ಕುರಿತು ಜಾಗೃತಿ ಮೂಡಿಸುವುದು, ಪರಿಸರವನ್ನು ಸಂರಕ್ಷಿಸುವ ಕಾರ್ಯಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ವಿಶ್ವಸಂಸ್ಥೆ ಹೊಂದಿದೆ.ಜೂನ್ ತಿಂಗಳೆಂದರೆ ಅದಕ್ಕೆ ಒಂದು ವಿಶೇಷತೆ ಇದೆ. ಅದೇನೆಂದರೆ ವಿಶ್ವ ಪರಿಸರ ದಿನಾಚರಣೆ. ನಾವು ನಮ್ಮ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಹಾಗೂ ಇಂದು ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದ ಮಹತ್ತರವಾದ ದಿನ. ಮಾನವ ಪರಿಸರದ ಶಿಶು, ಪರಿಸರವಿಲ್ಲದೆ ಮಾನವನ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಆದ್ದರಿಂದಲೇ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ.1972 ರಲ್ಲಿ ವಿಶ್ವಸಂಸ್ಥೆಯ ಘೋಷಣೆಯ ನಂತರ, 1973 ಜೂನ್ 5 ರಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನದ ವಿಶೇಷವೇನೆಂದರೆ ಎಲ್ಲರಿಗೂ ಪರಿಸರ ಸಂಬಂಧಿತ ವಿಷಯಗಳು ಪ್ರತಿಯೊಬ್ಬರಿಗೂ ತಿಳಿಯಬೇಕೆಂಬುದೇ ಆಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರದ ಸ್ಥಿತಿ ಗತಿ ತಿಳಿಯುವುದು, ಸ್ವಚ್ಛ ಪರಿಸರದ ಅಗತ್ಯತೆಯನ್ನು ಅರಿಯುವುದು ಹಾಗೂ ಜನರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಜಾಗತಿಕ ಮಟ್ಟದಲ್ಲಿ ಮೂಡಿಸುವಂತಹ ಘನೋದ್ದೇಶಗಳು ಪರಿಸರ ಆಚರಣೆಯಲ್ಲಿ ಸೇರಿವೆ.
ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ , ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಂದ ಇಂದು ಪರಿಸರಕ್ಕೆ ತೀವ್ರ ಧಕ್ಕೆಯುಂಟಾಗಿದ್ದು, ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದೂ ಆಗಿದ್ದು, ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಮಹತ್ವದ ಉದ್ದೇಶ ಕೂಡಾ ಈ ಪರಿಸರ ದಿನಾಚರಣೆಯಲ್ಲಿ ಅಡಗಿದೆ.
ಮನುಷ್ಯ ಸಂಕುಲ ಬದುಕಲು ಇರುವುದೊಂದೇ ಭೂಮಿ. ಎಲ್ಲವೂ ಸೊಂಪಾಗಿ ಇದ್ದ ಭೂಮಿ ಇದೀಗ ಅಕಾಲಿಕ ಮಳೆಯಿಂದ ಬೆಳೆಗಳು ನಾಶವಾಗುತ್ತಿವೆ. ಉರಿ ಬಿಸಿಲು ಮನುಷ್ಯನ ನೆತ್ತಿ ಸುಡುತ್ತಿದೆ. ಕಾಡುಪ್ರಾಣಿಗಳು ಹೊಲ ಗದ್ದೆಗಳಿಗೆ ನುಗ್ಗುತ್ತಿವೆ, ನಗರ ಪ್ರವೇಶಿಸುತ್ತಿದೆ, ಹಳ್ಳಿಗಳ ಮೇಲೆ ದಾಳಿ ಮಾಡುತ್ತಿವೆ. ಹೊಸ ಹೊಸ ರೋಗರುಜಿನಗಳು ಜೀವ ಹಿಂಡುತ್ತಿವೆ. ಋತುಗಳು ಕಾಲತಪ್ಪುತ್ತಿವೆ. ಭೂಗೋಳ ಬಿಸಿಯೇರುತ್ತಿದೆ. ಇದೇಕೆ ಹೀಗೇ? ಇದಕ್ಕೆಲ್ಲಾ ಕಾರಣ ಯಾರು? ಪ್ರಶ್ನೆಗಳೆಷ್ಟಿದ್ದರೂ ಉತ್ತರ ಒಂದೇ....ನಾವೇ, ನಮ್ಮ ದುರಾಸೆಯ ಜೀವನ ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಬೇಕು. ಕೇವಲ ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಕೈ ಜೋಡಿಸೋಣ.
ಈ ಒಂದು ಪರಿಸರ ದಿನಾಚರಣೆ ನಿಮಿತ್ಯ ತಮ್ಮೆಲ್ಲರಿಗೂ ಹಂಚಿಕೊಳ್ಳುವ ಸಂತಸದ ಸಂಗತಿ ಎಂದರೆ ನಮ್ಮ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ದತ್ತು ಗ್ರಾಮವಾದ ಅಂತೂರು ಬೆಂತೂರು ಪ್ರಾಥಮಿಕ ಶಾಲಾ ಆವರಣ, ಕಪ್ಪತ್ತಗುಡ್ಡದ ನಂದಿವಿರಿ ಮಠದ ಆವರಣ, ಹಾಗೂ ಮಹಾವಿದ್ಯಾಲಯದ ಆವರಣದಲ್ಲಿ ಇಡೀ ಒಂದು ವರ್ಷದಲ್ಲಿ ಒಂದು ಸಾವಿರ ಗಿಡಗಳನ್ನು ನೆಡಲಾಗಿದ್ದು ಸ್ವಯಂಸೇವಕ್ಕ ಸೇವಕಿಯರು ಗಿಡಗಳ ಲಾಲನೆ ಪಾಲನೆಯಲ್ಲಿ ತೊಡಗಿರುವುದು ತುಂಬಾ ಸಂತಸದ ಸಂಗತಿ ಈ ಒಂದು ಲೇಖನದ ಮೂಲಕ ಆ ಎಲ್ಲ ವಿದ್ಯಾರ್ಥಿಗಳಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ.