ವಿಜಯವಾಣಿ ಸುದ್ದಿಜಾಲ ಗದಗ
ನಗರದಲ್ಲಿ ಮತ್ತೇ ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಕಳೆದೆರೆಡೂ ತಿಂಗಳಿನಿಂದ ಪರದೇ ಹಿಂದೆ ಅಕ್ರಮ ವ್ಯವಹಾರ ನಡೆಸುತ್ತಿದ್ದ ಅಕ್ಕಿ ಖದೀಮರೂ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬೆಟಗೇರಿಯ ನರಸಾಪೂರ ಕೈಗಾರಿಕಾ ವಲಯದ ಕೆಐಡಿಬಿ ಪ್ಲಾಟ್ ನಂ.3ರ ಗೂಡೌನ್ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 61000 ರೂ. ಮೌಲ್ಯದ 18 ಕ್ವಿಂಟಾಲ್ ಅಕ್ಕಿ ಪತ್ತೆ ಆಗಿದೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲವಾರು ಬಾರಿ ಅಕ್ರಮ ಅಕ್ಕಿ ಸಾಗಾಟ ಪ್ರಕರಣಗಳು ದಾಖಲಾಗುತ್ತಿದ್ದರೂ ಕೇವಲ ಕಾಟಾಚಾರಕ್ಕೆ ಎನ್ನುವಂತಾಗಿದೆ.ಬೆಟಗೇರಿ ಭಾಗದ ಪ್ರಭಾವಿ ನಾಯಕರು ಅಕ್ರಮ ಅಕ್ಕಿ ಮಾರಾಟ, ಸಾಗಾಟದಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿದುಂದಿದೆ. ಹೊಳೆಯಾಲೂರು ಭಾಗದ ಎಪಿಎಂಸಿ ದಲಾಲಿ ವರ್ತಕರಿಗೆ ಅಕ್ಕಿ ಸಾಗಿಸುತ್ತಿದ್ದರು ಎಂದು ಮೆಲ್ನೋಟಕ್ಕೆ ಕಂಡು ಬಂದಿದ್ದು, ತನಿಖೆ ನಂತರವೇ ಸತ್ಯಾಸತ್ಯತೆ ಹೊರ ಬೀಳಲಿದೆ.
ಅನ್ನಭಾಗ್ಯ ಪ್ರಕರಣ:
ಪ್ರಸಕ್ತ ಸಾಲಿನ (2024) ಏಪ್ರಿಲ್ ರಿಂದ ಈ ವರೆಗೆ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ 6 ಪ್ರಕರಣ ದಾಖಲಿಸಲಾಗಿದೆ. ಗದಗ ತಾಲೂಕಿನಲ್ಲಿ 3 ಪ್ರಕರಣ, ಮುಂಡರಗಿಯಲ್ಲಿ 2 ಹಾಗೂ ರೋಣದಲ್ಲಿ 1 ಪ್ರಕರಣ ದಾಖಲಿಸಿ ಒಟ್ಟು 5.82 ಲಕ್ಷ ಮೌಲ್ಯದ 171.30 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದ್ದು 9 ಜನರ ಮೇಲೆ ಪ್ರಕರಣ ದಾಖಲಾಗಿದ್ದು. 1 ಲಕ್ಷ ಮೌಲ್ಯದ ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಎಲ್ಲಾ ಪ್ರಕರಣಗಳಲ್ಲಿಯೂ ಕೇವಲ ಚಾಲಕರ ಮೇಲೆ ಪ್ರಕರಣ ದಾಖಲಿಸಿ ಮೂಲ ಅಕ್ಕಿ ಸಾಗಾಟಗಾರರ ಮೇಲೆ ಪ್ರಕರಣ ದಾಖಲಿಸದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ನರಸಾಪುರ ಕೈಗಾರಿಕಾ ವಲಯದಲ್ಲಿ ಸಿಕ್ಕಿ ಬಿದ್ದ ಅಕ್ರಮ ಅಕ್ಕಿ ಸಂಗ್ರಹ ಪ್ರಕರಣ 7ನೇ ಪ್ರಕರಣವಾಗಿದ್ದು, 61 ಸಾವಿರ ಮೌಲ್ಯದ 18 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿಕೊಳ್ಳಲಾಗಿದೆ.