ಜಿಲ್ಲೆ

ಅಂದಾನೆಪ್ಪ ದೊಡ್ಡಮೇಟಿ ಅವರ ಸಮಾಧಿ ಅಭಿವೃದ್ಧಿ ಅವೀಸ್ಮರಣಿಯ ಸ್ಮಾರಕವಾಗಲಿ: ಎಚ್.ಕೆ.ಪಾಟೀಲ

ಗದಗ: ಕರ್ನಾಟಕದ ಏಕೀಕರಣದ ರೂವಾರಿ ಸ್ವಾತಂತ್ರ್ಯ ಹೋರಾಟಗಾರ ದಿ.ಅಂದಾನೆಪ್ಪ ದೊಡ್ಡಮೇಟಿ ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸಿ ಅವೀಸ್ಮರಣಿಯ ಸ್ಮಾರಕ ನಿರ್ಮಾಣ ಮಾಡೋಣ ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚೆನ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರದಂದು ಜರುಗಿದ ದಿ.ಅಂದಾನೆಪ್ಪ ದೊಡ್ಡಮೇಟಿ ಅವರ ಸಮಾಧಿ ಅಭಿವೃದ್ಧಿ ಪಡಿಸುವ ಸಭೆಯ ಅಧ್ಯಕ್ಷತೆಯ ವಹಿಸಿ ಅವರು ಮಾತನಾಡಿದರು. ದಿ.ಅಂದಾನೆಪ್ಪ ದೊಡ್ಡಮೇಟಿ ಅವರು ಕರ್ನಾಟಕ ಏಕೀಕರಣಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟ ಸಂಗ್ರಾಮದಲ್ಲಿ ತಮ್ಮದೇ ಆದಂತಹ ಕೊಡುಗೆ ನೀಡಿದ್ದಾರೆ. ಅವರ ಜೀವನದುದ್ದಕ್ಕೂ ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ ಮೂಲಕ ಹೆಸರುವಾಸಿ ಆಗಿದ್ದಾರೆ.

ಮಹಾತ್ಮಾ ಗಾಂಧೀಜಿಯವರು ಗದಗಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಜಕ್ಕಲಿಗೆ ಕರೆದೊಯ್ದಿದ್ದಾರೆ. ಹಾಗೂ ಮಾಜಿ ಪ್ರಧಾನಿ ದಿ. ಜವಹಾರಲಾಲ ನೆಹರು ಅವರೊಂದಿಗೂ ಸಹ ಒಡನಾಟ ಹೊಂದಿದ್ದರು. ಅವರ ಸಮಾಧಿ ಸ್ಥಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು ಇದೊಂದು ಪ್ರವಾಸಿ ತಾಣವಾಗಿ ಹೊರಹೊಮ್ಮಲಿ ಎಂಬ ಸದಾಶಯ ಹೊಂದಿದ್ದೇವೆ ಎಂದರು.

ಪ್ರಥಮ ಹಂತದಲ್ಲಿ ಅಂದಾನೆಪ್ಪ ದೊಡ್ಡಮೇಟಿ ಅವರ ಪುತ್ಥಳಿ, ಉತ್ತಮ ಗ್ರಂಥಾಲಯ, ಉದ್ಯಾನವನ, ಸಾಂಸ್ಕøತಿಕ ಭವನ ಹಾಗೂ ಅಪರೂಪದ ಛಾಯಾಚಿತ್ರಗಳ ಪ್ರದರ್ಶನಗಳ ಸಂಗ್ರಹ ಮಾಡಿ ಅವುಗಳನ್ನು ಜನಸಾಮಾನ್ಯರಿಗೆ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಉತ್ತಮವಾದ 3-4 ಪರಿಕಲ್ಪನೆಗಳನ್ನು ರೂಪಿಸಿ ಅದಕ್ಕೆ ಪರಿಣಿತ ಆರ್ಕಿಟೆಕ ರಿಂದ ನೀಲನಕ್ಷೆ ಶೀಘ್ರವೇ ರೂಪಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿಗಳಿಗೆ ಸಚಿವ ಎಚ್.ಕೆ.ಪಾಟೀಲ ಅವರು ಸೂಚಿಸಿದರು.

ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ ಕರ್ನಾಟಕದ ಏಕೀಕರಣದ ರೂವಾರಿ ದಿ.ಅಂದಾನೆಪ್ಪ ದೊಡ್ಡಮೇಟಿ ಅವರ ಸ್ಮಾರಕ ಭವನ ನಿರ್ಮಾಣ ಕಾರ್ಯಕ್ಕೆ ಪ್ರೋತ್ಸಾಹಿಸಿ ಅಗತ್ಯ ಸಹಕಾರ ನೀಡಿದ ಸರ್ಕಾರದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಎಚ್.ಕೆ.ಪಾಟೀಲರಿಗೆ ಅಭಿನಂದನೆ ಎಂದರು. ಸರ್ಕಾರದ ಈ ನಿರ್ಧಾರ ಈ ಭಾಗದ ಅಂದಾನೆಪ್ಪ ದೊಡ್ಡಮೇಟಿ ಅವರ ಅಭಿಮಾನಿಗಳಲ್ಲಿ ಹೊಸ ಹುಮ್ಮಸ್ಸು ತಂದಿದೆ. ಇದರಿಂದ ಮುಂದಿನ ಪೀಳಿಗೆಗೆ ಅಂದಾನೆಪ್ಪ ದೊಡ್ಡಮೇಟಿ ಅವರ ಹೋರಾಟ, ಜೀವನ ಪರಿಚಯಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಸಭೆಯಲ್ಲಿ ಪಾಲ್ಗೊಂಡು ಗಣ್ಯರು ತಮ್ಮ ಅಭಿಪ್ರಾಯಗಳನ್ನು ಸಭೆಯ ಗಮನಕ್ಕೆ ತರುವ ಮೂಲಕ ಉತ್ತಮ ಸ್ಮಾರಕ ಭವನ ಇದಾಗಲಿ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೋಟ್ರೆಶ ವಿಭೂತಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಗಣ್ಯರುಗಳಾದ ವಿವೇಕಾನಂದಗೌಡ ಪಾಟೀಲ, ಪ್ರೋ.ಎಚ್.ಎಸ.ಹುಡೇದ, ರವೀಂದ್ರನಾಥ ದೊಡ್ಡಮೇಟಿ, ಚನ್ನಬಸವ ದೊಡ್ಡಮೇಟಿ, ಸಂದೇಶ ದೊಡ್ಡಮೇಟಿ, ಎಂ.ಎಸ್.ದಡೇಸೂರಮಠ, ಅ.ದ.ಕಟ್ಟಿಮನಿ, ಗಂಗವ್ವ ಜಂಗನ್ನವರ, ಮಲ್ಲಿಕಾರ್ಜುನ ಮೇಟಿ, ಕೆ.ಸಿ.ಕೇಸರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.