ಗದಗ: ಸಮಾನತೆ, ಭ್ರಾತೃತ್ವದ ಅಡಿಯಲ್ಲಿ ಭಾರತೀಯ ಸಮಾಜವನ್ನು ಕಟ್ಟುವ ಕನಸಿಗೆ ಪೂರಕವಾಗಿ ಸಂವಿಧಾನವನ್ನು ರೂಪಿಸಿದರು. ಸಮಾಜದಲ್ಲಿನ ಅಸಮಾನತೆ ದೇಶದ ಅಭಿವೃದ್ಧಿಗೆ ಕುಂಠಿತ ಎಂಬುದನ್ನು ಮನಗಂಡು ಸಮಸಮಾಜ ನಿರ್ಮಾಣಕ್ಕೆ ಜೀವನವನ್ನು ಸಮರ್ಪಿಸಿಕೊಂಡರು. ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಲು ಶಿಕ್ಷಣ ಸಂಘಟನೆ ಮತ್ತು ಹೋರಾಟ ಅಗತ್ಯವೆಂದು ಪ್ರತಿಪಾದಿಸಿ, ಮನುಕುಲಕ್ಕೆ ಬೆಳಕಾದವರು ಅಂಬೇಡ್ಕರ ಎಂದು ಚಿಂತಕರಾದ ಪ್ರೊ. ಕೆ.ಎಚ್.ಬೇಲೂರ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ಜರುಗಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ದೇಶ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹೇಗೆ ಸರ್ವಾಂಗ ಸುಂದರವಾಗಬೇಕೆAಬುದನ್ನು ತಮ್ಮ ಬರಹ ಹಾಗೂ ಚಿಂತನೆಗಳ ಮೂಲಕ ಪ್ರತಿಪಾದಿಸಿದ್ದಾರೆ. ಭಾರತೀಯ ಸಮಾಜ ಇವರ ಚಿಂತನೆಗಳ ಅಡಿಯಲ್ಲಿ ಬೆಳಗಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ಅವರು ಮಾತನಾಡಿ, ನಿರಂತರ ಓದಿನ ಮೂಲಕ ಅಪಾರ ಜ್ಞಾನ ಸಂಪಾದಿಸಿದ ಬಾಬಾಸಾಹೇಬ ಅವರು ಸಮಾಜೋದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಬಹುತ್ವದ ಭಾರತವನ್ನು ಭವಿಷ್ಯದಲ್ಲಿ ಕಾಪಾಡುವ ನಿಟ್ಟಿನಲ್ಲಿ ಮಾನವತೆಯ ಮೂಲ ತಳಹದಿಯ ಮೇಲೆ ಸಂವಿಧಾನವನ್ನು ರಚಿಸಿ, ಸರ್ವರಿಗೂ ಸಮಬಾಳು, ಸಮಪಾಲಿನ ಕನಸನ್ನು ಕಂಡರು. ಇಂದಿನ ಯುವಪೀಳಿಗೆ ಅವರ ಚಿಂತನೆಗಳನ್ನು ಅರ್ಥೈಸಿಕೊಂಡು, ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಡಾ. ರಾಜೇಂದ್ರ ಗಡಾದ ಅವರು ಅಂಬೇಡ್ಕರ ಕುರಿತಾಗಿ ಕವನ ವಾಚಿಸಿದರು. ಕಿಶೋರಬಾಬು ನಾಗರಕಟ್ಟಿ ನಿರೂಪಿಸಿ ಸ್ವಾಗತಿಸಿದರು. ಡಿ.ಎಸ್.ಬಾಪುರಿ ವಂದಿಸಿದರು.
ಕರ‍್ಯಕ್ರಮದಲ್ಲಿ ಡಾ. ಎಚ್.ಬಿ.ಪೂಜಾರ, ಬಸವರಾಜ ಗಣಪ್ಪನವರ, ಸಿ.ಎಂ.ಮಾರನಬಸರಿ, ಬಿ.ಬಿ.ಹೊಳಗುಂದಿ, ಪ್ರ.ತೋ.ನಾರಾಯಣಪೂರ, ರಾಜೇಶ್ವರಿ ಬಡ್ನಿ, ಸುರೇಶ ಕುಂಬಾರ, ಅಮರೇಶ ರಾಂಪೂರ, ವಿಶಾಲ ಪಾಟೀಲ, ಯು.ಎಸ್.ಕಣವಿ, ಸತೀಶ ಚನ್ನಪ್ಪಗೌಡ್ರ, ಖಂಡೆಮ್ಮನವರ ಮೊದಲಾದವರು ಭಾಗವಹಿಸಿದ್ದರು.